Advertisement

NASA Developing: ಶನಿಯ ಉಪ ಗ್ರಹದತ್ತ “ಹಾವಿನ’ ಸಂಚಾರ!

07:01 PM May 09, 2023 | Team Udayavani |

ವಾಷಿಂಗ್ಟನ್‌: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಪ್ರಯೋಗವೊಂದಕ್ಕೆ ಈಗ ನಾಸಾ ಮುಂದಾಗಿದೆ. ಶನಿ ಗ್ರಹದ ಉಪ ಗ್ರಹವಾದ “ಎನ್‌ಸೆಲಡಸ್‌’ನ ಅಂಗಳದಲ್ಲಿ ಅಧ್ಯಯನ ನಡೆಸಲು ಹಾವಿನ ಆಕಾರದ ರೊಬೋಟ್‌ವೊಂದನ್ನು ನಾಸಾ ಅಭಿವೃದ್ಧಿಪಡಿಸುತ್ತಿದೆ!

Advertisement

ಎನ್‌ಸೆಲಡಸ್‌ನಲ್ಲಿನ ಭೌಗೋಳಿಕ ರಚನೆಯನ್ನು ಅಭ್ಯಸಿಸಿ, ಅದು ವಾಸಯೋಗ್ಯವೇ, ಅಲ್ಲಿ ಜೀವಸಂಕುಲದ ಕುರುಹೇನಾದರೂ ಇದೆಯೇ ಎಂಬ ಬಗ್ಗೆ ಈ ರೊಬೋಟ್‌ ಅಧ್ಯಯನ ನಡೆಸಲಿದೆ.

ಈ ಅಧ್ಯಯನಕ್ಕೆಂದೇ ಎಕೊಬಯಾಲಜಿ ಎಕ್ಸ್‌ಟೆಂಟ್‌ ಲೈಫ್ ಸರ್ವೇಯರ್‌(ಈಲ್ಸ್‌) ಎಂಬ ಸಂಚಾರಿ ಸಾಧನವನ್ನು ನಾಸಾ ಅಭಿವೃದ್ಧಿಪಡಿಸುತ್ತಿದೆ. ಈ ಸಾಧನವು ನೋಡಲು ಥೇಟ್‌ ಹಾವಿನಂತಿರಲಿದೆ. ಉಬ್ಬು, ತಗ್ಗು ಸೇರಿದಂತೆ ಎಲ್ಲ ರೀತಿಯ ಭೂ ಪ್ರದೇಶದಲ್ಲೂ ಸುಗಮವಾಗಿ ಸಂಚರಿಸಲು ಆಗಬೇಕು ಎಂಬ ಕಾರಣದಿಂದಲೇ ಇದಕ್ಕೆ ಹಾವಿನ ಆಕಾರ ನೀಡಲಾಗುತ್ತಿದೆ.

ಏನಿದು ಎನ್‌ಸೆಲಡಸ್‌?
ಇದು ಶನಿ ಗ್ರಹದ ಉಪ ಗ್ರಹವಾಗಿದ್ದು, ಇದನ್ನು 1789ರಲ್ಲಿ ಆವಿಷ್ಕರಿಸಲಾಯಿತು. ಮಂಜುಗಡ್ಡೆ ಆವೃತ ಪುಟ್ಟ ಗ್ರಹ ಇದಾಗಿದ್ದು, ಇದನ್ನು “ವೈಜ್ಞಾನಿಕವಾಗಿ ಅತ್ಯಂತ ಆಸಕ್ತಿದಾಯಕ ತಾಣ’ ಎಂದು ಪರಿಗಣಿಸಲಾಗಿದೆ. ಎನ್‌ಸೆಲಡಸ್‌ನಲ್ಲಿನ ಮಂಜುಗಡ್ಡೆಯ ತಿರುಳಿನ ತಳಭಾಗದಲ್ಲಿ ದ್ರವರೂಪದ ಸಾಗರವೇ ಇದೆ. ಅಲ್ಲದೇ, ಇದರ ಮೇಲ್ಮೈ ತಾಪಮಾನ ಸುಮಾರು ಮೈನಸ್‌ 201 ಡಿ.ಸೆ.ನಷ್ಟಿದೆ ಎಂದು ಕ್ಯಾಸಿನಿ ಬಾಹ್ಯಾಕಾಶ ನೌಕೆಯ ದತ್ತಾಂಶ ಹೇಳಿದೆ.

ಅಧ್ಯಯನದ ಉದ್ದೇಶ
ಎನ್‌ಸೆಲಡಸ್‌ನಲ್ಲಿರುವ ಸಮುದ್ರ ಮತ್ತು ಆಂತರಿಕ ಉಷ್ಣತೆಯ ಕಾರಣಕ್ಕೆ ಇದು ವಾಸಯೋಗ್ಯವೇ ಎಂಬ ಪ್ರಶ್ನೆ ನಾಸಾಗೆ ಹುಟ್ಟಿದೆ. ಇದಕ್ಕೆ ಉತ್ತರ ಕಂಡುಕೊಳ್ಳಲೆಂದೇ ಈಲ್ಸ್‌ ಅನ್ನು ಕಳುಹಿಸಲಾಗುತ್ತದೆ. ಹಾವಿನ ರೂಪದಲ್ಲಿರುವ ಈಲ್ಸ್‌ನಲ್ಲಿ ಟ್ರ್ಯಾಕ್‌ಗಳು, ಬಿಗಿಹಿಡಿತದ ಮತ್ತು ನೀರಿನಡಿಯೂ ಸಂಚರಿಸಬಲ್ಲ ವ್ಯವಸ್ಥೆಯಿರುತ್ತದೆ. ಹೀಗಾಗಿ, ಎನ್‌ಸೆಲಡಸ್‌ನಲ್ಲಿನ ಸಮುದ್ರದ ಕಡೆಗೂ ಇದು ಹೋಗಲು ಸಾಧ್ಯವಾಗಲಿದೆ. ಈ ಮೂಲಕ ಹಿಂದೆಂದೂ ಆವಿಷ್ಕರಿಸಿರದ ಪ್ರದೇಶಗಳಲ್ಲಿ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎನ್ನುತ್ತದೆ ನಾಸಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next