ಶಿಡ್ಲಘಟ್ಟ: ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿ ಎ ಗ್ರೇಡ್ ಪಡೆದುಕೊಂಡು ಅಗ್ರಸ್ಥಾನ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆ ಉದ್ಯೋಗ ಖಾತ್ರಿಯೋಜನೆಯನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಿ ಬದುಗಳ ನಿರ್ಮಾಣದಲ್ಲಿ ಸಹ ಅಗ್ರಸ್ಥಾನ ಹೊಂದಿದೆ.
ಜಿಲ್ಲೆಯಲ್ಲಿ ಅಂರ್ತಜಲಮಟ್ಟ ವೃದ್ಧಿಗೊಳಿಸಲು ನರೇಗಾ ಯೋಜನೆಯಡಿ ಪ್ರಾಜೆಕ್ಟ್-100 ಯೋಜನೆ ಮೂಲಕ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್, ಅಂಗನವಾಡಿ ಕಟ್ಟಡಗಳ ನಿರ್ಮಾಣ ಸಹಿತ ರೈತರು ಮಳೆನೀರು ಸಂಗ್ರಹಿಸಲು ಮತ್ತು ಭೂಮಿಯ ಫಲವತ್ತತೆ ಹೆಚ್ಚಿಸಲು ಬದುಗಳನ್ನು ನಿರ್ಮಿಸಿ ಇದೀಗ ಜಿಲ್ಲೆ ಅಗ್ರಸ್ಥಾನ ಪಡೆಯುವ ಮೂಲಕ ಮತ್ತೂಂದೆಡೆ ಸಾಧನೆ ಮಾಡಿದೆ.
ಅಂತರ್ಜಲ ವೃದ್ಧಿ: ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಎಂಬ ಧ್ಯೇಯ ವಾಕ್ಯದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷೆಗಿಂತಲೂ ಅಧಿಕವಾಗಿ ರೈತರ ಹೊಲದಲ್ಲಿ ಬದುಗಳನ್ನು ನಿರ್ಮಿಸಿ ದಾಖಲೆ ಮಾಡಲಾಗಿದೆ. ಇದರಿಂದ ಅಂರ್ತಜಲಮಟ್ಟ ವೃದ್ಧಿಗೊಳ್ಳುವ ಜೊತೆಗೆ ಉತ್ತಮ ಬೆಳೆ ಬೆಳೆಯಲು ಸಹಕಾರಿ ಯಾಗಿದೆ. ಕೋವಿಡ್ ಸಂಕಷ್ಟದಲ್ಲಿ ಸಿಲುಕಿರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ವರದಾನವಾಗಿರುವ ನರೇಗಾ ಯೋಜನೆ ಇದೀಗ ರೈತರ ಪಾಲಿಗೂ ಸಹ ವರದಾನವಾಗಿದೆ.
ಜಿಪಂ ಸಿಇಒ ವಿಶೇಷ ಆಸಕ್ತಿ: ಜಿಲ್ಲೆಯಲ್ಲಿ ಎಲ್ಲಾ ಯೋಜನೆಗಳ ಜೊತೆ ಜೊತೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜಿಲ್ಲೆ ಗಮನ ಸೆಳೆಯುವಂತೆ ಮಾಡಿದ ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್ ಅವರ ವಿಶೇಷ ಆಸಕ್ತಿಯಿಂದ ರೈತರಿಗೆ ನರೇಗಾ ಯೋಜನೆಯಿಂದ ಅನುಕೂಲ ಕಲ್ಪಿಸಲು ಬದುಗಳು ಮತ್ತು ಕೃಷಿ ಹೊಂಡಗಳನ್ನು ನಿರ್ಮಿಸಲು ಯೋಜನೆ ರೂಪಿಸಿ ಬದುಗಳ ನಿರ್ಮಾಣದಲ್ಲಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದೆ.
ಪರಿಣಾಮಕಾರಿ ಅನುಷ್ಠಾನ: ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಬದುಗಳ ನಿರ್ಮಾಣದಲ್ಲಿ ಪ್ರಥಮವಾಗಿರುವುದಕ್ಕೆ ಸಂತೋಷವಾಗಿದೆ. ಅದಕ್ಕಾಗಿ ಶ್ರಮಿಸಿದ ಜಿಪಂ ಸಿಇಒ ಹಾಗೂ ಅಧಿಕಾರಿಗಳಿಗೆ ಅಭಿನಂದಿಸುತ್ತಾ ಜಿಲ್ಲೆಯ ಹಿಂದಿನ ಡೀಸಿ ಹಾಗೂ ಆರ್‌ಡಿಪಿಆರ್ ಇಲಾಖೆಯ ಆಯುಕ್ತ ಅನಿರುದ್ಧ್ ಶ್ರವಣ್ ಅವರ ಪರಿಶ್ರಮದಿಂದ ರಾಜ್ಯದಲ್ಲಿ ರೈತಪರ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಭಕ್ತರಹಳ್ಳಿ ಭೈರೇಗೌಡ ಹೇಳಿದ್ದಾರೆ.
ಗೌರಿಬಿದನೂರಲ್ಲಿ ಅತಿ ಹೆಚ್ಚು : ಜಿಲ್ಲೆಯಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ಅತಿ ಹೆಚ್ಚು 1742 ಹಾಗೂ ಚಿಕ್ಕಬಳ್ಳಾಪುರ ತಾ.ಅತಿ ಕಡಿಮೆ 669 ಬದು ನಿರ್ಮಿಸಲಾಗಿದೆ. ಶಿಡ್ಲಘಟ್ಟ ತಾ. ದ್ವಿತೀಯ ಸ್ಥಾನದಲ್ಲಿದ್ದು 1624 ಬದು ನಿರ್ಮಿಸಲಾಗಿದೆ. ಚಿಂತಾಮಣಿ ತಾಲೂಕಿ ನಲ್ಲಿ 1461, ಬಾಗೇಪಲ್ಲಿ ತಾ.1162 ಹಾಗೂ ಗುಡಿಬಂಡೆ ತಾಲೂಕಿನಲ್ಲಿ 728 ಬದು ನಿರ್ಮಿಸಲಾಗಿದೆ.
ಕೃಷಿ ಹೊಂಡ ಮತ್ತು ಬದುಗಳನ್ನು ನಿರ್ಮಿಸಲು ಯೋಜನೆ ರೂಪಿಸಿ ಪಿಡಿಒಗಳು, ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿ ಉತ್ತೇಜನ ನೀಡಿದ್ದಾರೆ.
– ಬಿ.ಫೌಝೀಯಾ ತರುನ್ನುಮ್, ಜಿಪಂ ಸಿಇಒ
– ಎಂ.ಎ.ತಮೀಮ್ ಪಾಷ