ಕಾರ್ಕಳ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ವಿವಿಧ ಇಲಾಖೆಗಳು ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಮಾದರಿ ಹಾಗೂ ಅದರ ಮಾಹಿತಿಯನ್ನು ಒಂದೇ ಸೂರಿನಡಿ ರೈತರಿಗೆ ಒದಗಿಸುವ ಕೆಲಸ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ವೇಳೆಗೆ ಜಿಲ್ಲಾ ಪಂಚಾಯತ್ ಮಾಡಿದೆ.
ಬೈಲೂರಿನಲ್ಲಿರುವ ಪರಶುರಾಮ ಥೀಂ ಪಾರ್ಕ್ ಪರಿಸರದಲ್ಲಿ ಮಾದರಿ ಗ್ರಾಮ ನಿರ್ಮಿಸಲಾಗಿದ್ದು ರಾಜೀವ್ ಗಾಂಧಿ ಸೇವಾ ಕೇಂದ್ರ, ಪಂ. ಕಟ್ಟೆ, ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾದರಿ, ಕಾಲುಸಂಕ, ಅಮೃತ ಸರೋವರ, ಕುರಿ, ಮೇಕೆ, ದನದ ಶೆಡ್, ಕೋಳಿಗೂಡು, ಸ್ಮಾರ್ಟ್ ಶಾಲೆ, ಕಾಂಪೌಂಡ್, ಮೈದಾನ, ಕಲ್ಯಾಣಿ, ಅರಣ್ಯ, ರಸ್ತೆ, ಮಾದರಿ ಮನೆ ನಿರ್ಮಿಸಲಾಗಿದೆ.
ಮಾದರಿ ಮನೆಯಲ್ಲಿ ಹಟ್ಟಿ, ಬಚ್ಚಲು ಗುಂಡಿ, ತೋಟ, ಅಜೋಲ ಫಿಟ್, ಎರೆಹುಳ ತೊಟ್ಟಿ, ಜೈವಿಕ ಅನಿಲ ಘಟಕದ ಕುರಿತು ಚಿತ್ರಣವಿದೆ. ತೋಟಗಾರಿಕೆ ಮತ್ತು ಅರಣ್ಯೀಕರಣ ಮಾದರಿಯಲ್ಲಿ ಅಡಿಕೆ, ತೆಂಗು, ಗೇರು, ಮಲ್ಲಿಗೆ, ಕೃಷಿ ಅರಣ್ಯೀಕರಣ ಹಾಗೂ ಮಾದರಿ ಶಾಲೆಯಲ್ಲಿ ಶಾಲೆ, ಮಳೆ ನೀರು ಕೊçಲು, ಬಚ್ಚಲು ಗುಂಡಿ, ಅಡುಗೆ ಕೊಠಡಿ, ಆಟದ ಮೈದಾನ, ಶೌಚಾಲಯ ಆವರಣ ಗೋಡೆ ಬಗ್ಗೆ ಮಾಹಿತಿಯಿದೆ.
ಅಮೃತ್ ಪಂಚಾಯತ್ ಯೋಜನೆಯಡಿ ಭಾರತ್ ನಿರ್ಮಾಣ ಸೇವಾ ಕೇಂದ್ರ, ಗ್ರಂಥಾಲಯ, ಮಳೆ ನೀರು ಕೊçಲು, ಕೊಳವೆ ಬಾವಿ, ಜಲಮರುಪೂರಣ ಘಟಕ, ನಮ್ಮ ಹೊಲ ನಮ್ಮ ದಾರಿ, ಸಂಜೀವಿನಿ ಸಂತೆ ಮಾದರಿಯಲ್ಲಿ ರಿಡ್ಜ್ ಟು ವ್ಯಾಲಿ, ಅಮೃತ ಸರೋವರ, ಉದ್ಯಾನವನ ಮಾದರಿಯಲ್ಲಿ ಗಿಡ, ಕಲ್ಯಾಣಿ, ಶಾಂತಿಧಾಮ ಮಾದರಿಯಲ್ಲಿ ಶ್ಮಶಾನ, ಗೋಶಾಲೆ ಮಾದರಿಯಲ್ಲಿ ಗೋಶಾಲೆ ಕಟ್ಟಡ, ನೀರಿನ ತೊಟ್ಟಿ, ಮೇವು ಇವುಗಳ ಬಗ್ಗೆ ನಿರ್ವಹಣೆ, ಲಾಭದ ಕುರಿತು ಅರಿತುಕೊಳ್ಳುವ ಮಾದರಿಗಳು ಕೃಷಿಕರನ್ನು ಸೆಳೆಯುತ್ತಿವೆ.
Related Articles
ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ, ಜಲಾನಯನ, ಪಶು ಸಂಗೋಪನೆ, ಮೀನುಗಾರಿಕೆ, ಶಿಕ್ಷಣ, ಜಲಮಿಷನ್ ಸೇರಿದಂತೆ ವಿವಿಧ ಬಗೆಯ ಮಾದರಿಗಳನ್ನು ಇಲ್ಲಿ ಸಿದ್ಧಪಡಿಸಲಾಗಿದೆ.
ಜಲಸಂಜೀವಿನಿ ಮಾದರಿ
ನೈಸರ್ಗಿಕ ವಿಪತ್ತಿನಿಂದಾಗುವ ಹಾನಿಯನ್ನು ತಡೆಯಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಜಲಸಂಜೀವಿನಿ ಕ್ರಿಯಾ ಯೋಜನೆಗಳನ್ನು ಗ್ರಾ.ಪಂ. ಮಟ್ಟದಲ್ಲಿ ಜಾರಿಗೆ ತರಲಾಗುತ್ತಿದ್ದು, ಅದರ ಮಾದರಿಯನ್ನು ಕೂಡ ಇಲ್ಲಿ ನಿರ್ಮಿಸಲಾಗಿದೆ.
ಸಂಪೂರ್ಣ ಮಾಹಿತಿ
ಪ್ರತಿಯೊಂದು ಕಾಮಗಾರಿಗೆ ತಗಲುವ ಅಂದಾಜು ಮೊತ್ತ, ಕೂಲಿ ರೂಪದಲ್ಲಿ ದೊರೆಯುವ ಮೊತ್ತ, ಸಾಮಗ್ರಿ ಖರೀದಿಗೆ ದೊರೆಯುವ ಹಣ ಹಾಗೂ ಎಷ್ಟು ಮಾನವ ದಿನಗಳು ಬೇಕಾಗುತ್ತದೆ ಎಂಬ ಮಾಹಿತಿಯ ಫಲಕಗಳನ್ನು ಪ್ರದರ್ಶಿಸಲಾಗಿದೆ. ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಲ್ಲಿ ಜನರಿಗೆ ಉದ್ಯೋಗ ದೊರೆಯುತ್ತದೆ, ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಎಂಬ ಅನಿಸಿಕೆ ನರೇಗಾ ಗ್ರಾಮವನ್ನು ನೋಡಿದ ಬಳಿಕ ರೈತರಲ್ಲಿ ಮೂಡಿದೆ.
ಕೇಳಿ ಪಡೆಯುವುದಕ್ಕಿಂತ ನೋಡಿ ತಿಳಿದುಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಬೇಗ ಅರ್ಥವಾಗುತ್ತದೆ ಎನ್ನುವ ಕಾರಣಕ್ಕೆ ಮಾದರಿ ಗ್ರಾಮ ನಿರ್ಮಿಸಲಾಗಿದೆ. ಸಾರ್ವಜನಿಕರ ಮೇಲೆ ಇದು ಉತ್ತಮ ಪರಿಣಾಮ ಬೀರಿದೆ.
-ಬಾಬು, ಯೋಜನ ನಿರ್ದೇಶಕರು, ಉಡುಪಿ ಜಿ.ಪಂ.