Advertisement

ಪಿಎಂ ಕೇರ್‌ ನಿಧಿಗೆ ನೆರವಾಗಲು ಮೋದಿ ಮನವಿ

09:15 AM Mar 30, 2020 | Sriram |

ಹೊಸದಿಲ್ಲಿ/ವಾಷಿಂಗ್ಟನ್‌: ಕೋವಿಡ್‌ 19 ವಿಚಾರದಲ್ಲಿ ಅಸಡ್ಡೆ ಯಿಂದಲೇ ನಡೆದುಕೊಳ್ಳುತ್ತಿರುವ ಅಮೆರಿಕ ಈಗ ಅದಕ್ಕೆ ಬೆಲೆ ತೆರುತ್ತಿದ್ದು, ಸೋಂಕುಪೀಡಿತರ ಸಂಖ್ಯೆ 1 ಲಕ್ಷಕ್ಕೆ ಏರಿದೆ. ಮೃತರ ಸಂಖ್ಯೆ 1,700 ಮುಟ್ಟಿದೆ. ಸೋಂಕುಪೀಡಿತರ ಸಂಖ್ಯೆಯಲ್ಲಿ ಅಮೆರಿಕವೀಗ ಚೀನವನ್ನೂ ಮೀರಿಸಿದ್ದು, ನ್ಯೂಯಾರ್ಕ್‌ ಕೇಂದ್ರಬಿಂದುವಾಗಿದೆ.

Advertisement

ನ್ಯೂಯಾರ್ಕ್‌ ಕೋವಿಡ್‌ 19 ಹಿಡಿತ ದಲ್ಲಿದ್ದು, 26,697 ಪ್ರಕರಣಗಳು ದೃಢ ಪಟ್ಟಿವೆ. ಗುರುವಾರ ಮತ್ತು ಶುಕ್ರವಾರ 85 ಮಂದಿ ಸಾವನ್ನಪ್ಪಿದ್ದಾರೆ. ಈ ನಗರವೊಂದರಲ್ಲೇ ಮೃತರ ಸಂಖ್ಯೆ 450ಕ್ಕೆ ಏರಿದೆ. ಇಲ್ಲಿ ಪ್ರತೀ 17 ನಿಮಿಷಗಳಿಗೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ನಗರದ ಎಲ್ಲ ಆಸ್ಪತ್ರೆಗಳೂ ತುಂಬಿ ತುಳುಕುತ್ತಿವೆ.

ಇದೇವೇಳೆ ಕ್ವೀನ್ಸ್‌ನಲ್ಲಿ 8 ಸಾವಿರ, ಬ್ರೋಕ್ಲಿನ್‌ನಲ್ಲಿ 6 ಸಾವಿರ, ಕ್ಯಾಲಿ ಫೋರ್ನಿಯಾ ಮತ್ತು ಬ್ರಾಂಕ್ಸ್‌ ಮತ್ತು ಮ್ಯಾನ್‌ಹಟನ್‌ಗಳಲ್ಲಿ ತಲಾ 4 ಸಾವಿರ ಪ್ರಕರಣಗಳು ದೃಢಪಟ್ಟಿವೆ.

ಬ್ರಿಟನ್‌ನಲ್ಲೂ ಪರದಾಟ
ಸಾಮಾಜಿಕ ಅಂತರದ ಪರಿಕಲ್ಪನೆ ಬ್ರಿಟನ್‌ನಲ್ಲೂ ತೊಂದರೆ ಉಂಟು ಮಾಡಿದೆ. ಎಚ್ಚರಿಕೆಗಳನ್ನು ಅಲ್ಲಿಯ ಜನ ಪಾಲಿಸಿಲ್ಲ.

ಪ್ರಧಾನಿ ಮತ್ತು ಆರೋಗ್ಯ ಸಚಿವರಿಗೆ ಕೋವಿಡ್‌ 19 ದೃಢಪಟ್ಟ ಬಳಿಕ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗುತ್ತಿವೆ. ಸದ್ಯ ಬ್ರಿಟನ್‌ನಲ್ಲಿ 14 ಸಾವಿರಕ್ಕೂ ಹೆಚ್ಚು ಪ್ರಕರಣ ಮತ್ತು 1,000ಕ್ಕೂ ಹೆಚ್ಚು ಸಾವು ಸಂಭವಿಸಿವೆ.

Advertisement

900 ದಾಟಿದ ಪ್ರಕರಣ
ಭಾರತದಲ್ಲಿ ಕೋವಿಡ್‌ 19 ಪೀಡಿತರ ಸಂಖ್ಯೆ 918ಕ್ಕೆ ಮುಟ್ಟಿದೆ. ಕಳೆದ 24 ತಾಸುಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 180, ಕೇರಳದಲ್ಲಿ 176 ಪ್ರಕರಣಗಳು ದೃಢಪಟ್ಟಿವೆ. ತೆಲಂಗಾಣದಲ್ಲಿ 74 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ತಮಿಳು ನಾಡಿನ ಐಸೋಲೇಟೆಡ್‌ ವಾರ್ಡ್‌ನಲ್ಲಿ ಇರಿಸಲಾಗಿದ್ದ ಮೂವರು ಸಾವನ್ನಪ್ಪಿದ್ದರೂ ಸೋಂಕಿ ನಿಂದಲೇ ಮೃತಪಟ್ಟಿರುವುದು ಖಚಿತವಾಗಿಲ್ಲ.

ಊರಿನತ್ತ ವಲಸಿಗರು
ಕೋವಿಡ್‌ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ ಡೌನ್‌ ಘೋಷಿಸಲಾಗಿದ್ದು, ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಒಂದು ಕಡೆ ನಗರಗಳಲ್ಲಿಯೇ ಉಳಿಯಲು ವ್ಯವಸ್ಥೆ ಇಲ್ಲ, ಊರಿಗೆ ತೆರಳಲು ಸಾರಿಗೆ ಸಂಪರ್ಕವೂ ಇಲ್ಲ. ಹೀಗಾಗಿ ಸಾವಿರಾರು ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮೂರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದ್ದು, ಇವರನ್ನು ಊರುಗಳಿಗೆ ತಲುಪಿಸಲು ವ್ಯವಸ್ಥೆ ಮಾಡುವಂತೆ ಆಯಾ ರಾಜ್ಯ ಸರಕಾರಗಳಿಗೆ ಸೂಚಿಸಿದೆ.

ಪಿಎಂ ಕೇರ್‌ಗೆ ಹಣ ನೀಡಿ
ಕೋವಿಡ್‌ 19 ಹಿಮ್ಮೆಟ್ಟಿಸಿ
ಸ್ವಸ್ಥ ಭಾರತ ನಿರ್ಮಿಸಲು ಪಿಎಂ ಕೇರ್‌ಗೆ ಸಹಾಯಧನ ಕೋರಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ಈ ಸಂಬಂಧ ಪಿಎಂ ಕೇರ್‌ ಎಂಬ ಹೊಸ ಖಾತೆ ತೆರೆಯಲಾಗಿದೆ. ಕೋವಿಡ್‌ 19 ನಿಯಂತ್ರಣ, ಸಂತ್ರ ಸ್ತರ ಕ್ಷೇಮ ಮತ್ತು ಆರೋಗ್ಯ ಯೋಧರಿಗೆ ಸಹಾಯವಾಗಿ ಈ ನಿಧಿ ಬಳಕೆಯಾಗಲಿದೆ. “ಪಿಎಂ ಕೇರ್‌ಗೆ ನೆರವಾಗಿ, ಭವಿಷ್ಯದ ಯಾತನಾಮಯ ದಿನಗಳನ್ನು ತಪ್ಪಿಸೋಣ. ಮುಂದಿನ ಪೀಳಿಗೆಗಾಗಿ ಆರೋಗ್ಯಪೂರ್ಣ ಭಾರತ ಕಟ್ಟೋಣ’ ಎಂದು ಮೋದಿ ಹೇಳಿದ್ದಾರೆ.

ಕೋವಿಡ್‌ 19 ಮತ್ತು ಕೇಂದ್ರ ಬಿಂದು
ದಿನದಿಂದ ದಿನಕ್ಕೆ ಕೋವಿಡ್‌ 19 ಉಲ್ಬಣಿಸುತ್ತಲೇ ಇದೆ. ಜಗತ್ತಿನಾದ್ಯಂತ ವಿವಿಧ ದೇಶಗಳ ಸರಕಾರಗಳು ಎಂತಹುದೇ ಕ್ರಮ ತೆಗೆದುಕೊಂಡರೂ ಇದು ಹಬ್ಬುತ್ತಿರುವುದು ಮಾತ್ರ ನಿಂತಿಲ್ಲ. ಕೋವಿಡ್‌ 19 ಹೆಚ್ಚು ವ್ಯಾಪಿಸಿರುವುದೆಲ್ಲಿ? ಹೇಗೆ ಹಬ್ಬಿದೆ ಎಂಬುದರ ಒಂದು ನೋಟ ಇಲ್ಲಿದೆ.

ಈ ನಾಲ್ಕು ದೇಶಗಳು
ಜಗತ್ತಿನಾದ್ಯಂತ ಕೋವಿಡ್‌ 19 ಸೋಂಕುಪೀಡಿತರ ಸಂಖ್ಯೆ 6 ಲಕ್ಷ ದಾಟಿದೆ. ವಿಚಿತ್ರವೆಂದರೆ ಇದರಲ್ಲಿ ಅರ್ಧದಷ್ಟು ಪ್ರಕರಣಗಳು ಕೇವಲ ನಾಲ್ಕು ದೇಶಗಳಲ್ಲಿ ಕಾಣಿಸಿಕೊಂಡಿವೆ.

ಅಮೆರಿಕ 16.35%
ಇಟಲಿ 14.98%
ಚೀನ 14.08%
ಸ್ಪೇನ್‌ 11.09%.
ಇತರ 43.50%

ಇಟಲಿ ಹಾದಿಯಲ್ಲಿ ಟರ್ಕಿ?
ವಿಚಿತ್ರವೆಂದರೆ ಟರ್ಕಿಯಲ್ಲಿ ಮೊದಲ ಕೋವಿಡ್‌ 19 ಪ್ರಕರಣ ಪತ್ತೆಯಾದದ್ದು ಮಾ.11ರಂದು. ಆದರೆ ಮಾ.28ರ ವೇಳೆಗೆ ಈ ದೇಶದಲ್ಲಿ ಸೋಂಕುಪೀಡಿತರ ಸಂಖ್ಯೆ 5 ಸಾವಿರಕ್ಕೂ ಹೆಚ್ಚಿದೆ. ಟರ್ಕಿಯಲ್ಲಿ ಪ್ರತಿ ದಿನ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

ಇಟಲಿ, ಸ್ಪೇನ್‌ನಲ್ಲೇ ಸಾವು ಹೆಚ್ಚು ಮೊದಲಿಗೆ ಚೀನ, ಈಗ ಅಮೆರಿಕದಲ್ಲಿ ಅತಿ ಹೆಚ್ಚು ಕೋವಿಡ್‌ 19 ಪ್ರಕರಣಗಳು ಕಾಣಿಸಿ ಕೊಂಡಿದ್ದರೂ ಅತಿ ಹೆಚ್ಚು ಸಾವು ಸಂಭವಿಸಿರುವುದು ಮಾತ್ರ ಇಟಲಿ ಮತ್ತು ಸ್ಪೇನ್‌ಗಳಲ್ಲಿ.

ಕೋವಿಡ್‌ 19 ಸಾವು (ಪ್ರತಿ 10 ಲಕ್ಷ ಮಂದಿಗೆ)

ಇಟಲಿ 151
ಸ್ಪೇನ್‌106
ಇರಾನ್‌ 28
ಫ್ರಾನ್ಸ್‌ 26

ಪರೀಕ್ಷೆಯಲ್ಲಿ ಅಮೆರಿಕ ಹಿಂದೆ
ಅಮೆರಿಕದಲ್ಲಿ ಸದ್ಯ ಪ್ರತಿ 10 ಲಕ್ಷ ಮಂದಿಯಲ್ಲಿ 313 ಜನರಿಗೆ ಮಾತ್ರ ಸೋಂಕು ಪರೀಕ್ಷೆ ನಡೆಯುತ್ತಿದೆ. ಚೀನದಲ್ಲಿ ಪ್ರತಿ 10 ಲಕ್ಷ ಮಂದಿಯಲ್ಲಿ 2,800 ಮತ್ತು ಇಟಲಿಯಲ್ಲಿ 3,499 ಮಂದಿಗೆ ಪರೀಕ್ಷೆ ನಡೆಸಲಾಗಿದೆ.

ಬಿಜೆಪಿ ಸಂಸದರಿಂದ 1 ಕೋಟಿ ಕೋವಿಡ್‌ 19 ಕೊರೊನಾ ನಿಧಿಗೆ ತಲಾ 1 ಕೋ.ರೂ. ನೀಡಲಿದ್ದಾರೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಂಸದರಿಗೆಲ್ಲ ಸೂಚನೆ ನೀಡಿದ್ದಾರೆ.

ಅಕ್ಷಯ್‌ ಕುಮಾರ್‌ 25 ಕೋಟಿ
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡುತ್ತಿದ್ದಂತೆಯೇ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಿಧಿಗೆ 25 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿ ಮಾದರಿಯಾಗಿದ್ದಾರೆ.

ಪಿಎಂ ಖಾತೆ ವಿವರ
ಖಾತೆ ಹೆಸರು: PM CARES ಖಾತೆ ಸಂಖ್ಯೆ: 2121ಕM20202
ಐಎಫ್ಎಸ್‌ಸಿ ಕೋಡ್‌: SBINN0000691 ಸ್ವಿಫ್ಟ್ ಕೋಡ್‌: SBININBB104
ಬ್ಯಾಂಕ್‌, ಶಾಖೆ: State Bank of India, New Delhi Main Branch
ಯುಪಿಐ ಐಡಿ: pmcares@sbi

Advertisement

Udayavani is now on Telegram. Click here to join our channel and stay updated with the latest news.

Next