Advertisement

ನರ್ಸರಿ ತೋಟ ರಚನೆಗೆ “ಸಂಜೀವಿನಿ’ಯಾದ ನರೇಗಾ

09:24 AM Nov 29, 2022 | Team Udayavani |

ಕುಂದಾಪುರ: ಸಂಜೀವಿನಿ ಸಂಘಗಳ ಮಹಿಳೆಯರಿಗೆ ಸ್ವಾವಲಂಬನೆ ಯೊಂದಿಗೆ ಬದುಕಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನರ್ಸರಿ ತೋಟ ರಚನೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆ “ಸಂಜೀವಿನಿ’ಯಂತೆ ನೆರವಾಗಿದೆ.

Advertisement

ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ ಸ್ವೋದ್ಯೋಗ ಮಾದರಿಯಲ್ಲಿ ನರ್ಸರಿ ತೋಟ ರಚನೆ ಮಾಡಲು ನರೇಗಾ ಯೋಜನೆ, ತೋಟಗಾರಿಕೆ ಇಲಾಖೆ ಒಗ್ಗೂಡಿಸುವಿಕೆ ಹಾಗೂ ಎನ್‌ಎಲ್‌ ಆರ್‌ಎಂ ಸಹಕಾರದೊಂದಿಗೆ ನೆರವು ನೀಡಲಾಗುತ್ತಿದೆ. ಬೈಂದೂರು ತಾಲೂಕಿನ ಮರವಂತೆ ಹಾಗೂ ನಾವುಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಜೀವಿನಿ ಸಂಘದ ಮಹಿಳೆಯರು ನರ್ಸರಿ ನಿರ್ಮಾಣ ಮಾಡಿ ಯಶ ಕಂಡಿದ್ದಾರೆ.

ಹಚ್ಚ ಹಸುರಿನ ನರ್ಸರಿ

ಮರವಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಸ್‌ಎಲ್‌ಆರ್‌ಎಂ ಘಟಕದ ಬಳಿ ನರ್ಸರಿ ನಿರ್ಮಾಣ ಮಾಡಲಾಗಿದ್ದು, ಸಂಜೀವಿನಿ ಮಹಿಳೆಯರು ಬೀಜ ಬಿತ್ತಿ ಗಿಡಗಳ ಆರೈಕೆ ಮಾಡುತ್ತಿದ್ದು, ಹಚ್ಚ ಹಸುರಿನ ನರ್ಸರಿ ತೋಟ ಸಿದ್ಧಗೊಂಡಿದೆ. ನಾವುಂದ ಪಂಚಾಯತ್‌ ಕಟ್ಟಡದ ಬಳಿ ಇರುವ ಸರಕಾರಿ ಜಾಗದಲ್ಲಿ ನರ್ಸರಿ ನಿರ್ಮಿಸಲಾಗಿದ್ದು, ಸಂಜೀವಿನಿ ಸಂಘದ ಮಹಿಳೆಯರು ಜತೆಗೂಡಿ ಗಿಡಗಳ ಆರೈಕೆ ಮಾಡುತ್ತಿದ್ದಾರೆ.

ಅನುದಾನ ಎಷ್ಟು?

Advertisement

ನರ್ಸರಿ ತೋಟ ನಿರ್ಮಿಸಲು ನರೇಗಾ ಯೋಜನೆ ಹಾಗೂ ತೋಟಗಾರಿಕೆ ಇಲಾಖೆ ಒಗ್ಗೂಡಿಸುವಿಕೆಯಿಂದ 2.09 ಲಕ್ಷ ರೂ. ಅನುದಾನ ದೊರೆಯುತ್ತದೆ. ಸಂಘಗಳಿಗೆ ಸಿಗುವ ಅನುದಾನದಲ್ಲಿ 103 ಮಾನವ ದಿನಗಳಿಗೆ ಕೂಲಿ 31,827 ರೂ. ದೊರೆತರೆ ಉಳಿದ ಮೊತ್ತವನ್ನು ಸಾಮಗ್ರಿ ವೆಚ್ಚಗಳಿಗೆ ನೀಡಲಾಗುತ್ತದೆ.

ಪೌಷ್ಟಿಕ ಕೈ ತೋಟ

ಸಮುದಾಯ ಕಾಮಗಾರಿಯಲ್ಲಿ ನರ್ಸರಿ ನಿರ್ಮಿಸುವ ಜತೆಗೆ ವೈಯಕ್ತಿಕವಾಗಿ ಮನೆಯಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಅವಕಾಶವಿದೆ. ವೈಯಕ್ತಿಕ ಕಾಮಗಾರಿಗೆ ಉದ್ಯೋಗ ಖಾತರಿ ಯೋಜನೆಯ ಜಾಬ್‌ ಕಾರ್ಡ್‌ ಹೊಂದಿರುವುದು ಆವಶ್ಯಕ. ನೆಲ್ಲಿ, ನುಗ್ಗೆ, ಕರಿಬೇವು, ಕಾಳುಮೆಣಸು, ತೆಂಗು, ಸೀತಾಫಲ ಪೇರಳೆ, ಪಪ್ಪಾಯಿ ನಿಂಬೆ ಗಿಡ ಹೀಗೆ ಒಟ್ಟು 14 ಗಿಡಗಳನ್ನು ನೆಟ್ಟು ಪೋಷಿಸಲು 4,500 ರೂ. ಅನುದಾನ ನೀಡಲಾಗುತ್ತಿದೆ. ಈಗಾಗಲೇ ಉಡುಪಿ ಜಿಲ್ಲೆಯ ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ 101 ಪೌಷ್ಟಿಕ ಕೈತೋಟ ನಿರ್ಮಿಸಲಾಗುತ್ತಿದ್ದು, ಇವುಗಳಿಗೆ ಗಿಡಗಳನ್ನು ಸಂಜೀವಿನಿ ಸಂಘಗಳ ನರ್ಸರಿಯಿಂದ ಪೂರೈಸಲು ಯೋಜನೆ ರೂಪಿಸಲಾಗಿದೆ.

14 ನರ್ಸರಿ ತೋಟ ರಚನೆ

ಸಂಜೀವಿನಿ ಮಹಿಳೆಯರಿಗೆ ನರ್ಸರಿ ತೋಟ ನಿರ್ಮಿಸುವ ಯೋಜನೆಯ ಕುರಿತು ಉಡುಪಿ ಜಿ.ಪಂ. ವಿಶೇಷ ಮುತುವರ್ಜಿ ವಹಿಸಿದ್ದು, ತಾಲೂಕಿಗೆ 2 ರಂತೆ ನರ್ಸರಿ ಯೋಜನೆ ರೂಪಿಸಿದೆ. ಈಗಾಗಲೇ ಎಲ್ಲ ತಾಲೂಕುಗಳು ಉತ್ತಮ ಪ್ರಗತಿ ಸಾಧಿಸಿದೆ. ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಹಾಗೂ ಕೆದೂರು ಗ್ರಾ.ಪಂ.ಗಳಲ್ಲಿ ನರ್ಸರಿ ನಿರ್ಮಿಸಲಾಗುತ್ತಿದೆ. ಒಂದು ನರ್ಸರಿ ತೋಟದಲ್ಲಿ 3,000 ರಿಂದ 3,500 ಗಿಡ ಬೆಳೆಸಲಾಗುತ್ತಿದೆ. ನೆಲ್ಲಿ, ನುಗ್ಗೆ, ಕರಿಬೇವು, ಕಾಳುಮೆಣಸು, ತೆಂಗು, ಸೀತಾಫಲ ಪೇರಳೆ, ಪಪ್ಪಾಯಿ, ನಿಂಬೆ ಗಿಡ ಬೆಳೆಯಲಾಗಿದೆ.

ಮಹಿಳೆಯರಿಗೆ ವರದಾನ: ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸದೃಢವಾಗಬೇಕು ಎಂಬ ಉದ್ದೇಶದಿಂದ ಸಂಜೀವಿನಿ ಸಂಘದ ಮಹಿಳೆಯರ ಮೂಲಕ ನರ್ಸರಿ ನಿರ್ಮಾಣ ಮಾಡಲಾಗುತ್ತಿದೆ. ಗ್ರಾ.ಪಂ., ತೋಟಗಾರಿಕೆ ಇಲಾಖೆ, ಎನ್‌ಆರ್‌ಎಲ್‌ ಎಂ, ನರೇಗಾ ಯೋಜನೆಯಡಿ ನರ್ಸರಿ ಮಾಡುತ್ತಿದ್ದೇವೆ. ಒಂದು ನರ್ಸರಿಯಲ್ಲಿ 2,500 ರಿಂದ 3,500 ವಿವಿಧ ತಳಿಯ ಗಿಡ ಬೆಳೆಸಲಿದ್ದು, ಮುಂದಿನ ದಿನಗಳಲ್ಲಿ ವೈಯಕ್ತಿಕ ಪೌಷ್ಟಿಕ ತೋಟ ನಿರ್ಮಾಣಕ್ಕೆ ಈ ನರ್ಸರಿಯಿಂದಲೇ ಗಿಡಗಳ ಪೂರೈಕೆ ಆಗುವ ಯೋಜನೆ ರೂಪಿಸಲಾಗಿದೆ.  –ಮಹೇಶ್‌ ಕುಮಾರ್‌ ಹೊಳ್ಳ, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)

ತೆಂಗು, ಅಡಿಕೆ ಗಿಡ ವ್ಯವಸ್ಥೆ: ಮರವಂತೆ, ನಾವುಂದ ಗ್ರಾ. ಪಂ. ವ್ಯಾಪ್ತಿಯಲ್ಲಿ ನರ್ಸರಿ ನಿರ್ಮಾಣ ಉತ್ತಮವಾಗಿದೆ. ಸಂಜೀವಿನಿ ಸಂಘದ ಮಹಿಳೆಯರ ಭಾಗವಹಿಸುವಿಕೆಯಿಂದ ಇದು ಸಾಧ್ಯ ವಾಗಿದೆ. ಈಗಾಗಲೇ ನೆಲ್ಲಿ, ಕರಿಬೇವು, ಪೇರಳೆ, ಸೀತಾಫಲ ಗಿಡ ನೆಡಲಾಗಿದ್ದು, ಸದ್ಯದಲ್ಲೇ ತೆಂಗು, ಅಡಿಕೆ ಗಿಡ ಪೂರೈಸುವ ವ್ಯವಸ್ಥೆ ಮಾಡಲಾಗು ವುದು.  -ನಿಧೀಶ್‌ ಕೆ.ಜೆ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕಾ ಇಲಾಖೆ ಕುಂದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next