ನವದೆಹಲಿ:ಮಹತ್ವದ ಬೆಳವಣಿಗೆಯಲ್ಲಿ ನಾರದ ಲಂಚ ಪ್ರಕರಣದ ಆರೋಪಿಗಳಾದ ನಾಲ್ವರು ಟಿಎಂಸಿ ಮುಖಂಡರಿಗೆ ಗೃಹ ಬಂಧನದಲ್ಲಿ ಇರಿಸುವಂತೆ ಕೋಲ್ಕತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸಿಬಿಐ ಮಂಗಳವಾರ(ಮೇ 25) ಹಿಂಪಡೆದಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಸ್ಥಗಿತಗೊಂಡಿದ್ದ ಐಪಿಎಲ್ ಪುನಾರಂಭ: ಅರಬ್ಬರ ನಾಡಿನಲ್ಲಿ ಮತ್ತೆ ನಡೆಯಲಿದೆ ಕ್ರಿಕೆಟ್ ಹಬ್ಬ
ಕೋಲ್ಕತಾ ಹೈಕೋರ್ಟ್ ನ ಪಂಚಸದಸ್ಯ ಪೀಠ ನಾರದಾ ಲಂಚ ಪ್ರಕರಣದ ವಿಚಾರಣೆಯನ್ನು ನಡೆಸಲು ಆರಂಭಿಸಲಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ತೃಣಮೂಲ ಕಾಂಗ್ರೆಸ್ ಮುಖಂಡರು ಅಲ್ಲಿ ತಮ್ಮ ಎಲ್ಲಾ ಆಕ್ಷೇಪ ಎತ್ತಲು ಪೂರ್ಣ ಸ್ವಾತಂತ್ರ್ಯ ಇದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ತೃಣಮೂಲ ಕಾಂಗ್ರೆಸ್ ಮುಖಂಡರನ್ನು ಗೃಹಬಂಧನದಲ್ಲಿ ಇರಿಸುವಂತೆ ಕೋಲ್ಕತಾ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ತೃಣಮೂಲ ಕಾಂಗ್ರೆಸ್ ನ ಇಬ್ಬರು ಸಚಿವರು, ಒಬ್ಬ ಶಾಸಕ ಹಾಗೂ ಮಾಜಿ ಮೇಯರ್ ಸೇರಿದಂತೆ ನಾಲ್ವರಿಗೆ ಜಾಮೀನು ನೀಡಿದ್ದ ಕೋಲ್ಕತಾ ಹೈಕೋರ್ಟ್, ಗೃಹಬಂಧನದಲ್ಲಿ ಇರಿಸುವಂತೆ ಆದೇಶ ನೀಡಿತ್ತು. ಅಲ್ಲದೇ ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು.
ನಾರದ ಲಂಚ ಪ್ರಕರಣದಲ್ಲಿ ಪಶ್ಚಿಮಬಂಗಾಳದ ಸಾರಿಗೆ ಸಚಿವ ಫಿರ್ಹಾದ್ ಹಕೀಮ್, ಪಂಚಾಯತ್ ಖಾತೆ ಸಚಿವ ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರ ಹಾಗೂ ಮಾಜಿ ಮೇಯರ್ ಸೋವನ್ ಚಟರ್ಜಿಯನ್ನು ಸಿಬಿಐ ಕಳೆದ ಸೋಮವಾರ ಬಂಧಿಸಿತ್ತು.