Advertisement

ಸಾಗರಕ್ಕೆ ಹೆಚ್ಚಿನ ಪರಿಹಾರ ಕೊಡಿಸುವ ಪ್ರಯತ್ನ: ಡಾ. ನಾರಾಯಣ ಗೌಡ

04:41 PM Jul 14, 2022 | Team Udayavani |

ಸಾಗರ: ತಾಲೂಕಿನಲ್ಲಿ ವಿಪರೀತ ಮಳೆಯಿಂದ 51 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಹೆಚ್ಚಿನ ಪರಿಹಾರ ಕಲ್ಪಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ ತಿಳಿಸಿದ್ದಾರೆ.

Advertisement

ತಾಲೂಕಿನ ವಿವಿಧ ಭಾಗಗಳಲ್ಲಿ ಉಂಟಾಗಿರುವ ಮಳೆಹಾನಿಯನ್ನು ಗುರುವಾರ ಪರಿಶೀಲನೆ ನಡೆಸಿ, ನಗರಕ್ಕೆ ನೀರು ಪೂರೈಕೆ ಮಾಡುವ ಬಸವನಹೊಳೆ ಡ್ಯಾಂ ಪ್ರದೇಶ ವೀಕ್ಷಣೆ ನಂತರ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ವಿಪರೀತ ಮಳೆಯಿಂದಾಗಿ ತಾಲೂಕಿನಲ್ಲಿ ದೊಡ್ಡಮಟ್ಟದ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ರೂ. ಭಾಗಶಃ ಮನೆ ಕಳೆದುಕೊಂಡವರಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ನೆರೆಯಿಂದ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ಅಗತ್ಯ ಕಂಡು ಬಂದಲ್ಲಿ ಕಾಳಜಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಮನೆ ಕಳೆದುಕೊಂಡವರಿಗೆ ಫುಡ್‌ಕಿಟ್ ವಿತರಣೆ ಮಾಡಿ ಅವರ ನೆರವಿಗೆ ಧಾವಿಸುವಂತೆ ಆದೇಶ ಮಾಡಿದರು.

ನೆರೆಹಾನಿ ಕುರಿತು ಸಚಿವರಿಗೆ ಮಾಹಿತಿ ನೀಡಿದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು, ತಾಲೂಕಿನಲ್ಲಿ ವಿಪರೀತ ಮಳೆಗೆ 48 ಮನೆ, 11 ಕೊಟ್ಟಿಗೆ, 6 ಶಾಲೆ ಕುಸಿದು ಹೋಗಿದೆ. 3 ಜಾನುವಾರು ಮೃತಪಟ್ಟಿದ್ದು, 39 ರಸ್ತೆ ಹಾಳಾಗಿದೆ. ಮೊದಲ ಹಂತದಲ್ಲಿ ಸುಮಾರು 51 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ : ಅವಧಿಗೆ ಮುನ್ನವೇ ತುಂಬಿದ ಭದ್ರಾ ಜಲಾಶಯ, 12 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ

ಮಳೆ ಇನ್ನು ಕೆಲವು ದಿನ ಸುರಿಯುವ ಸಾಧ್ಯತೆ ಇರುವುದರಿಂದ ಇನ್ನಷ್ಟು ಹಾನಿಯಾಗುವ ಸಂಭವವಿದೆ. ಮನೆ ಬಿದ್ದವರಿಗೆ ತಕ್ಷಣ 5 ಲಕ್ಷ ರೂಪಾಯಿ ನೀಡಲು ಅಗತ್ಯ ಕ್ರಮ ವಹಿಸಬೇಕು. ಸರ್ಕಾರ ನೆರೆಹಾನಿ ಸರಿಪಡಿಸಲು ತಕ್ಷಣ ಮೊದಲ ಹಂತದಲ್ಲಿ 50 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವೈಶಾಲಿ, ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ತಾಲೂಕು ಪಂಚಾಯ್ತಿ ಇಓ ಪುಷ್ಪಾ ಎಂ. ಕಮ್ಮಾರ್, ಪೌರಾಯುಕ್ತ ರಾಜು ಡಿ. ಬಣಕಾರ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next