ಕೋಲಾರ: ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾದ್ಯಂತ ನರೇಗಾ ಪ್ರಚಾರ ಯೋಜನೆಯ ರೋಜ್‌ಗಾರ್ ವಾಹಿನಿ ಸಂಚರಿಸಲಿದೆ ಎಂದು ಜಿಪಂ ಸಿಇಒ ಎಚ್.ವಿ.ದರ್ಶನ್ ತಿಳಿಸಿದರು.
ನಗರದ ಜಿಲ್ಲಾಡಳಿತ ಆವರಣದಲ್ಲಿ ನರೇಗಾ ಯೋಜನೆಯಡಿ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ರೋಜ್‌ಗಾರ್ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಜಿಲ್ಲೆಯ ಐದು ತಾಲೂಕಿನಲ್ಲಿ ಒಂದೊಂದು ಪ್ರತ್ಯೇಕ ವಾಹಿನಿಯನ್ನು ಪ್ರಚಾರ ಮಾಧ್ಯಮವಾಗಿ ಬಳಸಿಕೊಂಡು ನರೇಗಾ ಯೋಜನೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು. ನರೇಗಾ ಯೋಜನೆಯಡಿ ವೈಯಕ್ತಿಕ, ಪ್ಯಾಕೇಜ್, ಸಮುದಾಯ ಕಾಮಗಾರಿ ಕೈಗೊಂಡು ಪ್ರತಿಯೊಂದು ಗ್ರಾಪಂ ಅಭಿವೃದ್ಧಿ ಹೊಂದಲು ನರೇಗಾ ಯೋಜನೆ ಉತ್ತಮವಾಗಿದೆ ಎಂದರು.
ಸಾಮಾನ್ಯವಾಗಿ ಗ್ರಾಮೀಣ ಪ್ರದೇಶ ಗಳಲ್ಲಿ ಯಾವುದೇ ಕೆಲಸ ಮಾಡಲು ಪರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೂಲಿ ನಿಗದಿಪಡಿಸುತ್ತಾರೆ. ಆದರೆ, ನರೇಗಾ ಯೋಜನೆಯಡಿ ಗಂಡಿಗೂ ಹಾಗೂ ಹೆಣ್ಣಿಗೂ ಸಮಾನ ಕೂಲಿ ನೀಡಲಾಗುವುದು. ಯೋಜನೆಯ ಸೌಲಭ್ಯ ಪಡೆಯುವಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದರೆ ಉಚಿತ ದೂ.ಸಂ. 18004258666ಗೆ ಸಂರ್ಕಿಸಬಹುದೆಂದು ದರ್ಶನ್ ತಿಳಿಸಿದರು.
ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ಯೋಜನಾ ನಿರ್ದೇಶಕಾರದ ಮುನಿಕೃಷ್ಣಪ್ಪ, ಸಹಾಯಕ ಯೋಜನಾ ನಿರ್ದೇಶಕರಾದ ವಂಸತ್‌ಕುಮಾರ್, ಸಹಾಯಕ ಕಾರ್ಯದರ್ಶಿ ವೆಂಕಟಚಲಪತಿ, ಮುಖ್ಯ ಲೆಕ್ಕಾಧಿಕಾರಿ ಎಂ.ಮಾದೇಶು, ತಾಪಂ ಸಹಾಯಕ ಯೋಜನಾಧಿಕಾರಿ ಚಂದ್ರಪ್ಪ, ಜಿಪಂ ಸಿಬ್ಬಂದಿ ಉಪಸ್ಥಿತರಿದ್ದರು.