Advertisement

ಅ. 13ಕ್ಕೆ ಗತಿಶಕ್ತಿ ಮಾಸ್ಟರ್‌ ಪ್ಲಾನ್‌ ಲೋಕಾರ್ಪಣೆ

11:21 PM Oct 09, 2021 | Team Udayavani |

ನವದೆಹಲಿ: ದೇಶದ ನಾನಾ ಕೈಗಾರಿಕಾ ವಲಯಗಳ ನಡುವೆ ಅಡೆತಡೆಯಿಲ್ಲದ ಸಂಪರ್ಕ ಕಲ್ಪಿಸಲು, ದೇಶದ ನಾನಾ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯ ಸಂಬಂಧಿತ ಯೋಜನೆಗಳನ್ನು 2025ರೊಳಗೆ ಪೂರ್ಣಗೊಳಿಸಲು ಹಾಗೂ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯ ಗುರಿಯನ್ನು ಈಡೇರಿಸುವ ಉದ್ದೇಶದಿಂದ “ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ‘ ಎಂಬ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

ಇದೇ 13ರಂದು ಈ ಆನ್‌ಲೈನ್‌ ಪೋರ್ಟಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಯೋಜನೆಗಾಗಿ, 100 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಯೋಜನೆಯ ಗುರಿಗಳನ್ನು ಈಡೇರಿಸಲು ಕೇಂದ್ರ ಸರ್ಕಾರದ ಒಟ್ಟು 16 ಇಲಾಖೆಗಳು ಈ ಯೋಜನೆಯಲ್ಲಿ ಕೈ ಜೋಡಿಸುತ್ತಿರುವುದು ವಿಶೇಷ. ಭಾರತದ ಆಡಳಿತ ವೈಖರಿಯಲ್ಲಿ ಹಿಂದೆಂದೂ ಕಾಣದಂಥ ಮಹತ್ವದ ಬದಲಾವಣೆಯನ್ನು ಗತಿಶಕ್ತಿ ಯೋಜನೆ ನಿರೂಪಿಸಲಿದೆ ಎಂದು ಕೇಂದ್ರದ ಹಿರಿಯ ಅಧಿಕಾರಿಗಳು ಬಣ್ಣಿಸಿದ್ದಾರೆ.

ಯೋಜನೆಯ ಹೈಲೈಟ್ಸ್‌
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾಸ್ಕರಾಚಾರ್ಯ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಫಾರ್‌ ಸ್ಪೇಸ್‌ ಅಪ್ಲಿಕೇಷನ್ಸ್‌ ಆ್ಯಂಡ್‌ ಜಿಯೋ- ಇನ್ಫಾರ್ಮೇಟಿಕ್ಸ್‌ ಸಂಸ್ಥೆಯ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಸಂಸ್ಥೆಯೇ ಅದನ್ನು ನಿರ್ವಹಿಸಲಿದೆ. ಪ್ರತಿಯೊಂದು ರಾಜ್ಯದ ಭೌಗೋಳಿಕ ವ್ಯಾಪ್ತಿಯ ಸಮಗ್ರ ಮಾಹಿತಿಯುಳ್ಳ, ಜಿಯೋಗ್ರಾಫಿಕ್‌ ಇನ್ಫಾರ್ಮೇಷನ್‌ ಸಿಸ್ಟಂ ತಂತ್ರಜ್ಞಾನದ ಮೂಲಕ ಇಡೀ ದೇಶದ ಭೌಗೋಳಿಕ ವಿಶೇಷತೆಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ. ಎಲ್ಲಾ ರಾಜ್ಯಗಳೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:ನರೇಂದ್ರ ಮೋದಿಯೇ ಮತ್ತೆ ಪ್ರಧಾನಿಯಾಗಲಿ!

Advertisement

2020-21ರವರೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯ ಯೋಜನೆಗ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಯೋಜನೆಗಳೊಂದಿಗೆ ಸಮ್ಮಿಳಿತಗೊಳಿಸಲಾಗಿದೆ. ಜೊತೆಗೆ, ಈ ಯೋಜನೆಗಳನ್ನು 2025ರೊಳಗೆ ಮುಗಿಸುವ ನಿಟ್ಟಿನಲ್ಲಿ ಕೇಂದ್ರದ 16 ಇಲಾಖೆಗಳಿಂದ ಸಹಾಯ ಮತ್ತು ಸಹಕಾರಗಳ ವಿವರಣೆಗಳೂ ಇಲ್ಲಿ ಲಭ್ಯವಾಗಲಿವೆ.

ಭಾಷಣದಲ್ಲಿ ಪ್ರಸ್ತಾಪಿಸಿದ್ದ ಮೋದಿ
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಗತಿಶಕ್ತಿ ಯೋಜನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದರು. ರೈಲ್ವೆ, ರಸ್ತೆ ಮತ್ತು ಹೆದ್ದಾರಿ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ, ಇಂಧನ, ಟೆಲಿಕಾಂ, ಹಡಗು, ನಾಗರಿಕ ವಿಮಾನಯಾನ ಸೇರಿ 16 ಕೇಂದ್ರ ಇಲಾಖೆಗಳ ಸಹಭಾಗಿತ್ವದಲ್ಲಿ ಈ ಪೋರ್ಟಲ್‌ ಕೆಲಸ ಮಾಡುತ್ತದೆ. ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುವ ಕೈಗಾರಿಕಾ ಪಾರ್ಕ್‌ಗಳನ್ನೂ ಈ ಪೋರ್ಟಲ್‌ನ ವ್ಯಾಪ್ತಿಗೆ ತರಲಾಗುತ್ತದೆ. ಎಲ್ಲಾ ರಾಜ್ಯ ಸರ್ಕಾರಗಳೂ ಈ ಯೋಜನೆಗೆ ಕೈ ಜೋಡಿಸುತ್ತವೆ ಎಂದು ವಿವರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next