Advertisement

ಸಾಮಾಜಿಕ,ಧಾರ್ಮಿಕ ಬದಲಾವಣೆಗೆ ಕ್ರಾಂತಿಗಿಳಿದವರು ಶ್ರೀ ನಾರಾಯಣಗುರುಗಳು

04:42 PM Sep 10, 2022 | Team Udayavani |

ಸಾಮಾಜಿಕ,ಧಾರ್ಮಿಕ ಬದಲಾವಣೆಗೆ ಕ್ರಾಂತಿಗಿಳಿದವರು ಶ್ರೀ ನಾರಾಯಣಗುರುಗಳು ಧರ್ಮ ಗ್ಲಾನಿಯಾದಾಗಲೆಲ್ಲ ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ ಎಂದಿದ್ದ ಶ್ರೀ ಕೃಷ್ಣ. ಅಂತೆಯೇ ಧರ್ಮ ಸಂಸ್ಥಾಪನೆಗಾಗಿ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಂಡದ್ದು ಸುಳ್ಳಲ್ಲ. ಜಾತಿ ಪದ್ಧತಿಯ ಹೀನ ಸಂಪ್ರದಾಯಗಳನ್ನು ಆಚರಿಸುತ್ತಿದ್ದ ಕೇರಳ ಹುಚ್ಚರ ಸಂತೆ ಎಂದು ಕರೆಸಿಕೊಂಡ ಕಾಲದಲ್ಲಿ ದೇವಮಾನವನಂತೆ ಹುಟ್ಟಿ ಬಂದವರು ಶ್ರೀ ನಾರಾಯಣ ಗುರುವರ್ಯರು.   ಮನುಷ್ಯ ತಾನು ಮನುಷ್ಯತ್ವವನ್ನೇ ಮರೆತು ಹೀನ ಕೃತ್ಯಗಳಿಂದ ಪಶುತ್ವವನ್ನು ಮೆರೆದಾಗ ಅದನ್ನು ತಣ್ಣನೆ ನೋಡುತ್ತಾ ಕೂರದೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಬಿರುಸಾದ ಕ್ರಾಂತಿಗಿಳಿದು ಮಹತ್ತರ ಬದಲಾವಣೆಯನ್ನು ತಂದವರು ಜಗದ್ಗುರು ಶ್ರೀ ನಾರಾಯಣಗುರುಗಳು.

Advertisement

ಇಂದು ನಾವು ಊಹಿಸಲೂ ಅಸಾಧ್ಯವಾದ ಜಾತಿ ಪದ್ಧತಿಯ ಕ್ರೂರ ಆಚರಣೆಗಳು ಬಲವಾಗಿದ್ದ ಆ ಕಾಲದಲ್ಲಿ ಅದನ್ನು ವಿರೋಧಿಸುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಆದರೆ ಸಮಾಜೋದ್ಧಾರದ ಧ್ಯೇಯವೊಂದೇ ಉತ್ಕಟವಾಗಿದ್ದುದರಿಂದ ಗುರುಗಳಿಗೆ ಬೇರೆ ಯಾವುದೇ ಸಮಸ್ಯೆಗಳು ಅಡ್ಡಿಯೆನಿಸಲೇ ಇಲ್ಲ. ಆ ಧೈರ್ಯ ಬರಲು ಮತ್ತೂಂದು ಮುಖ್ಯ ಕಾರಣ ಅವರು ಪಡಕೊಂಡ ಶಿಕ್ಷಣ. ಅವರೊಂದು ಜ್ಞಾನದ ಭಂಡಾರವಾಗಿದ್ದರು. ಬಹುಭಾಷಾ ಪಾಂಢಿತ್ಯವನ್ನು ಪಡೆದು, ಅನೇಕ ಶಾಸ್ತ್ರ ಗ್ರಂಥ ಪಾರಂಗತರಾಗಿ ಅನ್ಯಾಯವನ್ನು ಎದುರಿಸುವ ಗಟ್ಟಿತನವನ್ನು ತಾನು ಸ್ವತಃ ತೋರಿದ್ದು ಮಾತ್ರವಲ್ಲದೆ ಆ ಮೂಲಕ ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದು ಜನತೆಗೆ ಕರೆ ನೀಡಿದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಅಲ್ಲಲ್ಲಿ ಶಾಲೆಗಳನ್ನೂ ದೇವಾಲಯಗಳನ್ನೂ ಗ್ರಂಥಾಲಯಗಳನ್ನೂ ಸ್ಥಾಪಿಸಿದವರು.

ಸಾಧುತನದ ಎಲ್ಲೆ ಮೀರದ ಕ್ರಾಂತಿಕಾರಕ ನಡೆ : “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂದು ಸಾರಿದ ಜಗದ್ಗುರುಗಳು, ಕೆಳಜಾತಿಯವರಿಗೆ ದೇವಸ್ಥಾನದ ಒಳ ಪ್ರವೇಶ ನಿಷಿದ್ಧವಾಗಿದ್ದಾಗ ಅವರಿಗಾಗಿಯೇ ಅರವೀಪುರಂನಲ್ಲಿ ಪ್ರತ್ಯೇಕ ಶಿವಾಲಯವೊಂದನ್ನು ಪ್ರತಿಷ್ಠಾಪಿಸಿದ್ದು, ಮಾತ್ರವಲ್ಲ ಹಾಗೆ ಮಾಡಿ ಮೇಲ್ಜಾತಿಯವರೆಂದು ಕರೆಸಿಕೊಂಡವರ ಕೆಂಗಣ್ಣಿಗೆ ಗುರಿಯಾದಾಗ, ನಾನು ಸ್ಥಾಪಿಸಿದ್ದು ಈಳವರ ಶಿವನನ್ನು ಎಂದ ಅವರ ಮಾತಿನಲ್ಲಿ ತೀಕ್ಷ್ಣವಾದ ವ್ಯಂಗ್ಯ, ರೋಷ ಎಲ್ಲವನ್ನೂ ಗುರುತಿಸಬಹುದು. ಈ ರೀತಿಯ ರೋಷವೇ ಸಮಾಜವನ್ನು ಎಲ್ಲ ಆಯಾಮಗಳಲ್ಲಿ ಉದ್ಧರಿಸುವುದಕ್ಕೆ ಕಾರಣವಾಯಿತು. ಆದರೆ ಅವರ ಕ್ರಾಂತಿಕಾರಕ ನಡೆಗಳೆಲ್ಲವೂ ಸಾಧುತನದ ಎಲ್ಲೆಯನ್ನು ಎಲ್ಲೂ ಮೀರಿದ್ದಿಲ್ಲ.

ಸಾಮಾಜಿಕ ಸುಧಾರಣೆ: ದೇಶಸೇವೆಯೇ ಈಶಸೇವೆ ಎಂಬುದನ್ನು ಬಲವಾಗಿ ನಂಬಿದ್ದ ಗುರುಗಳು ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀ ಶೋಷಣೆಯೇ ಮುಂತಾದ ಅನೇಕ ಕೆಟ್ಟ ಪದ್ಧತಿಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಬಹುಪತ್ನಿತ್ವವನ್ನು ನಿಲ್ಲಿಸಿ ಸರಳ ವಿವಾಹಕ್ಕೆ ಒತ್ತು ನೀಡಿ ಅಂತರ್ಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು. ನೋವು ಅನುಭವಿಸುವವರೆಲ್ಲರೂ ನನ್ನವರು ಮತ್ತು ಅವರ ನೋವು ನನ್ನ ನೋವು ಎಂಬ ಭಾವನೆಯೇ ಈ ರೀತಿಯ ಕ್ರಾಂತಿಗೆ ಕಾರಣವಾಯಿತು. ಗುರುಗಳು ಆತ್ಮನಲ್ಲಿ ಪರಮಾತ್ಮನನ್ನು ಕಾಣುವ ಅದ್ವೈತ ಮತವನ್ನು ಬಲವಾಗಿ ನಂಬಿದ್ದರು. ಹೀಗಾಗಿಯೇ ಬಹುಶಃ ಪ್ರತಿಯೊಬ್ಬರಲ್ಲೂ ದೇವರನ್ನು ಕಂಡರು. ಇದಕ್ಕೆ ಕಳವಂಗೋಡದ ದೇವಾಲಯದಲ್ಲಿ ಮೂರ್ತಿಯ ಬದಲಿಗೆ ಕನ್ನಡಿಯನ್ನು ಸ್ಥಾಪಿಸಿದ್ದು ಒಂದು ಬಲವಾದ ನಿದರ್ಶನ ಮತ್ತು ಗುರುಗಳ ಈ ನಡೆ ಹಲವಾರು ಸಂದೇಶಗಳನ್ನೇ ನೀಡುತ್ತದೆ.

ಸಾಮಾಜಿಕ ಸುಧಾರಣೆಯಿಂದ “ಜಗದ್ಗುರು’ : ಆರ್ಥಿಕ ಸ್ವಾತಂತ್ರ್ಯವನ್ನು ಪಡೆದು ಶೈಕ್ಷಣಿಕವಾಗಿ ಬೆಳೆದರೆ ಮಾತ್ರ ಸಮಾಜದಲ್ಲಿ ಸಭ್ಯ, ಸದೃಢ ನಾಗರಿಕರಾಗಿ ಬಾಳಲು ಸಾಧ್ಯ ಎಂದವರು ಗುರುಗಳು. ಸಾಮಾಜಿಕ ಸುದೃಢತೆಗೆ ಕೃಷಿ ಮತ್ತು ಕೈಗಾರಿಕೆಯೂ ಅತ್ಯಂತ ಪ್ರಾಮುಖ್ಯವಾದವುಗಳು ಎಂದು ಸಾರಿ ಹೇಳಿದರು. ಗುರುಗಳು ತನ್ನ ಇಡೀ ಜೀವನವನ್ನೇ ಲೋಕಕ್ಕೆ ಸಾರ್ವಕಾಲಿಕ ಸಂದೇಶವನ್ನಾಗಿ ಬಿಟ್ಟು ಹೋದರು. ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ವ್ಯಕ್ತಿ ಇನ್ನೊಬ್ಬರಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯವೇ ಎಂದು ಅಚ್ಚರಿ ಪಡುವಷ್ಟು ಬದಲಾವಣೆಗಳನ್ನು ತಂದ ಸಂತ. ಹಾಗಾಗಿಯೇ ಇಂದು ಜಗದ್ಗುರು ಎನಿಸಿಕೊಂಡಿದ್ದಾರೆ. ಅಧರ್ಮವು ಮತ್ತೆ ಹೆಡೆಯಾಡಲಾರಂಭಿಸಿದೆಯೋ ಎಂಬ ಸಂಶಯ ಬರುವಂತಹ ಪ್ರಸ್ತುತ ದಿನಗಳಲ್ಲಿ ಜಗದ್ಗುರು ಸಂತ ಶ್ರೀ ನಾರಾಯಣ ಗುರುವರ್ಯರ ಸಂದೇಶಗಳನ್ನು ನಾವು ಅನುಸರಿಸಬೇಕಾಗಿದೆ, ಎಲ್ಲೆಡೆ ಸಾರಬೇಕಾಗಿದೆ ಮತ್ತು ಅನುಷ್ಠಾನ ಗೊಳಿಸಬೇಕಾಗಿದೆ. ಅದಕ್ಕೆಂದೇ ಇಂದಿನ ಯುವ ಜನಾಂಗ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಆಳವಾಗಿ ಅಧ್ಯಯನ ಮಾಡಬೇಕಾದುದು ತೀರ ಅಗತ್ಯವಾಗಿದೆ.

Advertisement

 

-ಅಮಿತಾಂಜಲಿ ಕಿರಣ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next