ತೆಲುಗು ನಟ ನರೇಶ್ ಹಾಗೂ ಕನ್ನಡ ನಟಿ ಪವಿತ್ರಾ ಲೋಕೇಶ್ ನಟಿಸಿರುವ “ಮತ್ತೆ ಮದುವೆ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ತೆಲುಗು ಚಿತ್ರರಂಗದವರು ಕನ್ನಡದ ಮೇಲೆ ಕಣ್ಣು ಹಾಕ್ತಿದ್ದಾರೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಶುರುವಾಗುವ ಟೀಸರ್‌ನಲ್ಲಿ ನರೇಶ್- ಪವಿತ್ರಾ ಮದುವೆಯ ಘಟನೆಗಳನ್ನು ಹೇಳಿದಂತಿದೆ.
ನರೇಶ್ ಮೂರನೇ ಪತ್ನಿ ನಡೆಸಿದ ಬೀದಿ ರಾದ್ಧಾಂತ, ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ, ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ ನಲ್ಲಿ ಬಿಚ್ಚಿಡಲಾಗಿದೆ, ಇದು ರಿಯಲ್ ಲೈಫ್ ಕಥೆಯಂತೆ ಭಾಸವಾಗಿದೆ. ವಿಜಯ ಕೃಷ್ಣ ಮೂವೀಸ್ ಬ್ಯಾನರ್‌ನಡಿ ನರೇಶ್ ನಿರ್ಮಾಣ ಮಾಡಿರುವ “ಮತ್ತೆ ಮದುವೆ’ ಚಿತ್ರಕ್ಕೆ ಎಂ.ಎಸ್. ರಾಜು ನಿರ್ದೇಶನ ಮಾಡಿದ್ದಾರೆ.
ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕಿದೆ.
“ಮತ್ತೆ ಮದುವೆ’ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ತಯಾರಾಗಿದ್ದು, ಮೇ ತಿಂಗಳಲ್ಲಿ ತೆರೆ ಕಾಣಲಿದೆ.