Advertisement

ಜೆಡಿಎಸ್‌ ವರಿಷ್ಠರ ಕಾಲೆಳೆದ ಮೋದಿ

05:00 AM Apr 26, 2019 | mahesh |

ಹೊಸದಿಲ್ಲಿ:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ಪ್ರಧಾನಿ ಹುದ್ದೆಗೇರುವ ಕನಸು ಕಾಣುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಜೆಡಿಎಸ್‌ ವರಿಷ್ಠರ ಕಾಲೆಳೆದಿದ್ದಾರೆ.

Advertisement

ಬಿಹಾರದ ದರ್ಭಾಂಗದಲ್ಲಿ ಗುರುವಾರ ಚುನಾವಣ ಪ್ರಚಾರ ರ್ಯಾಲಿ ನಡೆಸುವ ವೇಳೆ ಪ್ರಧಾನಿ ಮೋದಿ ಅವರು ಕರ್ನಾಟಕ ಮತ್ತು ಪ್ರಾದೇಶಿಕ ಪಕ್ಷಗಳನ್ನು ಪ್ರಸ್ತಾವಿಸಿ ಈ ಮಾತುಗಳ ನ್ನಾಡಿದ್ದಾರೆ. ಕೆಲವೊಂದು ಪ್ರಾದೇಶಿಕ ಪಕ್ಷಗಳು ಕೇವಲ 40, 20 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಅದರಲ್ಲೂ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಅತ್ಯಲ್ಪ ಅಂದರೆ 8 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಆದರೂ, ಅದರ ನಾಯಕರು ಪ್ರಧಾನಿ ಹುದ್ದೆಗೇರಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲ, ಇಂಥ ನಾಯಕರಿಗೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ವಹಿಸಲು ಸಾಧ್ಯವೇ ಎಂದೂ ಮೋದಿ ಪ್ರಶ್ನಿಸಿದ್ದಾರೆ. ಜತೆಗೆ, ನಿಮ್ಮ ಚೌಕಿದಾರನಿಗೆ ನೀವು ಮತ ಹಾಕಿದರೆ ಇಂಥ ಎಲ್ಲ ಕೆಲಸಗಳನ್ನೂ ನಾನು ಮಾಡುವೆ ಎಂದಿದ್ದಾರೆ.

ಚೇಲಾಗಳಿಗೆ ಮಾತ್ರ
ಇದೇ ವೇಳೆ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಾವು ರೈತರ ಸಾಲ ಮನ್ನಾ ಮಾಡಿದ್ದು, ಅಧಿಕಾರಕ್ಕೆ ಬಂದರೆ ದೇಶಾ ದ್ಯಂತ ಸಾಲ ಮನ್ನಾ ಮಾಡಲಾಗುತ್ತದೆ ಎಂಬ ಕಾಂಗ್ರೆಸ್‌ ಆಶ್ವಾಸನೆಯೇ ಸುಳ್ಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಯಾವುದೇ ಬಡ ದಲಿತ ಅಥವಾ ಆದಿವಾಸಿಯು ಸಾಲ ಮನ್ನಾದ ಪ್ರಯೋಜನ ಪಡೆದಿಲ್ಲ. ಕೇವಲ ಕಾಂಗ್ರೆಸ್‌ನ ಚೇಲಾಗಳಿಗೆ ಮಾತ್ರ ಲಾಭವಾಗಿದೆ ಎಂದಿದ್ದಾರೆ.

ಮೇ 1: ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರ್ಯಾಲಿ
ಪ್ರಧಾನಿ ಮೋದಿ ಮೇ 1ರಂದು ಅಯೋಧ್ಯೆಯಲ್ಲಿ ಚುನಾವಣ ಪ್ರಚಾರ ರ್ಯಾಲಿ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಅಯೋಧ್ಯೆಯು ಉತ್ತರಪ್ರದೇಶದ ಫೈಜಾಬಾದ್‌ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಮೇ 6ರಂದು ಇಲ್ಲಿ ಮತದಾನ ನಡೆಯಲಿದೆ. ರಾಮಮಂದಿರ ವಿವಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರ್ಯಾಲಿ ಹೆಚ್ಚಿನ ಮಹತ್ವ ಪಡೆದಿದೆ.

ವೈಫ‌ಲ್ಯ ಮುಚ್ಚಲು ರೋಡ್‌ಶೋ
ಸಂಸದರಾಗಿ ತಮ್ಮ ವೈಫ‌ಲ್ಯಗಳನ್ನು ಮುಚ್ಚಿಹಾಕುವ ಉದ್ದೇಶದಿಂದಲೇ ಪ್ರಧಾನಿ ಮೋದಿ, ತಮ್ಮ ಕ್ಷೇತ್ರ ವಾರಾಣಸಿಯಲ್ಲಿ ರೋಡ್‌ ಶೋ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ. ‘2014ರ ಚುನಾವಣೆಯಲ್ಲಿ ವಾರಾಣಸಿ ಯಿಂದ ಗೆದ್ದಿದ್ದ ಪ್ರಧಾನಿ, ಅಲ್ಲಿನ ಮತದಾರರ ನಂಬಿಕೆಯನ್ನು ಉಳಿಸಿಕೊಂ ಡಿಲ್ಲ. ಗಂಗಾ ನದಿಯನ್ನು ಶುದ್ಧ ಮಾಡುತ್ತೇವೆ ಎಂದು ನೀಡಿದ್ದ ಆಶ್ವಾಸನೆ ಸೇರಿದಂತೆ ಯಾವ ಆಶ್ವಾಸನೆಗಳನ್ನೂ ನನಸು ಮಾಡಿಲ್ಲ. ತಮ್ಮ ವೈಫ‌ಲ್ಯಗ ಳನ್ನು ಮುಚ್ಚಿಹಾಕಲೆಂದೇ ಮೋದಿಯವರು ಅಲ್ಲಿ ಗುರುವಾರ ರೋಡ್‌ ಶೋ ನಡೆಸಿದ್ದಾರೆ’ ಎಂದು ಕಾಂಗ್ರೆಸ್‌ನ ರಾಗಿಣಿ ನಾಯಕ್‌ ಹೇಳಿದ್ದಾರೆ.

Advertisement

ಉಗ್ರವಾದ ಕಿತ್ತೆಸೆದರೆ ಬಡತನ ನಿರ್ಮೂಲನೆ ಸಾಧ್ಯ
ಚುನಾವಣ ಪ್ರಚಾರದಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ಭದ್ರತೆಯ ವಿಚಾರ ಮಾತನಾಡುತ್ತಾರೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಪಿಎಂ ಮೋದಿ, ‘ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆದರೆ ಮಾತ್ರವೇ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯ’ ಎಂದು ಹೇಳಿದ್ದಾರೆ.

ಗುರುವಾರ ಬಿಹಾರದ ದರ್ಭಾಂಗಾ ಮತ್ತು ಉತ್ತರಪ್ರದೇಶದ ಬಂದಾದಲ್ಲಿ ಚುನಾವಣ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆ ಎನ್ನುವುದು ಅತ್ಯಂತ ಮಹತ್ವದ ಸಂಗತಿಯಾಗಿದ್ದು, ಅದಕ್ಕಾಗಿ ವೆಚ್ಚ ಮಾಡಲಾಗುವ ಹಣವನ್ನು ಬಡವರನ್ನು ಬಡತನದ ಕೂಪದಿಂದ ಮೇಲೆತ್ತಲು ಬಳಸಬಹುದಾಗಿದೆ ಎಂದಿದ್ದಾರೆ. ಕಳೆದ 40 ವರ್ಷಗಳಲ್ಲಿ ದೇಶವು ಭದ್ರತಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲೆಂದೇ ಬಹಳಷ್ಟು ಸಂಪನ್ಮೂಲಗಳನ್ನು ವ್ಯಯಿಸಿದೆ. ಆ ಹಣವನ್ನು ಶಾಲೆಗಳ ನಿರ್ಮಾಣ, ಆಸ್ಪತ್ರೆ ನಿರ್ಮಾಣಕ್ಕೆ ಬಳಸಬಹುದಾಗಿತ್ತು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಲಾಟೀನಿನ ಕಾಲ ಮುಗೀತು: ಬಿಹಾರದಲ್ಲಿ ವಿಪಕ್ಷ ಆರ್‌ಜೆಡಿಗೆ ಟಾಂಗ್‌ ನೀಡಿದ ಪ್ರಧಾನಿ ಮೋದಿ, ‘ನಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಮೂಲೆ ಮೂಲೆಗೂ ವಿದ್ಯುತ್‌ ಸಂಪರ್ಕ ಸಿಕ್ಕಿದೆ. ಹೀಗಾಗಿ ಲಾಟೀನಿನ ಕಾಲವೆಲ್ಲ ಮುಗಿಯಿತು’ ಎಂದಿದ್ದಾರೆ. ಈ ಮೂಲಕ ಲಾಟೀನು ಚಿಹ್ನೆಯನ್ನು ಹೊಂದಿರುವ ಆರ್‌ಜೆಡಿಯ ಕಾಲೆಳೆದಿದ್ದಾರೆ. ಲಾಟೀನುವಾಲಾಗಳು ಕೂಡ ಅಧಿಕಾರದಲ್ಲಿದ್ದಾಗ ಜನರ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬಹುದಿತ್ತು. ಆದರೆ, ಅವರು ತಮ್ಮ ತಮ್ಮ ಮನೆ ಬೆಳೆಗಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು. ಅವರಲ್ಲಿ ಕೆಲವರು ಫಾರ್ಮ್ ಹೌಸ್‌, ಮತ್ತೆ ಕೆಲವರು ಮಾಲ್ ನಿರ್ಮಿಸುತ್ತಿದ್ದರು. ಇನ್ನೂ ಕೆಲವರು ರೈಲ್ವೆ ಟೆಂಡರ್‌ ಮೂಲಕ ಹಣ ಮಾಡುತ್ತಿದ್ದರು ಎಂದೂ ಮೋದಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next