Advertisement
ನರೇಗಾ ಯೋಜನೆಯ ಭ್ರಷ್ಟಾಚಾರ ತಡೆಗೆ ಕೇಂದ್ರ ಸರ್ಕಾರ, ಯೋಜನೆ ಅನುಷ್ಠಾನಗೊಳ್ಳುವ ರಾಜ್ಯಗಳ ಶೇ.80ರಷ್ಟು ಜಿಲ್ಲೆಗಳಲ್ಲಿ ಓಂಬುಡ್ಸ್‌ಮನ್ ನೇಮಕವನ್ನು ಕಡ್ಡಾಯಗೊಳಿಸಿದೆ. ಇದರ ಬೆನ್ನಲ್ಲೇ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆಯುಕ್ತರು, ನರೇಗಾ ಯೋಜನೆಯಡಿ ಸಾಮಗ್ರಿ ಪೂರೈಕೆ ಮಾಡಿ ಬಿಲ್ ಪಡೆಯದಂತೆ ಗ್ರಾಪಂ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಫೆ.25ರಂದು ಹೊರಡಿಸಿದ ಸುತ್ತೋಲೆ ಮಹತ್ವ ಪಡೆದುಕೊಂಡಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993(12ಎಚ್) ಮತ್ತು (43-ಎ (ವಿ) ಅಡಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾದವನು ಗ್ರಾಪಂ ಆದೇಶದ ಮೂಲಕ ಮಾಡಿದ ಯಾವುದೇ ಕಾಮಗಾರಿಯಲ್ಲಿ ಅಥವಾ ಗ್ರಾಪಂ ಮೂಲಕ ಮಾಡಿಕೊಂಡ ಸರಕು ಪೂರೈಕೆ ಸೇರಿದಂತೆ ಯಾವುದೇ ಕರಾರು ಪಡೆದುಕೊಂಡರೆ ಅಥವಾ ನಿರ್ವಹಿಸಿದರೆ ಇಲ್ಲವೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರತಿನಿಧಿ- ಪಾಲುದಾರನಾದರೆ ಗ್ರಾಪಂ ಸದಸ್ಯನಾಗಲು ಅನರ್ಹನಾಗುತ್ತಾನೆ. ಈ ಕಾನೂನು ಮೊದಲಿನಿಂದಲೂ ಇದೆಯಾದರೂ ನರೇಗಾ ಯೋಜನೆ ಅನುಷ್ಠಾನದಲ್ಲಿ ಇದರ ಪಾಲನೆ ಸಮರ್ಪಕವಾಗಿ ಆಗುತ್ತಿಲ್ಲ. ಮುಖ್ಯವಾಗಿ ನರೇಗಾ ಯೋಜನೆಯ ಕಾಮಗಾರಿಯನ್ನೇ ದೃಷ್ಟಿಯಲ್ಲಿರಿಸಿಕೊಂಡು ಇಲಾಖೆ ಹೊರಡಿಸಿದ ಈ ಸೂಚನೆ ಗ್ರಾಪಂ ಸದಸ್ಯರಿಗೆ ಎಚ್ಚರಿಕೆ ಗಂಟೆಯಾಗಿದೆ. ಯಾರ ಸದಸ್ಯತ್ವ ರದ್ದು?
ಪಂಚಾಯಿತಿಯ ಯಾವುದೇ ಕಾಮಗಾರಿ ಕಾರ್ಯಗತಗೊಳಿಸುವಾಗ, ಕರಾರು ಸಂಬಂಧದ ಅಥವಾ ಕಾಮಗಾರಿಗೆ ಸಂಬಂಧಿಸಿದ ಯಾವುದೇ ವ್ಯವಹಾರದಲ್ಲಿ ಗ್ರಾಪಂ ಸದಸ್ಯ ಇಲ್ಲವೇ ಆತನ ಹತ್ತಿರದ ಸಂಬಂಧಿಗಳು (ಪತಿ, ಪತ್ನಿ, ಮಗ, ಮಲಮಗ, ಮಲಮಗಳು ಅಥವಾ ಸದಸ್ಯನ ಮೇಲೆ ಸಂಪೂರ್ಣ ಅವಲಂಬಿತನಾಗಿರುವ, ರಕ್ತ ಸಂಬಂಧವಾಗಿರಲಿ ಅಥವಾ ವಿವಾಹದಿಂದಾಗಲಿ ಸಂಬಂಧಿಸಿದ ಯಾವುದೇ ಇತರ ವ್ಯಕ್ತಿ ) ಕಂಡು ಬಂದರೆ ಅವನಿಗೆ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಬಳಿಕ ವಿಚಾರಣೆ ನಡೆಸಿ ಸದಸ್ಯತ್ವದಿಂದ ತೆಗೆದುಹಾಕುವುದು ಸೂಕ್ತ ಎಂದು ನಿರ್ಧರಿಸಬಹುದಾಗಿದೆ.
Related Articles
ಗ್ರಾಪಂ ಸದಸ್ಯರು ನರೇಗಾ ಯೋಜನೆಯಡಿ ಸಾಮಗ್ರಿ ಪೂರೈಕೆದಾರರಾಗಿ, ಪಾಲುದಾರರಾಗಿ, ಪ್ರತಿನಿಧಿಯಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ನರೇಗಾ ಅಧಿನಿಯಮದ ಸೆಕ್ಷನ್ 3ರನ್ವಯ ಉದ್ಯೋಗಚೀಟಿ ಪಡೆದ ಯಾವುದೇ ಗ್ರಾಮೀಣ ಪ್ರದೇಶದ ವಯಸ್ಕ ಸದಸ್ಯರು ಅಕುಶಲ ಕೂಲಿಕಾರ್ಮಿಕರಾಗಿ ಕೆಲಸ ನಿರ್ವಹಿಸಬಹುದಾಗಿದೆ. ಜತೆಗೆ ನರೇಗಾ ಯೋಜನೆಯ ವೈಯಕ್ತಿಕ ಸೌಲಭ್ಯ ಸಹ ಪಡೆಯಬಹುದಾಗಿದ್ದು, ಯೋಜನೆಯ ಅಧಿನಿಯಮದಂತೆ ಆತ ಅರ್ಹ ಫಲಾನುಭವಿ ಆಗಿರಬೇಕಾಗುತ್ತದೆ.
Advertisement
ಗ್ರಾಪಂ ಸದಸ್ಯರು ನರೇಗಾ ಮಾತ್ರವಲ್ಲ, ಪಂಚಾಯಿತಿಯಿಂದ ನಡೆಯುವ ಯಾವುದೇ ಕಾಮಗಾರಿಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲುದಾರ, ಪ್ರತಿನಿಧಿ ಅಥವಾ ಕರಾರಿಗೊಳಪಟ್ಟು ಕೆಲಸ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಸದಸ್ಯತ್ವ ರದ್ದಾಗುತ್ತದೆ.– ಬಿ. ಆನಂದ್, ಉಪಕಾರ್ಯದರ್ಶಿ, ದಾವಣಗೆರೆ ಜಿಪಂ -ಎಚ್.ಕೆ. ನಟರಾಜ