ನಾರಾಯಣಪುರ: ಆಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್‌ನಷ್ಟು ಭಾರೀ ಪ್ರಮಾಣದ ಒಳಹರಿವು ಹರಿದು ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬುಧವಾರ ಸಂಜೆ 6:00 ಗಂಟೆಗೆ ಬಸವಸಾಗರ ಜಲಾಶಯದ 24 ಕ್ರಸ್ಟ್‌ಗೇಟ್‌ಗಳನ್ನು ತೆರೆದು 4.64 ಲಕ್ಷ ಕ್ಯೂಸೆಕ್‌ನಷ್ಟು ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗಿದೆ.
ಪ್ರಸ್ತುತ ಬಸವಸಾಗರ ಜಲಾಶಯಕ್ಕೆ 4 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 4.64 ಲಕ್ಷ ಕ್ಯೂಸೆಕ್ ಹೊರಹರಿವು ಇದೆ. 488.77 ಮೀಟರ್‌ಗೆ ನೀರು ಬಂದು ತಲುಪಿದ್ದು, 19.73 ಟಿಎಂಸಿ ಅಡಿ ಇದೆ ಎಂದು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.
ಜಮೀನುಗಳಿಗೆ ನುಗ್ಗಿದ ಪ್ರವಾಹ ನೀರು: ಬಸವಸಾಗರ ಜಲಾಶಯದಿಂದ 4.57 ಲಕ್ಷ ಪ್ರಮಾಣ ಭಾರೀ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹರಿಬಿಟ್ಟಿದ್ದರಿಂದ ಸಮೀಪದ ಕೋರಿಸಂಗಯ್ಯ ದೇವಸ್ಥಾನ ಹೊಂದಿಕೊಂಡು ನದಿ ತೀರದ ರೈತರ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟು ಮಾಡಿದೆ.
ವಿಷಯ ತಿಳಿದು ಹಾನಿಗೊಳಗಾದ ಜಮೀನುಗಳಿಗೆ ಬಿಜೆಪಿ ಯುವ ಮುಖಂಡ ಹನುಮಂತ ನಾಯಕ (ಬಬಲುಗೌಡ) ಭೇಟಿ ನೀಡಿ ವೀಕ್ಷಣೆ ಮಾಡಿ, ನೊಂದ ರೈತರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಮಲ್ಲಿಕಾರ್ಜುನ ಶೃಂಗೇರಿ, ಮಲ್ಲು ನವಲಗುಡ್ಡ, ಶಿವಪ್ಪ ಬಿರಾದಾರ, ಆಂಜನೇಯ ದೊರೆ, ಉದಯ ವಣಕುದರಿ, ಯಮನೂರಿ ಕಬಡರ, ಯಂಕಪ್ಪ, ಮಂಜು ಹಾದಿಮನಿ, ಅಮರೇಶ, ಗೌಡಪ್ಪ, ಪುಂಡಲಿಕ ಸೇರಿದಂತೆ ರೈತರು ಇದ್ದರು.