ನರಗುಂದ: ನವಿಲುತೀರ್ಥ ಜಲಾಶಯದ ಕಾಲುವೆ ನೀರನ್ನೇ ನೆಚ್ಚಿಕೊಂಡು ಅಷ್ಟಿಷ್ಟು ಬೆಳೆ ತೆಗೆದ ರೈತರಿಗೀಗ ಕೀಟಬಾಧೆ ಕಾಡಲಾರಂಭಿಸಿದೆ. ಕಾಳು ಕಚ್ಚಿದ ಸಂದರ್ಭದಲ್ಲಿ ಪರಿಪೂರ್ಣವಾಗಿ ಬೆಳೆಯುವ ಮೊದಲೇ ಕಡಲೆ ಪೈರು ಒಣಗಿ ನಿಂತಿವೆ.
ಹಿಂಗಾರು ಅವಧಿಯಲ್ಲಿ ಹಿಂದೆಂದಿಗಿಂತಲೂ ಈ ಬಾರಿ ವರದಾನವಾದ ನವಿಲುತೀರ್ಥ ಜಲಾಶಯ ಭರ್ತಿಯಾಗಿದ್ದರಿಂದ ಹಿಂಗಾರು ಬೆಳೆಗಳ ಬಹುದೊಡ್ಡ ಕನಸು ಹೊತ್ತ ರೈತರು ಗಂಚಿಯ ಜೋಳ, ಗೋಧಿ ಕಡಿಮೆ ಮಾಡಿ ಅತಿಹೆಚ್ಚು ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿದ್ದೇ ರೈತರ ಆಶಾಗೋಪುರಕ್ಕೆ ಮುಳುವಾಗಿ ನಿಂತಿದ್ದು ವಿಪರ್ಯಾಸ.
ವಾಸ್ತವಿಕವಾಗಿ ಕೃಷಿ ಇಲಾಖೆ ವಾರ್ಷಿಕ ಗುರಿ ತಾಲೂಕಿನಲ್ಲಿ 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಇತ್ತು. ಆದರೆ ಗುರಿ ಮೀರಿದ ರೈತರು ಈ ಬಾರಿ 21,685 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿ ಇದೀಗ ಕೈಸುಟ್ಟುಕೊಂಡಂತಾಗಿದೆ.
ಹಚ್ಚ ಹಸಿರಿನಿಂದ ಕಂಗೊಳಿಸಬೇಕಾದ ಸಮೃದ್ಧ ಕಡಲೆ ಬೆಳೆಯಲ್ಲಿ ಕಾಯಿಕೊರಕ ಕೀಟಬಾಧೆ, ಸಿಡಿ ಹಾಯ್ದಿರುವ ಮುಂತಾದ ರೋಗಬಾಧೆಗೆ ಒಣಗಿ ನಿಂತಿದ್ದು, ಕಡಲೆ ಇಳುವರಿಯಲ್ಲಿ ಭಾರೀ ಪ್ರಮಾಣದ ಕುಂಠಿತಕ್ಕೆ ಸಾಕ್ಷಿಯಾಗಿದೆ. ಸಮೃದ್ಧವಾಗಿ ಬೆಳೆದು ನಿಂತ ಕಡಲೆ ಬೆಳೆಯು ಕಾಳು ಕಚ್ಚಿ ಬಲಗೊಳ್ಳುವ ಹಂತದಲ್ಲೇ ಮತ್ತು ಇನ್ನಷ್ಟು ಬೆಳೆ ಕಾಳು ಕಚ್ಚುವ ಮುನ್ನವೇ ಹಳದಿ ವರ್ಣಕ್ಕೆ ತಿರುಗಿ ಒಣಗಿ ನಿಂತಿದೆ. ಕೈಗೆಟುಕುವ ಹಂತದಲ್ಲೇ ಕೀಟಬಾಧೆಗೆ ತುತ್ತಾದ ಕಡಲೆ ಪೈರಿನಿಂದ ಇದೀಗ ರೈತರು ಕಣ್ಣೀರು ಹರಿಸುವಂತಾಗಿದೆ.
ಆರಂಭಿಕ ಹಂತದಲ್ಲೇ ರೋಗಬಾಧೆಗೆ ತುತ್ತಾದ ಕಡಲೆ ಬೆಳೆಗೆ ಅಗತ್ಯ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕಾದ ಕೃಷಿ ಅಧಿಕಾರಿಗಳು ಇದು ಪ್ರಕೃತಿಯ ವಿಕೋಪ ಎಂದು ಕೈತೊಳೆದುಕೊಳ್ಳುತ್ತಿದ್ದಾರೆ. ಸಮೃದ್ಧವಾಗಿ ಬೆಳೆದು ನಿಂತ ಕಡಲೆ ಪೈರು ಕಾಳು ಕಚ್ಚಿ ಒಣಗಿ ನಿಂತಿದ್ದರಿಂದ ಮಹದಾಸೆ ಹೊತ್ತು ಬಿತ್ತನೆ ಮಾಡಿ ಸಂಕಷ್ಟದ ಸ್ಥಿತಿಗೆ ಒರಗುವಂತಾಗಿದೆ ಎಂಬುದು ರೈತರ ಅಳಲು. ಒಟ್ಟಾರೆ ತಾಲೂಕಿನಲ್ಲಿ ಬಿತ್ತನೆಯಾದ 21,685 ಹೆಕ್ಟೇರ್ ಕಡಲೆ ಪ್ರದೇಶದ ಬಹುತೇಕ ಬೆಳೆಗಳು ಒಣಗಿ ನಿಂತಿದ್ದು, ಕಡಲೆ ಪೈರಿನ ಅಧೋಗತಿಗೆ ಸಾಕ್ಷಿಯಾಗಿದೆ.
ತೇವಾಂಶ ವೈಪರೀತ್ಯ ಮತ್ತು ಇತ್ತೀಚೆಗೆ ಹವಾಮಾನ ಏರುಪೇರಿನಿಂದಾಗಿ ಕಡಲೆ ಬೆಳೆಯಲ್ಲಿ ಇಂತಹ ತೊಂದರೆ ಕಂಡುಬಂದಿದೆ. ಇದರಿಂದಾಗಿ ಗಿಡ ಅಶಕ್ತಗೊಂಡು ಸಿಡಿ ಹಾಯುತ್ತದೆ. ಇದಕ್ಕೆ ಯಾವುದೇ ಪರಿಹಾರವಿಲ್ಲ. ಆದರೆ ಮುಂದಿನ ಹಂಗಾಮಿಗೆ ಇದನ್ನು ತಡೆಗಟ್ಟಲು ಬೆಳೆ ಪರಿವರ್ತನೆ ಅಗತ್ಯವಾಗಿದೆ.
•ಚನ್ನಪ್ಪ ಅಂಗಡಿ,
ಸಹಾಯಕ ಕೃಷಿ ನಿರ್ದೇಶಕ
•ಸಿದ್ಧಲಿಂಗಯ್ಯ ಮಣ್ಣೂರಮಠ