Advertisement

ದಿಂಡಿ ಪಾದಯಾತ್ರಿಗಳಿಗೆ ಭೈರನಹಟಿಯಲ್ಲಿ ಆತಿಥ್ಯ

03:27 PM Oct 29, 2022 | Team Udayavani |

ನರಗುಂದ: ಪಂಢರಪುರಕ್ಕೆ ಪಾದಯಾತ್ರೆ ಕೈಗೊಂಡ ವಾರಿ ಸಂಪ್ರದಾಯದ ದಿಂಡಿ ಪಾದಯಾತ್ರಿಗಳಿಗೆ ಮಾರ್ಗಮಧ್ಯೆ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಆದರಾತಿಥ್ಯ ನೀಡಲಾಯಿತು.

Advertisement

ವಿರಕ್ತಮಠಕ್ಕೆ ಆಗಮಿಸಿದ ದಿಂಡಿ ಪಾದಯಾತ್ರಿಗಳು ಕಥಾ-ಕೀರ್ತನ-ಅಭಂಗಗಳನ್ನು ಪಠಿಸಿ, ಶ್ರೀಮಠದಲ್ಲಿ ಸಿದ್ಧಪಡಿಸಿದ್ದ ಪ್ರಸಾದ ಸ್ವೀಕರಿಸಿದ ನಂತರ ಕೆಲಕಾಲ ವಿಶ್ರಮಿಸಿ ಮುಂದೆ ಸಾಗಿದರು. ಇದು ಪ್ರತಿವರ್ಷ ಪಂಢರಪುರ ಯಾತ್ರಾರ್ಥಿಗಳಿಗೆ ಶ್ರೀಮಠದಿಂದ ನೀಡಲಾಗುವ ಸಾಂಪ್ರದಾಯಿಕ ಆದರಾತಿಥ್ಯ.

ಇಲ್ಲಿ ಪ್ರತಿ ವರ್ಷ ಲಕ್ಷ್ಮೇಶ್ವರ, ಕೋಣನ ತಂಬಿಗೆ, ಹಲುವಾಗಲು, ಅಲ್ಲಾಪೂರ, ಹರಪ್ಪನಹಳ್ಳಿ, ಯಲ್ಲಾಪೂರ ಹೀಗೆ ಇನ್ನೂ ಅನೇಕ ದಿಂಡಿ ಪಾದಯಾತ್ರಿಗಳು, ಹಾಗೆಯೇ, ಹುಬ್ಬಳ್ಳಿ ಸಿದ್ಧಾರೂಡಮಠ, ಯಲ್ಲಮ್ಮನಗುಡ್ಡ, ಬನಶಂಕರಿ ಮುಂತಾದ ಅನೇಕ ಪುಣ್ಯ ಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ದಶಕಗಳಿಂದ ಶ್ರೀಮಠ ಅನ್ನದಾಸೋಹದ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದೆ.

ವಾರಕರಿ ಸಂಪ್ರದಾಯ ಮಹಾರಾಷ್ಟ್ರದಲ್ಲಿ ಪ್ರಾರಂಭವಾದ ಹಿಂದೂ ಸಂಸ್ಕೃತಿಯ ಒಂದು ಭಾಗ. ಭಕ್ತಿ ಚಳವಳಿಯಾಗಿ ರೂಪುಗೊಂಡು 13ನೇ ಶತಮಾನದಿಂದ 18ನೇ ಶತಮಾನದವರೆಗೆ 600 ವರ್ಷಗಳ ಕಾಲ ಮಹಾರಾಷ್ಟ್ರ ಜನಸಾಮಾನ್ಯರ ಜೀವನದಲ್ಲಿ ಅಗಾಧ ಪರಿಣಾಮ ಬೀರಿದ ಆಧ್ಯಾತ್ಮಿಕ ಸಂಪ್ರದಾಯ ವಾರಕರಿ ಎಂದು ಹೇಳಲಾಗುತ್ತದೆ.

ವಾರಕರಿ ಎಂದರೆ ಸಾಮಾನ್ಯವಾಗಿ ಯಾತ್ರೆ ಮಾಡುವವರು ಎಂದರ್ಥ. ಭಕ್ತಿ ಮಾರ್ಗದಲ್ಲಿ ಯಾತ್ರೆ ಮಾಡುವವರೆಲ್ಲರೂ ವಾರಕರಿ ಸಂಪ್ರದಾಯದವರು. ಇವರ ಆರಾಧ್ಯ ದೈವ ಪಂಢರಪುರದ ವಿಠ್ಠಲ. ಇದು ಶ್ರೀಕೃಷ್ಣನ ಇನ್ನೊಂದು ರೂಪ ಎಂದು ಪೌರಾಣಿಕ ಹಿನ್ನೆಲೆಯಿಂದ ತಿಳಿದು ಬರುತ್ತದೆ.

Advertisement

ದಿಂಡಿ ಪಾದಯಾತ್ರೆ ಉದ್ದೇಶ: ವಿಠ್ಠಲನ ಆರಾಧನೆಯೊಂದಿಗೆ ಜಾತೀಯತೆ ಮೀರಿ ಎಲ್ಲರೂ ಆ ದಿಂಡಿಯಲ್ಲಿ ಸಮಾನತೆ, ಮಾನವೀಯತೆ ಶಾಂತಿ, ಸಹಬಾಳ್ವೆ, ಅಹಿಂಸೆಯಿಂದ ಪರಸ್ಪರ ಒಬ್ಬರಿಗೊಬ್ಬರು ತಲೆಬಾಗುವಿಕೆಯಿಂದ ಎಲ್ಲರೂ ಸಮಾನರು ಎಂದು ತೋರಿಸುವ ಆಧ್ಯಾತ್ಮಿಕ ಚಳವಳಿ ಎನ್ನಲಾಗಿದೆ.

ನೈತಿಕ ನಡವಳಿಕೆ, ಮದ್ಯಪಾನ, ತಂಬಾಕು ದೂರವಿಡುವಲ್ಲಿ ಕಟ್ಟುನಿಟ್ಟಿನ ಆಚಾರ ವಿಚಾರಗಳನ್ನು ಪಾಲಿಸಲಾಗುತ್ತದೆ. ಮುಖ್ಯವಾಗಿ ಸಾತ್ವಿಕ ಆಹಾರ ಸೇವನೆ, ಏಕಾದಶಿ ದಿನದಂದು ಈರುಳ್ಳಿ, ಬೆಳ್ಳುಳ್ಳಿ ಸ್ವೀಕರಿಸದೇ ಇರುವುದು ಇವರು ಸಂಪ್ರದಾಯದ ಭಾಗವಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಏಕಾದಶಿಯಂದು ಪಾದಯಾತ್ರೆ ಮೂಲಕ ಪಂಢರಪುರ ವಿಠ್ಠಲನ ದರ್ಶನಕ್ಕೆ ತೆರಳುತ್ತಾರೆ. ಇದು ಭಾರತೀಯ ಹಿಂದೂ ಸಂಸ್ಕೃತಿಯ ಬಹುದೊಡ್ಡ ಆಧ್ಯಾತ್ಮಿಕ ಪಾದಯಾತ್ರೆ.

ದೊರೆಸ್ವಾಮಿ ವಿರಕ್ತಮಠ ಸೇವೆ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ತಾಲೂಕಿನ ಭೈರನಹಟ್ಟಿ ಗ್ರಾಮದ ಚಿಕ್ಕ ಮಠ ದೊರೆಸ್ವಾಮಿ ವಿರಕ್ತಮಠ. ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕನ್ನಡಪರ ಕೈಂಕರ್ಯಗಳೊಂದಿಗೆ ಶ್ರೀಮಠ ಜನಸಾಮಾನ್ಯರಿಗೆ ಜಾತಿ-ಮತ-ಪಂಥ ಭೇದವನ್ನರಿಯದೆ ಸರ್ವರನ್ನೂ ಸಮಾನವಾಗಿ ಕಾಣುತ್ತಿರುವ ಕೋಮು ಸೌಹಾರ್ದತೆಯ ಪ್ರತಿರೂಪದಂತೆ ಕಂಗೊಳಿಸುತ್ತಿದೆ. ಅಲ್ಲದೇ, ದಿಂಡಿ ಪಾದಯಾತ್ರಿಗಳಿಗೆ ಆದರಾತಿಥ್ಯ ನೀಡುವ ಮೂಲಕ ಭಕ್ತಸಾಗರದಲ್ಲಿ ವಿಶೇಷ ಛಾಪು ಮೂಡಿಸುತ್ತಿದೆ.

ವಾರಿ ಸಂಪ್ರದಾಯ 13ನೇ ಶತಮಾನದಲ್ಲಿ ಪ್ರಾರಂಭವಾದ ಒಂದು ಬಹುದೊಡ್ಡ ಆಧ್ಯಾತ್ಮಿಕ ಚಳವಳಿ. ಜಾತಿ, ವರ್ಗ, ವರ್ಣ ರಹಿತ ಯಾತ್ರೆ ಇದಾಗಿದೆ. ಇಂತಹ ವಿಶಿಷ್ಟ ಪರಂಪರೆ ಹೊಂದಿರುವ ವಾರಕರಿ ಸಂಪ್ರದಾಯದವರು ನೂರಾರು ವರ್ಷಗಳಿಂದ ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.  -ಶ್ರೀ ಶಾಂತಲಿಂಗ ಸ್ವಾಮೀಜಿ, ದೊರೆಸ್ವಾಮಿ ವಿರಕ್ತಮಠ, ಭೈರನಹಟ್ಟಿ

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next