Advertisement

ನಾರಾಯಣ ಗೌಡರ ನಡೆ ಕೈ ಕಡೆಗೆ ಏಕೆ?

12:06 AM Mar 10, 2023 | Team Udayavani |

ಬೆಂಗಳೂರು: ವಲಸೆ ಹಕ್ಕಿಗಳಲ್ಲಿ ಒಂದಾಗಿರುವ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ| ನಾರಾಯಣ ಗೌಡರು ಈಗ ಸಂಸಾರ ಸಮೇತ ಗೂಡು ತೊರೆದು ಮತ್ತೂಂದು ಗೂಡಿಗೆ ಹಾರಲು ರೆಕ್ಕೆ ಬಿಚ್ಚತೊಡಗಿದ್ದಾರೆ. ಕಳೆದ 5 ವರ್ಷಗಳ ಅವಧಿಯಲ್ಲಿ ಅವರು ಈಗಾಗಲೇ ಜೆಡಿಎಸ್‌, ಬಿಜೆಪಿ ಮನೆಯಲ್ಲಿದ್ದು ಈಗ ಮೂರನೇ ಮನೆಯಂತೆ ಕಾಣುತ್ತಿರುವ ಕಾಂಗ್ರೆಸ್‌ ಕಡೆ ಕೈ ಚಾಚಿದ್ದಾರೆ. ಗೌಡರ ಇತ್ತೀಚಿನ ದಿನಗಳ ನಡೆ-ನುಡಿ ಎಲ್ಲವೂ ಕಮಲದಲ್ಲಿ ಕೆಸರು ಮಾಡಿಕೊಂಡಿದ್ದು ಅಂತಿಮವಾಗಿ ಕೈತೊಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ.

Advertisement

ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಸಂಪುಟ ದರ್ಜೆ ಸ್ಥಾನಮಾನ, ಒಂದಲ್ಲ ಎರಡು ಖಾತೆಗಳು, ಕೆಲವು ಕಾಲ ಮಂಡ್ಯ ಜಿಲ್ಲಾ ಉಸ್ತುವಾರಿ ಈಗ ಎಲ್ಲವನ್ನೂ ಅನುಭವಿಸಿದ್ದ ಮನೆ ತೊರೆಯಲು ಕಾರಣ ಏನು ಎಂಬುದನ್ನು ಹುಡುಕುತ್ತಾ ಹೊರಟರೆ ಗೌಡರಿರುವ ಮನೆಯಲ್ಲಿ ಭವಿಷ್ಯವಿಲ್ಲ ಎಂಬುದು ಅವರ ಅನಿಸಿಕೆಯಂತೆ ಕಾಣುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಬಿಜೆಪಿ ಸೇರುವ ಮುನ್ನ ನೀಡಿದ್ದ ದೊಡ್ಡ ಭರವಸೆಗಳು ಈಡೇರಿಲ್ಲ, ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಪಕ್ಷದ ಮೇಲಿಟ್ಟಿದ್ದ ನಂಬಿಕೆಗಳು ಹುಸಿಯಾಗಿವೆ ಎಂದು ಹೇಳಿಕೊಂಡಿದ್ದಾರಂತೆ. ತಾವು ಈ ಸಲ ಬಿಜೆಪಿಯಿಂದ ಸ್ಪರ್ಧಿಸಿದರೆ ಸೋಲು ಗ್ಯಾರಂಟಿ ಎಂಬುದು ಅವರಿಗೆ ಖಾತರಿಯಾಗಿದೆಯಂತೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರೆ ಸಚಿವರಾಗ ದಿದ್ದರೂ ಶಾಸಕರಾಗಿಯಂತೂ ಇರಬಹುದು ಎಂಬುದು ಅವರ ವಿಶ್ವಾಸ. ಹೀಗಾಗಿ ತಮ್ಮ ರಾಜ ಕೀಯ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ತೊರೆದು ಜೆಡಿಎಸ್‌ ಇಲ್ಲವೇ ಕಾಂಗ್ರೆಸ್‌ ಸೇರುವುದು ಅನಿವಾರ್ಯ ವಾಗಿದೆ. ಮನೆ ಬಿಟ್ಟು ಬಂದಿದ್ದ ಜೆಡಿಎಸ್‌ಗೆ ವಾಪಸ್‌ ಹೋಗುವಂತಿಲ್ಲ, ಬಿಜೆಪಿಯಲ್ಲಿ ಮುಂದೆ ಇರುವಂತಿಲ್ಲ, ಸದ್ಯಕ್ಕೆ ದಾರಿದೀಪದಂತೆ ಕಾಣುತ್ತಿರುವ ಕಾಂಗ್ರೆಸ್‌ ಸೇರದೇ ಬೇರೆ ದಾರಿ ಇಲ್ಲ ಎಂಬ ಸಂದಿಗ್ಧ ಸ್ಥಿತಿ ಗೌಡರದ್ದು.

ಉಪ ಚುನಾವಣೆ ವೇಳೆ ಯಾವುದೇ ಕಾರಣಕ್ಕೂ ಜೆಡಿಎಸ್‌ ಗೆಲ್ಲಬಾರದೆಂಬ ಕಾರಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿದ್ದರೂ ಬಿಜೆಪಿಯ ನಾರಾಯಣ ಗೌಡರಿಗೆ ಮಂಡ್ಯ ಜಿಲ್ಲೆಯ ಜೆಡಿಎಸ್‌ನ ಮಾಜಿ ನಾಯಕರು ಒಗ್ಗಟ್ಟಾಗಿ ಬೆಂಬಲಿಸಿದ್ದರಿಂದ ಗೌಡರ ಗೆಲುವು ಸುಲಭವಾಯಿತು. ಈ ಋಣ ತೀರಿಸಲು ವಿಧಾನ ಪರಿಷತ್ತಿಗೆ ನಡೆದ ಪದವೀಧರ ಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತಿಯಾಗಿ ಗೌಡರು ಕೆಲಸ ಮಾಡಿದ್ದರಿಂದ ಕಾಂಗ್ರೆಸ್‌ ಗೆದ್ದಿತು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಹೀಗಾಗಿ “ಕೊಟ್ಟು-ತೆಗೆದುಕೊಳ್ಳುವುದು’ ಕಾಂಗ್ರೆಸ್‌ ಜತೆ ಚೆನ್ನಾಗಿಯೇ ಕುದುರಿರುವುದರಿಂದ ಅಂತಿಮವಾಗಿ ಕಾಂಗ್ರೆಸ್‌ ಕಡೆ ಮನಸ್ಸು ಹರಿಬಿಟ್ಟಿದ್ದಾರಂತೆ.

ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ ಬಿಜೆಪಿ ಖಾತೆಯನ್ನೇ ತೆರೆದಿರಲಿಲ್ಲ, ಅಂತಹ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿಯ ಖಾತೆ ತೆರೆಯಲಾಗಿದೆ ಎಂದು ಫ‌ಲಿತಾಂಶದ ಬಳಿಕ ಬಹಳ ವೀರಾವೇಷದಿಂದ ಹೇಳಿಕೊಂಡಿದ್ದ ಗೌಡರೇ ಈಗ ತಾವೇ ತೆರೆದಿದ್ದ ಖಾತೆಯನ್ನು ತಾವೇ ಕ್ಲೋಸ್‌ ಮಾಡಲು ಹೊರಟಿದ್ದಾರೆ. ಮನೆ ತೊರೆದು ಇನ್ನೊಂದು ಮನೆ ಸೇರಲು ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ. ಬಹುತೇಕ ಯುಗಾದಿ ಹಬ್ಬದ ಬಳಿಕ ಇಲ್ಲವೇ ಚುನಾವಣೆ ಘೋಷಣೆ ಬಳಿಕ ನಾರಾಯಣ ಗೌಡರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಎಲ್ಲ ಭೂಮಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಎಷ್ಟೇ ವಿರೋಧವಿದ್ದರೂ ಕಾಂಗ್ರೆಸ್‌ನ ರಾಜ್ಯಮಟ್ಟದ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಟಿಕೆಟ್‌ ಫೈನಲ್‌ ಮಾಡಿಕೊಂಡಿದ್ದಾರೆ ಎಂಬುದು ಕಾಂಗ್ರೆಸ್‌ ಮೂಲಗಳ ಖಚಿತತೆ.

– ಎಂ.ಎನ್‌.ಗುರುಮೂರ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next