Advertisement

ಡಿಸೆಂಬರ್‌ ಅಂತ್ಯಕ್ಕೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಕಾರ್ಯಾರಂಭ :ನಾರಾಯಣ ಗೌಡ

08:04 PM Nov 20, 2021 | Team Udayavani |

ಬೆಂಗಳೂರು : ಕರ್ನಾಟಕ ರೇಷ್ಮೆ ಮಾರುಕಟ್ಟೆ ವಿಸ್ತರಣೆ ಸಂಬಂಧ ಉತ್ತರ ಪ್ರದೇಶದ ವಾರಣಾಸಿಗೆ ಕೈಗೊಂಡಿದ್ದ ಪ್ರವಾಸ ಫಲಪ್ರವಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.

Advertisement

ಉತ್ತರ ಪ್ರದೇಶದಲ್ಲಿ ಸುಮಾರು 3 ಸಾವಿರ ಮೆಟ್ರಿಕ್ ಟನ್ ರೇಷ್ಮೆಗೆ ಬೇಡಿಕೆ ಇದೆ. ಸುಮಾರು 18,189 ಕುಟುಂಬಗಳು ರೇಷ್ಮೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಆದರೆ ಕೇವಲ 258 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಮಾತ್ರ ಉತ್ಪಾದಿಸಲಾಗುತ್ತಿದೆ. ಹಾಗಾಗಿ ಕರ್ನಾಟಕದ ಸೇರಿದಂತೆ ಬೇರೆ ರಾಜ್ಯಗಳ ಮೇಲೆ ಬನರಾಸ್ ನೇಕಾರರು ಅವಲಂಭಿತರಾಗಿದ್ದಾರೆ. ವಾರಣಾಸಿಯಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದ್ದು, ಕರ್ನಾಟಕ ರೇಷ್ಮೆ ಮಂಡಳಿಯ ಮಾರುಕಟ್ಟೆಯನ್ನು ಸ್ಥಾಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದರು.

ನವೆಂಬರ್ 18 ರಂದು ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ ಉತ್ತರ ಪ್ರದೇಶ ಸರ್ಕಾರದ ರೇಷ್ಮೆ ಇಲಾಖೆ ಅಧಿಕಾರಿಗಳು, ರೇಷ್ಮೆ ರೀಲರ್ಸ್ ಹಾಗೂ ನೇಕಾರರ ಜೊತೆ ಸಭೆ ನಡೆಸಿ, ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಸಮಗ್ರ ಚರ್ಚೆ ನಡೆಸಲಾಯಿತು.

ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಯುಪಿ ಸರ್ಕಾರ ತಕ್ಷಣ ಸ್ಪಂದಿಸಿದೆ. ವಾರಣಾಸಿಯ ಸಾರಂಗ್ ತಲಾಬ್‌ನಲ್ಲಿ ಕೆಎಸ್‌ಎಂಬಿಗೆ ಜಾಗ ನೀಡಿದ್ದು, ಅಲ್ಲಿ ಮಳಿಗೆ ತೆಗೆದು ರೇಷ್ಮೆ ಮಾರುಕಟ್ಟೆ ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಯುಪಿ ಸರ್ಕಾರ, NHDC ಹಾಗೂ ರಾಜ್ಯ ಸರ್ಕಾರದ ನಡುವೆ MOU ಮಾಡಿಕೊಳ್ಳಲಾಗುತ್ತದೆ. ಒಡಂಬಡಿಕೆ ಪ್ರಕ್ರಿಯೆಗಳು ಪೂರ್ಣವಾದ ಕೂಡಲೇ ಅಗತ್ಯವಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ ಮಾರುಕಟ್ಟೆ ಪ್ರಾರಂಭಿಸಲಾಗುತ್ತದೆ.

ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದಲ್ಲಿ ರೇಷ್ಮೆಗೆ ಬೇಡಿಕೆ ಹೆಚ್ಚಿದ್ದರೂ ಉತ್ತರ ಪ್ರದೇಶದಲ್ಲಿ ಕೇವಲ 7984 ಎಕರೆಯಲ್ಲಿ‌ ಮಾತ್ರ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ಹಾಗಾಗಿ , ಉತ್ತರ ಪ್ರದೇಶದಲ್ಲಿ ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಸಿದ್ದಪಡಿಸಿದ್ದ ವರದಿ ಸಲ್ಲಿಸಲಾಯಿತು.

Advertisement

ಕರ್ನಾಟಕದಲ್ಲಿ ಬಳಸುತ್ತಿರುವ ತಂತ್ರಜ್ಞಾನ, ರೈತರಿಗೆ ನೀಡುತ್ತಿರುವ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆಯಿಂದ ಉತ್ಪಾದಿಸಲಾಗುತ್ತಿರುವ ಉಪ ಉತ್ಪನ್ನಗಳ ಬಗ್ಗೆಯೂ ತಿಳಿಸಿಕೊಡಲಾಯಿತು. ಅಲ್ಲದೇ ಉತ್ತರ ಪ್ರದೇಶದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಅಗತ್ಯವಿರುವ ತಂತ್ರಜ್ಞಾನ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

ಇದಲ್ಲದೇ, ಬನರಾಸ್ ಸೀರೆ ನೇಯ್ಗೆಗೆ ಹೆಸರುವಾಸಿ ಆಗಿರುವ ಲಲ್ಲಾಪುರ ಪ್ರದೇಶಕ್ಕೆ ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿ ನೇಕಾರರ ಜೊತೆ ಮಾತುಕತೆ ನಡೆಸಿದರು. ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪಿಸುತ್ತಿರುವ ಮಾಹಿತಿ ನೀಡಿ, ಕರ್ನಾಟಕದ ರೇಷ್ಮೆಯನ್ನು ಖರೀದಿಸುವಂತೆ ನೇಕಾರರನ್ನು ಮನವೊಲಿಸಿದರು.

ಇದನ್ನೂ ಓದಿ : ಅನಾಥ ಮಗುವಿಗೆ ‘ವೈಷ್ಣವಿ’ಎಂದು ನಾಮಕರಣ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ

ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ಜಾಗ ನಿಗದಿ: ಸಚಿವ ಡಾ.ನಾರಾಯಣಗೌಡ

ಬನರಾಸ್ ಸೀರೆ ನೇಯ್ಗೆಗೆ ಸೇರಿದಂತೆ ವಾರಣಾಸಿ ನೇಕಾರರಿಗೆ ಅಗತ್ಯವಿರುವ ಗುಣಮಟ್ಟದ ರೇಷ್ಮೆ ಪೂರೈಸಲು ಕೆಎಸ್‌ಎಂಬಿ ಸಿದ್ದವಿದೆ. ಈ ಬಗ್ಗೆ ಉತ್ತರ ಪ್ರದೇಶದ ಅಧಿಕಾರಿಗಳ ಜೊತೆ ಉತ್ತಮವಾದ ಸಭೆಯಾಗಿದ್ದು, ತಕ್ಷಣವೇ ಮಾರುಕಟ್ಟೆಗೆ ಜಾಗ ಗುರುತಿಸಿದ್ದಾರೆ. ಎಂಒಯು ಸೇರಿದಂತೆ ಎಲ್ಲಾ‌ ಕಾನೂನುನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ ಕರ್ನಾಟಕ ಮಾರುಕಟ್ಟೆ ಆರಂಭಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕರ್ನಾಟಕ ರೇಷ್ಮೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡುವ ನಮ್ಮ ಯೋಚನೆಗೆ ವಾರಣಾಸಿ ಪ್ರವಾಸವೂ ಫಲಪ್ರದವಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವ ಡಾ.ನಾರಾಯಣ ಗೌಡ ಅವರ ನೇತೃತ್ವದ ನಿಯೋಗದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಕೆಎಸ್‌ಎಂಬಿ ಎಂಡಿ ಅನುರಾಧ ಸೇರಿದಂತೆ 9 ಜನರ ಅಧಿಕಾರಿಗಳು ವಾರಣಾಸಿಗೆ ತೆರಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next