ಮೇದಿನಿನಗರ್(ಜಾರ್ಖಂಡ್): ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಜಾರ್ಖಂಡ್ ನ ಪಲಾಮು ಜಿಲ್ಲೆಯ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದು, ಈ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಯಾದವ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೂರು ಪಕ್ಷಗಳಲ್ಲಿ ಪ್ರಾಮಾಣಿಕರೇ ಅಸ್ಪೃಶ್ಯರು: ಎಎಪಿ ಸೇರಿದ ಮುಖ್ಯಮಂತ್ರಿ ಚಂದ್ರು ಹೇಳಿಕೆ
ಮಂಗಳವಾರ (ಜೂನ್ 07) ಬೆಳಗ್ಗೆ ಲಾಲು ಪ್ರಸಾದ್ ಯಾದವ್ ಅವರು ವಾಸ್ತವ್ಯ ಹೂಡಿದ್ದ ಸರ್ಕ್ಯೂಟ್ ಹೌಸ್ ನಲ್ಲಿ ಉಪಹಾರ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ಗೋಡೆಯಲ್ಲಿದ್ದ ಫ್ಯಾನ್ ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿರುವುದಾಗಿ ಪಿಟಿಐ ವರದಿ ಮಾಡಿದೆ.
ಫ್ಯಾನ್ ಗೆ ಬೆಂಕಿ ಹೊತ್ತಿಕೊಂಡ ಬಳಿಕ ಲಾಲು ಪ್ರಸಾದ್ ಅವರ ಆಪ್ತ ಸಹಾಯಕರು ಬೆಂಕಿಯನ್ನು ನಂದಿಸಿರುವುದಾಗಿ ಮೂಲಗಳು ತಿಳಿಸಿವೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿರುವುದಾಗಿ ಪಾಲಾಮು ಡೆಪ್ಯುಟಿ ಕಮಿಷನರ್ ಶಶಿರಂಜನ್ ಪಿಟಿಐಗೆ ತಿಳಿಸಿದ್ದಾರೆ.
Related Articles
ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಹಾನಿಯಾಗಿಲ್ಲ ಎಂದು ವರದಿ ವಿವರಿಸಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಸುಮಾರು 13 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ (ಜೂನ್ 08) ವಿಶೇಷ ಕೋರ್ಟ್ ಗೆ ಹಾಜರಾಗಲು ಲಾಲು ಪ್ರಸಾದ್ ಯಾದವ್ ಅವರು ಸೋಮವಾರ ಮೇದಿನಿನಗರಕ್ಕೆ ಆಗಮಿಸಿದ್ದರು ಎಂದು ವರದಿ ತಿಳಿಸಿದೆ.