Advertisement

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

06:10 PM Dec 14, 2024 | Team Udayavani |

ಕೋಲಾರ: ಮಹಾತ್ಮಗಾಂಧಿ  ನರೇಗಾ ಯೋಜ ನೆಯ ನೆರವು ಪಡೆದ ಲಾರಿ ಚಾಲಕರೊಬ್ಬರು, ಈಗ ಗುಲಾಬಿ ಹೂವು ಬೆಳೆದು ಸ್ವಂತ ಊರಿನಲ್ಲೇ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

Advertisement

ಕೋಲಾರ ತಾಲೂಕು ಅರಾಭಿಕೊತ್ತನೂರ ಗ್ರಾಪಂನ ಚಿಕ್ಕಅಯ್ಯೂರು ಗ್ರಾಮದ ಸತೀಶ್‌ ಎಂಬುವರು, ಉದ್ಯೋಗ ಖಾತ್ರಿಯಡಿ, ಹೂವು ಬೆಳೆದು, ಹೊಸ ಬದುಕು ರೂಪಿಸಿಕೊಂಡಿದ್ದಾರೆ. ಸತೀಶ್‌ ಈ ಹಿಂದೆ ತಮ್ಮ ಕುಟುಂಬದ ಪೋಷಣೆಗಾಗಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪೂರ್ವಜರಿಂದ ಬಂದಿದ್ದ 30 ಗುಂಟೆ ಜಮೀನಿನಲ್ಲಿ ನೀಲಗಿರಿ ಹಾಕಿದ್ದರು. ಆದರೆ, ಅದರಿಂದ ಹೆಚ್ಚು ಪ್ರಯೋಜನವೇನು ಇರಲಿಲ್ಲ. ನಿತ್ಯ ದೂರದ ಊರಿಗೆ ಹೋಗಿ ಅನ್ಯರ ಬಳಿಯ ದುಡಿಮೆ ತೃಪ್ತಿತರಲಿಲ್ಲ.

ಸಾರ್ವಕಾಲಿಕ ಲಾಭದ ಬೆಳೆ: ಸ್ವ-ಉದ್ಯೋಗ ಮಾಡುವ ನಿಟ್ಟಿನಲ್ಲಿ ಜಮೀನಿನಲ್ಲಿದ್ದ ನೀಲಗಿರಿಯನ್ನು ಸಂಪೂರ್ಣವಾಗಿ ತೆಗೆದು, ಪಕ್ಕದ ಜಮೀನಿನಿಂದ ನೀರು ಪಡೆದು ಕೃಷಿ ಮಾಡಲು ಮುಂದಾದರು. ಆದರೆ, ಯಾವ ಬೆಳೆಯನ್ನು ಬೆಳೆಯಬೇಕು ಎಂಬ ಯೋಚನೆಗೆ ಬಿದ್ದ ಸತೀಶ್‌ಗೆ ಸಾರ್ವಕಾಲಿಕ ಲಾಭದ ಬೆಳೆಯಾಗಿ ಕಂಡಿದ್ದು ಗುಲಾಬಿ. ಅಲ್ಲದೇ, ಗುಲಾಬಿ ಹೂವು ಬೆಳೆಯಲು ನರೇಗಾದಡಿಯಲ್ಲಿ ನೆರವು ನೀಡುವ ಮಾಹಿತಿ ಪಡೆದ ಅವರು, ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹೂವು ಬೆಳೆಯುವ ಬಗ್ಗೆ ತಿಳಿದುಕೊಂಡರು.

ನರೇಗಾದಿಂದ ನೆರವು: ತಮಿಳುನಾಡಿನ ಅಗಲಕೋಟೆ ಯಿಂದ 1,300 ಮೆರಾಬುಲ್‌ ಕೆಂಪು ತಳಿಯ ಗುಲಾಬಿ ಗಿಡಗಳನ್ನು ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿ ಅಳವಸಿಕೊಂಡಿದ್ದು, ಸತೀಶ್‌ ಕುಟುಂಬದವರೇ ಗುಲಾಬಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ನರೇಗಾದಿಂದ ಕೂಲಿ ಹಾಗೂ ಸಾಮಗ್ರಿ ವೆಚ್ಚ ಸೇರಿ 72,512 ರೂಪಾಯಿ ನೆರವು ದೊರೆತಿದೆ.

ಗ್ರಾಮದ ಜನರಿಗೆ ಮಾದರಿ: ಲಾರಿ ಚಾಲಕನ ಪುಷ್ಪ ಬೇಸಾಯದ ಪಯಣಕ್ಕೆ ಮಹಾತ್ಮಗಾಂಧಿ ನರೇಗಾ ನೆರವಾಗಿದ್ದು, ಸ್ವಗ್ರಾಮದಲ್ಲಿ ಉತ್ತಮ ಆದಾಯ ಗಳಿಸುತ್ತಿರುವ ಸತೀಶ್‌ ಈಗ ಗ್ರಾಮದ ಜನರಿಗೆ ಮಾದರಿಯಾಗಿದ್ದಾರೆ. ಸತೀಶ್‌ ಅವರನ್ನು ಅನುಸರಿಸಿ, ಈಗ ಗ್ರಾಮದಲ್ಲಿ ಅನೇಕ ರೈತರು ನರೇಗಾ ನೆರವು ಪಡೆದು ಗುಲಾಬಿ ಬೆಳೆದು, ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

Advertisement

ಮಾರುಕಟ್ಟೆಯಲ್ಲಿ ಎಲ್ಲಾ ಕಾಲಕ್ಕೂ ಗುಲಾಬಿಗೆ ಬೇಡಿಕೆ: ಗುಲಾಬಿ ಹೂವಿಗೆ ಸರ್ವಕಾಲದಲ್ಲೂ ಬೇಡಿಕೆ ಇದ್ದು, ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತದೆ. ದಿನಬಿಟ್ಟು ದಿನ ಕೊಯ್ಲು ಮಾಡುತ್ತಿದ್ದು, 80ರಿಂದ 100 ಕೆ.ಜಿ. ಹೂವು ದೊರೆಯುತ್ತಿದೆ ಸತೀಶ್‌ ತಮ್ಮ ಗುಲಾಬಿ ಹೂವುಗಳನ್ನು ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಗುಲಾಬಿಗೆ ಸಾಮಾನ್ಯ ದಿನಗಳಲ್ಲಿ 60ರಿಂದ 100 ರೂಪಾಯಿ ಇದ್ದರೆ, ಹಬ್ಬದ ದಿನಗಳಲ್ಲಿ 150 ರಿಂದ 200 ರೂ.ಗೆ ಮಾರಾಟವಾಗುತ್ತದೆ. ಇದರಿಂದ ರೈತ ಸತೀಶ್‌ ತಿಂಗಳಿಗೆ ಸರಾಸರಿ 40 ರಿಂದ 50 ಸಾವಿರ ಆದಾಯ ಗಳಿಸುತ್ತಿದ್ದಾರೆ.

ಲಾರಿ ಚಾಲಕನಾಗಿದ್ದ ನಾನು, ಈಗ ನರೇಗಾ ನೆರವು ಪಡೆದು ಗುಲಾಬಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೇನೆ. ಗುಲಾಬಿ ಹೂವಿಗೆ ಸದಾ ಬೇಡಿಕೆ ಇದ್ದು, ನಷ್ಟ ಆಗೋದಿಲ್ಲ. ತೋಟವನ್ನ ಉತ್ತಮ ನಿರ್ವಹಣೆ ಮಾಡಿದರೆ, ಲಾಭ ಪಡೆಯಬಹುದು. ಉದ್ಯೋಗ ಖಾತ್ರಿ ಯೋಜನೆ ರೈತರಿಗೆ ಉಪಯುಕ್ತವಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಸತೀಶ್‌, ಗುಲಾಬಿ ಬೆಳೆಗಾರ, ಚಿಕ್ಕ ಅಯ್ಯೂರು

Advertisement

Udayavani is now on Telegram. Click here to join our channel and stay updated with the latest news.