Advertisement

ನರಸಿಂಹೇಗೌಡ ಈಸ್‌ ಬ್ಯಾಕ್‌

07:00 PM Jan 31, 2018 | |

“ಅವರು ಎಷ್ಟು ನಿಮಿಷ ಇರ್ತಾರೆ ಮುಖ್ಯ ಅಲ್ಲ, ಹೇಗಿರ್ತಾರೆ ಅನ್ನೋದಷ್ಟೇ ಮುಖ್ಯ …’ ಮತ್ತೂಮ್ಮೆ ಡಾ. ವಿಷ್ಣುವರ್ಧನ್‌ ಅವರು ಇನ್ನೊಂದು ಹೊಸ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗುತ್ತಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ಅನಿರುದ್ಧ್ ಅಭಿನಯದ “ರಾಜಾ ಸಿಂಹ’ ಚಿತ್ರವು “ಸಿಂಹಾದ್ರಿಯ ಸಿಂಹ’ದ ಮುಂದುವರೆದ ಭಾಗವಾಗಿರುತ್ತದೆ, ಆ ಚಿತ್ರದಂತೆ ಇಲ್ಲೂ ವಿಷ್ಣುವರ್ಧನ್‌ ಅವರು ನರಸಿಂಹೇಗೌಡನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಗೊತ್ತೇ ಇದೆ.

Advertisement

ಆದರೆ, ವಿಷ್ಣುವರ್ಧನ್‌ ಅವರನ್ನು ತೆರೆಯ ಮೇಲೆ ಹೇಗೆ ಮತ್ತೆ ತೋರಿಸಬಹುದು ಎಂಬ ಕುತೂಹಲವು ಎಲ್ಲಕ್ಕಿಂತ ಹೆಚ್ಚಾಗಿ ಅವರ ಅಭಿಮಾನಿಗಳ ವಲಯದಲ್ಲಿದೆ. ಹಾಗೆಯೇ ಅವರು ಎಷ್ಟು ಹೊತ್ತು ಚಿತ್ರದಲ್ಲಿರಬಹುದು ಎಂಬ ಪ್ರಶ್ನೆಯೂ ಇದೆ. ಈ ಕುರಿತು ಅನಿರುದ್ಧ್ ಅವರನ್ನು ಕೇಳಿದರೆ, “ಅವರು ಎಷ್ಟು ನಿಮಿಷ ಇರ್ತಾರೆ ಮುಖ್ಯ ಅಲ್ಲ, ಹೇಗಿರ್ತಾರೆ ಅನ್ನೋದಷ್ಟೇ ಮುಖ್ಯ’ ಎಂದು ಉತ್ತರಿಸುತ್ತಾರೆ. “ಡಾ. ವಿಷ್ಣುವರ್ಧನ್‌ ಅವರ ತೇಜಸ್ಸು ಇಡೀ ಚಿತ್ರದುದ್ದಕ್ಕೂ ಇರುತ್ತದೆ.

ಅವರ ಅಭಿಮಾನಿಗಳಿಗೆ ನಿಜಕ್ಕೂ ಖುಷಿ ಕೊಡುವ ಚಿತ್ರ ಇದಾಗಲಿದೆ. ಅವರಿಗೆ ಇಷ್ಟವಾಗಬೇಕೆಂಬ ಕಾರಣಕ್ಕೆ, ಬಹಳ ಜವಾಬ್ದಾರಿಯಿಂದ ಅವರ ಪಾತ್ರವನ್ನು ಅಳವಡಿಸಿದ್ದೇವೆ. ಇಲ್ಲಿ ವಿಷ್ಣುವರ್ಧನ್‌ ಅವರು ಇರುತ್ತಾರೆ ಎನ್ನುವುದಕ್ಕಿಂತ, ನರಸಿಂಹೇಗೌಡನ ಪಾತ್ರ ಪ್ರಮುಖವಾಗಿರುತ್ತದೆ ಎನ್ನುವುದು ಹೆಚ್ಚು ಸೂಕ್ತ. ಆ ಪಾತ್ರವನ್ನು ಸುಮ್ಮನೆ ಬಳಸಿಲ್ಲ ಅಥವಾ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನೂ ಮಾಡಿಲ್ಲ.

ವಿಷ್ಣುವರ್ಧನ್‌ ಅವರ ಸಿನಿಮಾಗಳು ಬರೀ ಮನರಂಜನೆಗಷ್ಟೇ ಅಲ್ಲ, ಪ್ರೇಕ್ಷಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುತಿತ್ತು. ಆ ತರಹದ ಸಿನಿಮಾಗಳು ಇತ್ತೀಚೆಗೆ ಬರುತ್ತಿಲ್ಲ ಎಂಬ ಕೊರಗಿತ್ತು. ಆ ಕೊರಗು ಮತ್ತು ಹಸಿವನ್ನು ಈ ಚಿತ್ರ ನೀಗಿಸುತ್ತದೆ’ ಎನ್ನುತ್ತಾರೆ ಅನಿರುದ್ಧ್. “ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರನ್ನು ಗ್ರಾಫಿಕ್ಸ್‌ ಮೂಲಕ ಮರುಸೃಷ್ಠಿಸಲಾಗಿದೆ ಎಂಬ ಸುದ್ದಿಯಾದಾಗ, ಅಭಿಮಾನಿಗಳು ಖುಷಿಯಾಗಿದ್ದರು.

ಆದರೆ, ಚಿತ್ರ ಬಿಡುಗಡೆಯಾದಾಗ ಅವರಿಗೆ ಕಾರಣಾಂತರಗಳಿಂದ ಬೇಸರವಾಗಿತ್ತು. ಹಾಗಾಗಿ, ಈ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರನ್ನು ಹೇಗೆ ತೋರಿಸಲಾಗುತ್ತದೆ ಎಂಬ ಕುತೂಹಲ ಸಹಜವೇ. “ಅಭಿಮಾನಿಗಳಿಗೆ ಅಷ್ಟು ತೃಪ್ತಿಯಾಗಿಲ್ಲ ಅಂತ ನಾವು ಕೇಳಿದ್ದೇವೆ. ಹಾಗಾಗಿ ನಾವು ಏನು ಮಾಡಬೇಕು, ಹೇಗೆ ವಿಷ್ಣುವರ್ಧನ್‌ ಅವರನ್ನು ತೋರಿಸಬೇಕು ಎಂಬ ಯೋಚನೆ ನಮಗೂ ಇತ್ತು. ಗ್ರಾಫಿಕ್ಸ್‌ ಮೂಲಕ ತೋರಿಸೋಣ ಎಂದರೆ ಇನ್ನೂ ಆ ತರಹದ ತಂತ್ರಜ್ಞಾನ ಬಂದಿಲ್ಲ.

Advertisement

ಬರೀ ಇಲ್ಲಿಯಷ್ಟೇ ಅಲ್ಲ, ಫಾರಿನ್‌ ಸ್ಟುಡಿಯೋದವರ ಜೊತೆಗೆ ಈ ಕುರಿತು ಮಾತನಾಡಿದ್ದೇವೆ. ಏನೋ ಮಾಡೋಕೆ ಹೋಗಿ, ಇನ್ನೇನೋ ಆಗುವುದು ಬೇಡ ಎಂಬ ಕಾರಣಕ್ಕೆ ಗ್ರಾಫಿಕ್ಸ್‌ ಮಾಡಿಲ್ಲ. ಅದರ ಬದಲು ಹೊಸ ತರಹದ ಗ್ರಾಫಿಕ್ಸ್‌ ಮಾಡಿದ್ದೀವಿ. ಚಿತ್ರದಲ್ಲಿ ವಿಷ್ಣುವರ್ಧನ್‌ ಅವರು ಹೇಗೆ ಕಾಣುತ್ತಾರೆ, ಅವರಿಗೆ ಧ್ವನಿ ಯಾರು ಕೊಡುತ್ತಾರೆ ಎಂಬ ಪ್ರಶ್ನೆಗಳಿಗೆ ಉತ್ತರಕ್ಕೆ ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕು’ ಎನ್ನುತ್ತಾರೆ ಅನಿರುದ್ಧ್.

“ರಾಜಾ ಸಿಂಹ’ ಚಿತ್ರದಲ್ಲಿ ಅನಿರುದ್ಧ್ ಅವರು ನರಸಿಂಹೇಗೌಡನ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಹಾದ್ರಿ ಗ್ರಾಮಕ್ಕೆ 15 ವರ್ಷಗಳ ನಂತರ ನರಸಿಂಹೇಗೌಡನ ಮಗ ಬಂದಾಗ, ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆಯಂತೆ. ಈ ಚಿತ್ರವನ್ನು ರವಿರಾಮ್‌ ನಿರ್ದೇಶಿಸದ್ದು, ಸಿ.ಡಿ. ಬಸಪ್ಪ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅನಿರುದ್ಧ್ ಜೊತೆಗೆ ನಿಖೀತಾ ತುಕ್ರಾಲ್‌, ಸಂಜನಾ, ಭಾರತಿ ವಿಷ್ಣುವರ್ಧನ್‌, ಶರತ್‌ ಲೋಹಿತಾಶ್ವ, ಅರುಣ್‌ ಸಾಗರ್‌ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಇನ್ನು ಅಂಬರೀಶ್‌ ಈ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಜಾ ಸಿಂಹನ ರಥಯಾತ್ರೆ: “ರಾಜಾ ಸಿಂಹ’ ಚಿತ್ರದ ಪ್ರಮೋಷನ್‌ಗಾಗಿ ನಿರ್ಮಾಪಕ ಸಿ.ಡಿ. ಬಸಪ್ಪ ಒಂದು ರಥಯಾತ್ರೆಯನ್ನು ಆಯೋಜಿಸಿದ್ದಾರೆ. ನಾಳೆ ಬೆಳಿಗ್ಗೆ 8.30ಕ್ಕೆ ಆನಂದರಾವ್‌ ಸರ್ಕಲ್‌ನಿಂದ ಹೊರಡುವ ಈ ರಥಯಾತ್ರೆ 9.30ರ ಹೊತ್ತಿಗೆ ಅನುಪಮಾ ಚಿತ್ರಮಂದಿರಕ್ಕೆ ಬಂದು ಮುಟ್ಟಲಿದೆ. ಈ ರಥಯಾತ್ರೆಯಲ್ಲಿ ವಿಷ್ಣುವರ್ಧನ್‌ ಅವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ. ಚಿತ್ರಕ್ಕಾಗಿಯೇ ವಿಷ್ಣುವರ್ಧನ್‌ ಅವರ ನರಸಿಂಹೇಗೌಡನ ಪಾತ್ರದ ಪ್ರತಿಮೆಯನ್ನು ಮಾಡಿಸಲಾಗಿದ್ದು, ಅದನ್ನು ಮೆರವಣಿಗೆಯಲ್ಲಿ ತಂದು ಅನುಪಮಾ ಚಿತ್ರದ ಮುಂದೆ ಇಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next