“ಅಪ್ಪಾ ಗಣೇಶ, ಇಲ್ಲಿ ಏನಾಗ್ತಿದೆ ಅಂತ ಅರ್ಥಾನೇ ಆಗ್ತಿಲ್ಲ …’ ಚಿತ್ರದಲ್ಲಿ ಏನಾಗುತ್ತಿದೆ ಎಂದು ಬರೀ ಪಾತ್ರಕ್ಕಷ್ಟೇ ಅಲ್ಲ, ಪ್ರೇಕ್ಷಕನಿಗೂ ಸ್ಪಷ್ಟವಾಗುವುದಿಲ್ಲ. ಆದರೆ, ಏನೋ ಒಂದು ವಿಭಿನ್ನವಾಗಿ ಆಗುತ್ತಿದೆ ಎಂದು ಮಾತ್ರ ಗೊತ್ತಾಗುತ್ತಿರುತ್ತದೆ. ಚಿನ್ನದ ಅಂಗಡಿ ದೋಚುವುದಕ್ಕೆ ಹೋಗುವವನು, ಆ ಅಂಗಡಿಯ ಮಾಲೀಕನಿಗೇ ಫೋನ್ ಮಾಡಿ, ತಾನು ಕಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಕೊಡುತ್ತಿರುತ್ತಾನೆ. ಅದೇ ತಂಡದ ಇನ್ನೊಬ್ಬ ಪೊಲೀಸರಿಗೆ ಫೋನ್ ಮಾಡಿ, ಕಳ್ಳತನವಾಗುತ್ತಿರುವ ಬಗ್ಗೆ ಹೇಳುತ್ತಿರುತ್ತಾನೆ. ಅಂಗಡಿ ಒಳಗೆ ದರೋಡೆ ನಡೆಯುತ್ತಿದೆ. ಹೊರಗೆ ಆ ಕಡೆ ಅಂಗಡಿಯವರು, ಈ ಕಡೆ ಪೊಲೀಸರು, ಇವರ ಜೊತೆಗೆ ಆ ಕಳ್ಳರನ್ನು ಹುಡುಕಿಕೊಂಡು ಬಂದ ಇನ್ನಷ್ಟು ಜನ …
ಆಗ ಸಹಜವಾಗಿಯೇ ಪ್ರೇಕ್ಷಕರಿಗೂ, ಅಲ್ಲೇನಾಗುತ್ತಿದೆ ಎಂಬ ವಿಷಯ ಅರ್ಥವಾಗುವುದಿಲ್ಲ. ಕ್ರಮೇಣ ಚಿತ್ರ ಮುಂದುವರೆಯುತ್ತಿದ್ದಂತೆ, ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ. ಒಂದು ಸಂದರ್ಭದಲ್ಲಿ ಇಂಥದ್ದೊಂದು ಕಥೆ ಮತ್ತು ಚಿತ್ರಕಥೆ ಮಾಡಿದವರ ಬಗ್ಗೆ ಮೆಚ್ಚುಗೆಯೂ ಆಗುತ್ತದೆ. ಆ ಮಟ್ಟಕ್ಕೆ ಹೆಣೆಯಲಾಗಿದೆ. ಚಿತ್ರದ ಹೈಲೈಟ್ ಎಂದರೆ ನಾಯಕ ಮತ್ತು ಖಳನಾಯಕನ ನಡುವಿನ ಮೈಂಡ್ ಗೇಮ್. ನಾಯಕ ಚಾಪೆ ಕೆಳಗೆ ತೂರಿದರೆ, ಖಳನಾಯಕ ರಂಗೋಲಿ ಕೆಳಗೆ ತೂರುತ್ತಾನೆ, ನಾಯಕ ಅವನನ್ನೂ ಮೀರಿಸಿ ಭೂಮಿ ಕೆಳಗೇ ತೂರಿ ಹೇಗೆ ಖಳನಾಯಕನನ್ನು ಬಗ್ಗುಬಡಿಯುತ್ತಾನೆ ಎನ್ನುವುದು ಚಿತ್ರದ ಹೈಲೈಟ್.
ಈ ಕಥೆ ಕೇಳಿ, ಅವರೇ ಈ ಚಿತ್ರದ ಕಥೆ ಬರೆದರಾ ಎಂಬ ಸಂಶಯ ಬರುವುದು ಸಹಜ. ಏಕೆಂದರೆ, ನಾರಾಯಣ್ ಇದುವರೆಗೂ ಕೌಟುಂಬಿಕ ಮತ್ತು ಪ್ರೇಮಮಯ ಕಥೆಗಳನ್ನು ಬರೆದು, ನಿರ್ದೇಶಿಸಿದ್ದೇ ಹೆಚ್ಚು. ಈ ತರಹದ ಪ್ರಯತ್ನಗಳನ್ನು ಅವರು ಮಾಡಿರಲಿಲ್ಲ. ಹಾಗಾಗಿ ಈ ಸಂಶಯಕ್ಕೆ ಕಾರಣವಿದೆ. ಇಲ್ಲ, ಇದು ನಾರಾಯಣ್ ಅವರು ಬರೆದ ಕಥೆಯಲ್ಲ. ಎರಡು ವರ್ಷಗಳ ಹಿಂದೆ ತಮಿಳಿನಲ್ಲಿ ಬಂದ “ರಾಜತಂತ್ರಂ’ ಎಂಬ ಚಿತ್ರದ ರೀಮೇಕ್ ಇದು. ಇಲ್ಲಿ ಮೂವರು ಕಳ್ಳರ ಕಥೆಯನ್ನು ಹೇಳಲಾಗಿದೆ. ಅದೇ ಚಿತ್ರವನ್ನು ಕೆಲವು ಬದಲಾವಣೆಗಳೊಂದಿಗೆ, ಇಲ್ಲಿನ ನೇಟಿವಿಟಿಗೆ ಅಳವಡಿಸಲಾಗಿದೆ.
ಸಣ್ಣ-ಪುಟ್ಟ ಕಳ್ಳತನಗಳನ್ನು ಮಾಡುವ ಮೂವರು, ಅದೊಮ್ಮೆ ದೊಡ್ಡದಕ್ಕೆ ಕೈ ಹಾಕುತ್ತಾರೆ. ಹಾಗೆ ಮಾಡುವುದಕ್ಕೆ ಅವರ ಹಿಂದೊಂದು ಮಹತ್ತರವಾದ ಕಾರಣವೂ ಇದೆ. ಆ ಕಾರಣವೇನು ಎಂಬುದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು. ಚಿತ್ರದ ಮೊದಲಾರ್ಧ ಹೆಚ್ಚೇನೂ ಆಗುವುದಿಲ್ಲ. ಮೂವರು ಪಡ್ಡೆಗಳ ತುಂಟಾಟ, ನಾಯಕ-ನಾಯಕಿಯ ನಡುವಿನ ಕಣ್ಣಾಮುಚ್ಚಾಲೆಯಾಟ … ಇವೆಲ್ಲಾ ಚಿತ್ರವನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುವುದಕ್ಕಿಂತ, ಅಲ್ಲಲ್ಲಿ ಬ್ರೇಕ್ ಹಾಕುತ್ತದೆ. ಒಂದು ದೊಡ್ಡ ಕಳ್ಳತನ ಮಾಡಿ, ಮುಂದೆ ಕಳ್ಳತನ ಬಿಟ್ಟುಬಿಡೋಣ ಎಂದು ನಾಯಕ ನಿರ್ಧರಿಸುತ್ತಾನೆ.
ಅಲ್ಲಿಂದ ಚಿತ್ರಕ್ಕೊಂದು ವೇಗ ಬರುತ್ತದೆ. ಆ ನಂತರ ನಡೆಯುವ ಕಳ್ಳತನದ ಎಪಿಸೋಡು ಪ್ರೇಕ್ಷಕರಿಗೆ ಚುರುಕು ಮುಟ್ಟಿಸಿದರೆ, ಇಂಟರ್‌ವೆಲ್ ಹೊತ್ತಿಗೆ ಚಿತ್ರಕ್ಕೊಂದು ಟ್ವಿಸ್ಟ್ ಸಿಗುತ್ತದೆ. ಇಂಟರ್‌ವೆಲ್ ಮುಗಿದ ನಂತರ ಚಿತ್ರಕ್ಕೆ ಇನ್ನೊಂದು ಮಜಲು ಸಿಗುತ್ತದೆ. ಆಗ ನಾಯಕನಿಗಷ್ಟೇ ಅಲ್ಲ ಪ್ರೇಕ್ಷಕರಿಗೂ ಚಿತ್ರದ ಖಳನಾಯಕ ಯಾರು ಎಂದು ಗೊತ್ತಾಗುತ್ತದೆ. ಅಲ್ಲಿಂದ ಅಸಲಿ ಆಟ ಶುರುವಾಗುತ್ತದೆ. ಹಾಗೆ ಶುರುವಾಗಿ, ಚಿತ್ರ ಮುಗಿಯುವುದೇ ಗೊತ್ತಾಗುವುದಿಲ್ಲ. ಆ ಮಟ್ಟಿಗೆ, ನಾರಾಯಣ್ ಮೂಲ ಚಿತ್ರದ ಹಿಡಿತವನ್ನೇ ಕಾಯ್ದಿಟ್ಟುಕೊಂಡಿದ್ದಾರೆ.
ಆದರೂ ಮೊದಲಾರ್ಧ ಚಿತ್ರ ಇನ್ನಷ್ಟು ಚುರುಕಾಗಿದ್ದರೆ, ಪ್ರೇಕ್ಷಕರಿಗೆ ಇನ್ನಷ್ಟು ಖುಷಿಕೊಡುತಿತ್ತು. “ಲಕ್ಷ್ಮಣ’ಗೆ ಹೋಲಿಸಿದರೆ, ಅಭಿನಯದಲ್ಲಿ ಅನೂಪ್ ಸಾಕಷ್ಟು ಸುಧಾರಿಸಿದ್ದಾರೆ. ಚಿತ್ರದ ಸರ್‌ಪ್ರೈಸ್ ಎಂದರೆ ನಾಯಕಿ ರಿತೀಕ್ಷಾ ಮತ್ತು ಶಾಸಕ ಶ್ರೀನಿವಾಸಮೂರ್ತಿ. ಮೊದಲ ಪ್ರಯತ್ನದಲ್ಲೇ ಇಬರೂ ಗಮನಸೆಳೆಯುತ್ತಾರೆ. ಕರಿಸುಬ್ಬು, ವಿಶ್ವ ಮುಂತಾದವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದ ಇನ್ನೊಂದು ಹೈಲೈಟ್ ಎಂದರೆ ಸುದೀಪ್ ಹಾಡಿರುವ ರೊಮ್ಯಾಂಟಿಕ್ ಹಾಡು.
ಚಿತ್ರ: ಪಂಟ
ನಿರ್ದೇಶನ: ಎಸ್. ನಾರಾಯಣ್
ನಿರ್ಮಾಣ: ಸುಬ್ರಹ್ಮಣ್ಯಮ್
ತಾರಾಗಣ: ಅನೂಪ್, ರಿತೀಕ್ಷಾ, ರವಿ ಕಾಳೆ, ಕರಿಸುಬ್ಬು, ಶ್ರೀನಿವಾಸಮೂರ್ತಿ ವಿಶ್ವ ಮುಂತಾದವರು
* ಚೇತನ್ ನಾಡಿಗೇರ್