Advertisement

ನಾರಾಯಣಗೌಡ, ಸೋಮಣ್ಣ ಮುನಿಸು ಸದ್ಯಕ್ಕೆ ಶಮನ

12:36 AM Mar 08, 2023 | Team Udayavani |

ಬೆಂಗಳೂರು: ಮುನಿಸಿಕೊಂಡಿದ್ದ ಇಬ್ಬರು ಸಚಿವರ ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ರಾತ್ರಿ ಚರ್ಚೆ ನಡೆಸಿದ್ದು, ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

Advertisement

ತಮ್ಮ ಅಧಿಕೃತ ನಿವಾಸಕ್ಕೆ ಇವರಿಬ್ಬರನ್ನೂ ಕರೆಯಿಸಿ ಚರ್ಚೆ ನಡೆಸಿರುವ ಬೊಮ್ಮಾಯಿ ಇಬ್ಬರಿಗೂ ಪಕ್ಷ ಬಿಟ್ಟು ಹೋಗದಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಸಚಿವರು ತಮ್ಮ ಪಕ್ಷಾಂತರ ನಿರ್ಧಾರವನ್ನು ಸದ್ಯಕ್ಕೆ ಬದಲಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕೆಲ ಸಚಿವರು ಪಕ್ಷ ತೊರೆಯಲು ನಿರ್ಧರಿಸಿದ್ದರು ಎಂಬ ವದಂತಿಗೆ ಇಂಬು ಸಿಕ್ಕಂತಾಗಿದೆ. ಸಚಿವರೇ ಪಕ್ಷ ತೊರೆದರೆ ಚುನಾವಣಾ ಹೊಸ್ತಿಲಲ್ಲಿ ಮುಜುಗರವುಂಟಾಗಬಹುದೆಂಬ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಈ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ.

ಸಹ ಪ್ರಭಾರಿ ಜತೆ: ಇದೆಲ್ಲದರ ಮಧ್ಯೆ ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಸಚಿವ, ರಾಜ್ಯ ಚುನಾವಣಾ ಸಹಪ್ರಭಾರಿ ಮನ್ಸುಖ್‌ ಮಾಂಡವೀಯ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.

ರಾಜ್ಯ ಚುನಾವಣೆಗೆ ಸಂಬಂಧಪಟ್ಟ ಒಟ್ಟಾರೆ ವಿದ್ಯಮಾನಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕೂಡಾ ಜತೆಗಿದ್ದರು ಎನ್ನಲಾಗಿದೆ.

ಬಿಜೆಪಿ ತೊರೆಯುವುದಾಗಿ ಎಲ್ಲೂ ಹೇಳಿಲ್ಲ: ಸಚಿವ ಸೋಮಣ್ಣ
ಕನಕಪುರ: ನಾನು ಬಿಜೆಪಿ ತೊರೆಯುವುದಾಗಿ ಎಲ್ಲೂ ಹೇಳಿಲ್ಲ, ಮಾಧ್ಯಮಗಳ ಸೃಷ್ಟಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

Advertisement

ಬೆಂಗಳೂರು ರಸ್ತೆಯ ತುಂಗಣಿ ಬಳಿ ಗೃಹ ಮಂಡಳಿ ಇಲಾಖೆಯಿಂದ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ಸಂಯುಕ್ತ ವಸತಿ ಬಡಾವಣೆ ಪ್ರವೇಶ ದ್ವಾರ ಉದ್ಘಾಟನೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು 45 ವರ್ಷಗಳಿಂದ ಬೆಂಗಳೂರನ್ನು ಪ್ರತಿನಿಧಿಸುತ್ತಿದ್ದೇನೆ.

ರಾಜಕೀಯ ಅಂದಮೇಲೆ ಹಲವಾರು ಚರ್ಚೆಗಳು, ಒಳಾರ್ಥಗಳು ಇರುತ್ತವೆ. ನಾವು ಕಾಯಕದಲ್ಲಿ ದೇವರನ್ನು ಕಾಣುತ್ತೇವೆ, ಸಣ್ಣ ಅಪಚಾರವಾಗಲೂ ಎಲ್ಲೂ ಅವಕಾಶ ಕೊಟ್ಟಿಲ್ಲ. ಕೆಲವು ವಿಚಾರಗಳಲ್ಲಿ ವೈಯಕ್ತಿಕವಾಗಿ ನನ್ನ ಅನುಭವಕ್ಕೆ ತಕ್ಕಂತೆ ನೋವುಗಳು ಇವೆ, ಅದನ್ನು ಹೇಳಿಕೊಳ್ಳಲು ಸಾಧ್ಯವೇ ಎಂದು ಹೇಳುವ ಮೂಲಕ ತಮ್ಮಲ್ಲಿರುವ ಅಸಮಾಧಾನದ ಬಗ್ಗೆ ಸುಳಿವು ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next