Advertisement

ನರೇಗಾ: ಕುಂದಾಪುರದಲ್ಲಿ ಗರಿಷ್ಠ ಬಾವಿ ರಚನೆ

03:55 PM May 22, 2023 | Team Udayavani |

ಕುಂದಾಪುರ: ಬಿಸಿಲಿನ ಬೇಗೆಗೆ ನದಿ ಸಹಿತ ಬಹುತೇಕ ನೀರಿನ ಮೂಲಗಳು ಬತ್ತಿ ಹೋಗುತ್ತಿದ್ದು, ಎಲ್ಲೆಡೆ ನೀರಿನ ಸಮಸ್ಯೆ ಶುರುವಾಗಿದೆ. ಕಳೆದೊಂದು ವರ್ಷದಿಂದ ಉಡುಪಿ ಜಿಲ್ಲೆಯಲ್ಲಿ ನರೇಗಾದಡಿ 2,831 ಬಾವಿ ನಿರ್ಮಾಣವಾಗಿದ್ದರೆ, ಈ ಪೈಕಿ ಕುಂದಾಪುರದಲ್ಲಿಯೇ ಅತೀ ಹೆಚ್ಚು 1,412 ಬಾವಿ ತೊಡಲಾಗಿದೆ. ಇದು ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ.

Advertisement

ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದರ ಜತೆಗೆ ನೀರಿನ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ನೀರಿನ ಕೊರೆತೆಯೂ ಹೆಚ್ಚಾಗಿದೆ. ಆ ಕಾರಣಕ್ಕೆ ಮಹಾತ್ಮಾ ಗಾಂಧಿ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಗ್ರಾ.ಪಂ.ಗಳಲ್ಲಿ ವೈಯಕ್ತಿಕ ಬಾವಿ ತೆಗೆಯಲು ಅನುದಾನ ನೀಡಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ಇದರ ಸದುಪಯೋಗವು ಹೆಚ್ಚುತ್ತಿದೆ.

ಕುಂದಾಪುರ, ಬೈಂದೂರು ಗರಿಷ್ಠ
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಮಾರ್ಚ್‌, ಎಪ್ರಿಲ್‌ ಹಾಗೂ ಮೇನಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಸಮುದ್ರ ತೀರದ ಗ್ರಾಮಗಳಲ್ಲಿ ಉಪ್ಪು ನೀರಿನ ಸಮಸ್ಯೆ, ಕೆಲವೆಡೆಗಳಲ್ಲಿ ಇದ್ದ ಬಾವಿ ಬರಿದಾಗುವುದು ಇನ್ನಿತರ ಕಾರಣಗಳಿಂದ ಹೊಸ ಬಾವಿ ತೋಡುವವರ ಸಂಖ್ಯೆ ಹೆಚ್ಚುತ್ತಿದೆ. 2022-23ನೇ ಸಾಲಿನಲ್ಲಿ ಕುಂದಾಪುರದಲ್ಲಿ 1,412 ಬಾವಿ ಹಾಗೂ ಬೈಂದೂರಲ್ಲಿ 435 ಬಾವಿಗಳನ್ನು ನಿರ್ಮಿಸಿರುವುದು ಇದಕ್ಕೆ ಸಾಕ್ಷಿ. ಇದರಿಂದ ಈ ಬಾರಿ ಕೆಲ ಮನೆಗಳಿಗೆ ಪಂಚಾಯತ್‌ ನೀರಿನ ಅಗತ್ಯ ಬಿದ್ದಿಲ್ಲ.

1.50 ಲಕ್ಷ ರೂ. ಅನುದಾನ
ನರೇಗಾದಡಿ ಬಾವಿ ತೋಡಲು ಮೊದಲು ಗರಿಷ್ಠ 1.20 ಲಕ್ಷ ರೂ. ಅನುದಾನ ಸಿಗುತ್ತಿತ್ತು. ಈಗ ಅದನ್ನು 1.50 ಲಕ್ಷ ರೂ.ಗೆ ಏರಿಸಲಾಗಿದೆ. ಅದರಲ್ಲಿ 71,317 ರೂ. ಕೂಲಿ ಹಾಗೂ ಸಾಮಗ್ರಿಗಳಿಗೆ 78,683 ರೂ. ಸಿಗುತ್ತಿದೆ. ಅಗತ್ಯವಿರುವವರು ಆಯಾಯ ಗ್ರಾ.ಪಂ.ಗಳನ್ನು ಸಂಪರ್ಕಿಸಬಹುದು. ಕಳೆದ ವರ್ಷವೂ ಕುಂದಾಪುರದ 46 ಗ್ರಾ.ಪಂ.ಗಳಲ್ಲಿ ಒಟ್ಟು 586 ಹಾಗೂ ಬೈಂದೂರು ತಾಲೂಕಿನ 15 ಗ್ರಾ.ಪಂ.ಗಳಲ್ಲಿ 451 ಸೇರಿದಂತೆ ಒಟ್ಟಾರೆ 1,037 ವೈಯಕ್ತಿಕ ಬಾವಿಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಸಲವೂ ಅದೇ ರೀತಿ ಉಭಯ ತಾಲೂಕುಗಳಲ್ಲಿ ಒಟ್ಟಾರೆ 1,847 ಬಾವಿಗಳನ್ನು ರಚಿಸಲಾಗಿದೆ.

ವಾರದೊಳಗೆ ಮಂಜೂರು
ಉಡುಪಿ ಜಿಲ್ಲೆಯಲ್ಲಿ ನರೇಗಾದಲ್ಲಿ ಸಾಮುದಾಯಿಕ ಕಾಮಗಾರಿಗಳಿಗಿಂತ ವೈಯಕ್ತಿಕ ಕಾಮಗಾರಿಗೆ ಜನ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಅದರಲ್ಲೂ ಮನೆಗಳ ಬಾವಿಗೆ ಹೆಚ್ಚು ಬೇಡಿಕೆಗಳು ಬರುತ್ತಿದೆ. ಒಂದು ವರ್ಷದಲ್ಲಿ 2,800ಕ್ಕೂ ಮಿಕ್ಕಿ ಬಾವಿಗಳು ನಿರ್ಮಾಣವಾಗಿರುವುದೇ ಇದಕ್ಕೆ ಸಾಕ್ಷಿ. ಈಗಲೂ ಅವಕಾಶವಿದ್ದು, ಅಗತ್ಯವಿರುವವರುಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ ವಾರದೊಳಗೆ ಮಂಜೂರು ಮಾಡಿಕೊಡಲಾಗುವುದು.
-ಪ್ರಸನ್ನ ಎಚ್‌., ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

Advertisement

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next