ಬೆಂಗಳೂರು: ಸಿರಿಧಾನ್ಯ ಮತ್ತು ಸಾವಯವದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸುವ ಮೂಲಕ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಕ್ಕೆ ಕರ್ನಾಟಕ ಅತ್ಯುತ್ತಮವಾಗಿ ಚಾಲನೆ ನೀಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶ್ಲಾ ಸಿದ್ದಾರೆ.
ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ಕೃಷಿ ಇಲಾಖೆಯ ಮುಂದಾಳತ್ವದಲ್ಲಿ ಜ.20ರಿಂದ 3 ದಿನಗಳ ಕಾಲ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಸಾವಯವ – 2023 ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿರಿಧಾನ್ಯಗಳನ್ನು ಉತ್ತೇಜಿಸಲು ಕರ್ನಾಟಕ ಸರಕಾರ ಜಾರಿಗೆ ತಂದಿರುವ ರೈತ ಸಿರಿ ಮಾದರಿ ಕಾರ್ಯಕ್ರಮ. ಸಿರಿಧಾನ್ಯಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ರಾಜ್ಯವು ಏಷ್ಯಾದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ರಾಜ್ಯದ ಕೃಷಿ ಸಚಿವ ಬಿ. ಸಿ. ಪಾಟೀಲ್ ಮಾತನಾಡಿ, ಸಿರಿಧಾನ್ಯ ಮೇಳವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಲಾಗಿದೆ. 203 ಕೋಟಿ ರೂ. ಮೌಲ್ಯದ 43 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮೂರು ದಿನಗಳಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. 250ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು ಎಂದು ಹೇಳಿದರು.
Related Articles
ಸಮಾರೋಪ ಸಮಾರಂಭದಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ, ಉತ್ತರ ಪ್ರದೇಶದ ಕೃಷಿ ಸಚಿವ ದಿನೇಶ್ ಪ್ರತಾಪ್ ಸಿಂಗ್, ಶಿಕ್ಷಣ ಸಚಿವ ಸೂರ್ಯ ಪ್ರತಾಪ್ ಶಾಹಿ ಮುಂತಾದವರು ಪಾಲ್ಗೊಂಡಿದ್ದರು.
ಒಡಂಬಡಿಕೆಗಳಿಗೆ ಸಹಿ
ಮೇಳದಲ್ಲಿ ಸುಮಾರು 202 ಕೋಟಿ ರೂ. ಮೌಲ್ಯದ 43 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. 139 ಸಭೆಗಳು ನಡೆದಿದೆ. ದೇಶ ವಿದೇಶಗಳ 68 ಮಾರುಕಟ್ಟೆದಾರರು, 59 ಉತ್ಪಾದಕರು ಭಾಗಿಯಾಗಿದ್ದಾರೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. 19,214 ಮೆಟ್ರಿಕ್ ಟನ್ ಉತ್ಪನ್ನಗಳ ವಹಿವಾಟು ನಡೆದಿದೆ.
ಸಿರಿಧಾನ್ಯ ಮತ್ತು ಸಿರಿಧಾನ್ಯ ವರ್ಧಿತ ಉತ್ಪನ್ನಗಳಿಗೆ ಗರಿಷ್ಠ ಮಾರುಕಟ್ಟೆ ಲಭಿಸಿದೆ. ಉಳಿದಂತೆ ಕ್ರಮವಾಗಿ ಸಾಂಬಾರು ಪದಾರ್ಥಗಳು, ಬೇಳೆಕಾಳು, ಬೆಲ್ಲ ಮತ್ತು ಬೆಲ್ಲದ ಉತ್ಪನ್ನಗಳು, ಎಣ್ಣೆ ಮತ್ತು ಎಣ್ಣೆಕಾಳುಗಳಿಗೆ ಹೆಚ್ಚಿನ ಮಾರುಕಟ್ಟೆ ಲಭಿಸಿದೆ. ದಾವಣಗೆರೆ, ಬಾಗಲಕೋಟೆ, ಕೋಲಾರ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳು ಗರಿಷ್ಠ ವಹಿವಾಟು ನಡೆಸಿವೆ.