Advertisement

ನರಗುಂದ: ಸೌಹಾರ್ದತೆ ಗಟ್ಟಿಗೊಳಿಸಿದ “ರೊಟ್ಟಿ ಜಾತ್ರೆ’

06:05 PM Jan 31, 2024 | Team Udayavani |

ಉದಯವಾಣಿ ಸಮಾಚಾರ
ನರಗುಂದ: ಉತ್ತರ ಕರ್ನಾಟಕದಲ್ಲಿ “ರೊಟ್ಟಿಜಾತ್ರೆ’ ಎಂದೇ ಖ್ಯಾತಿ ಹೊಂದಿದ ಶಿರೋಳ ತೋಂಟದಾರ್ಯಮಠದ ಜಾತ್ರಾ
ಮಹೋತ್ಸವವು ಸೌಹಾರ್ದತೆಯನ್ನು ಗಟ್ಟಿಗೊಳಿಸಿದೆ. ತಾವೂ ಉಂಡು, ಇತರರಿಗೂ ಉಣಿಸುವ ದಾಸೋಹ ಪರಂಪರೆ ಬೆಳೆಸಿದೆ.
ಹತ್ತಾರು ಸಾವಿರ ಜನರು ಬಿಳಿಜೋಳದ ಖಡಕ್‌ ರೊಟ್ಟಿ, ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಬಾನ, ವಿವಿಧ ತರಕಾರಿಗಳಿಂದ ತಯಾರಿಸಿದ ಕರಿ ಹಿಂಡಿ ಹೀಗೆ ವಿವಿಧ ಪದಾರ್ಥಗಳಿರುವ ರೊಟ್ಟಿ ಊಟದ ಪ್ರಸಾದ ಸೇವಿಸಿ ಸಂಭ್ರಮಿಸುವುದು ವಾಡಿಕೆ.

Advertisement

ರೊಟ್ಟಿ ಊಟ ಜನಪ್ರಿಯ: ಮೊದ ಮೊದಲು ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ರೊಟ್ಟಿ ಊಟದ ಜಾತ್ರೆ ಈಗ ಜನಪ್ರಿಯಗೊಂಡಿದೆ. ಸುಮಾರು 15ಕ್ಕೂ ಹೆಚ್ಚು ಚೀಲ ಜೋಳದಿಂದ ತಯಾರಿಸಿದ 50 ರಿಂದ 70 ಸಾವಿರಕ್ಕೂ ಹೆಚ್ಚು ಜೋಳದ ರೊಟ್ಟಿಗಳು ಖರ್ಚಾಗುತ್ತವೆ. ಜಾತ್ರೆ 2ನೇ ದಿನ ರೊಟ್ಟಿ ಊಟದ ಜಾತ್ರೆಗೆ 15 ದಿನಗಳಿಂದ ತಯಾರಿ ನಡೆದಿರುತ್ತದೆ. ಕೊಡುಗೈ ದಾನಿಗಳಿಂದ ಸಂಗ್ರಹಿಸಿ ಜೋಳ, ಸಜ್ಜಿ ಹಿಟ್ಟು ಮಾಡಿಸಿ ಶಿರೋಳ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಜಾತಿ ಭೇದ ಎನಿಸದೇ ಮನೆ
ಮನೆಗೆ ರೊಟ್ಟಿ ಹಿಟ್ಟು ಹಾಕಲಾಗುತ್ತದೆ. ಹಿಟ್ಟು ಹಾಕಿಸಿಕೊಂಡವರೆಲ್ಲ ತಮ್ಮಿಷ್ಟದಂತೆ ತಮ್ಮವೂ ಹತ್ತಿಪ್ಪತ್ತು ರೊಟ್ಟಿ ಸೇರಿಸಿ ಶ್ರೀಮಠಕ್ಕೆ ತಲುಪಿಸುತ್ತಾರೆ.

ಶ್ರೀಮಠದ ರೊಟ್ಟಿ ಜಾತ್ರೆ ಪರಂಪರೆಯನ್ನು ಲಿಂ|ತೋಂಟದ ಡಾ|ಸಿದ್ಧಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ಲಿಂ| ಗುರುಬಸವ
ಸ್ವಾಮಿಗಳು ಮುನ್ನಡೆಸಿಕೊಂಡು ಬಂದರು. ಗುರುಬಸವ ಜನಕಲ್ಯಾಣ ಸಂಸ್ಥೆ ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ. ಪೂಜ್ಯರೀರ್ವರು ಲಿಂಗೈಕ್ಯರಾದ ನಂತರ ಇಂದಿನ ಡಾ|ತೋಂಟದ  ಸಿದ್ಧರಾಮ ಶ್ರೀಗಳು ಮುಂದುವರಿಸಿಕೊಂಡು ಬಂದರು.ಸದ್ಯ ಶಿರೋಳ ತೋಂಟದಾರ್ಯ ಮಠಕ್ಕೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ
ಶ್ರೀ ಶಾಂತಲಿಂಗ ಶ್ರೀಗಳನ್ನು ಪೀಠಾಧಿಪತಿಯಾಗಿ ನೇಮಿಸಿ ಅಧಿಕಾರ ಹಸ್ತಾಂತರಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಇಡೀ ಉತ್ತರ ಕರ್ನಾಟಕದಲ್ಲೇ ಭಾವೈಕ್ಯತೆ ಬೀಜ ಬಿತ್ತುವ ಜತೆಗೆ ಸೌಹಾರ್ದತೆಗೆ ಹೆಸರಾದ ರೊಟ್ಟಿಜಾತ್ರೆ ತೋಂಟದ ಡಾ|ಸಿದ್ಧರಾಮ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರಗುತ್ತಿದೆ. ಶಿರೋಳ ಸದ್ಭಕ್ತರ ಸಂಕಲ್ಪದಂತೆ ಜಾತ್ರೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.
ಶ್ರೀ ಶಾಂತಲಿಂಗ ಸ್ವಾಮಿಗಳು,
ತೋಂಟದಾರ್ಯ ಮಠ, ಶಿರೋಳ

*ಸಿದ್ಧಲಿಂಗಯ್ಯ ಮಣ್ಣೂರಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next