Advertisement

ಟೆನಿಸ್‌: ಚಿಗುರುತ್ತಿರುವ ಏಶ್ಯ

12:30 AM Jan 28, 2019 | Team Udayavani |

ಮಣಿಪಾಲ: ವರ್ಷಾರಂಭದ ಗ್ರ್ಯಾನ್‌ಸ್ಲಾಮ್‌ ಆಸ್ಟ್ರೇಲಿಯನ್‌ ಓಪನ್‌ಗೆ ತೆರೆ ಬಿದ್ದಿದೆ. ಪುರುಷರ ಸಿಂಗಲ್ಸ್‌ನಲ್ಲಿ ನೊವಾಕ್‌ ಜೊಕೋವಿಕ್‌, ವನಿತಾ ಸಿಂಗಲ್ಸ್‌ನಲ್ಲಿ ನವೋಮಿ ಒಸಾಕಾ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Advertisement

ಇವರಲ್ಲಿ ಜೊಕೋವಿಕ್‌ ಗೆಲುವು ಅಚ್ಚರಿಯೇನೂ ಅಲ್ಲ. ಆದರೆ ನವೋಮಿ ಒಸಾಕಾ ಅವರದು ನಿಜಕ್ಕೂ ಅಮೋಘ ಸಾಧನೆ. ಏಶ್ಯದ ಆಟಗಾರ್ತಿಯೊಬ್ಬರು ಸತತ 2 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದರೆಂಬುದು ನಂಬಲೇಬೇಕಾದ ವಿದ್ಯಮಾನ. ವರ್ಷಾಂತ್ಯದ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದು ಮೊದಲ ಗ್ರ್ಯಾನ್‌ಸ್ಲಾಮ್‌ ಟ್ರೋಫಿಗೆ ಮುತ್ತಿಕ್ಕಿದ ಒಸಾಕಾ, ಈಗ ‘ಮೆಲ್ಬರ್ನ್ ಪಾರ್ಕ್‌ ಕ್ವೀನ್‌’ ಆಗಿಯೂ ಮೆರೆದಾಡಿದರು. ಕೇವಲ ಯುರೋಪಿಯನ್ನರ ಮೆರೆದಾಟಕ್ಕೆ ಮೀಸಲಾಗಿರುವ ಜಾಗತಿಕ ಟೆನಿಸ್‌ನಲ್ಲಿ ಏಶ್ಯನ್ನರೂ ದಿಟ್ಟ ಹೆಜ್ಜೆಗಳನ್ನಿಡುತ್ತಿರುವುದರ ಸೂಚನೆ ಇದೆಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕಿದೆ. ಹಾಗೆಯೇ ಈ ಸಂದರ್ಭದಲ್ಲಿ ಭಾರತದಿಂದ ಯಾರು ಎಂಬ ಪ್ರಶ್ನೆ ಮೂಡುವುದೂ ಸಹಜ.

ಚೀನೀ ಮಿಂಚು-ಲೀ ನಾ
ಡಬಲ್ಸ್‌ಗಿಂತ ಮಿಗಿಲಾಗಿ ಸಿಂಗಲ್ಸ್‌ ಪ್ರಶಸ್ತಿ, ಅದರಲ್ಲೂ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಆಗುವುದರಲ್ಲಿ ಹೆಚ್ಚಿನ ಗರಿಮೆ ಇದೆ. ಕೇವಲ ಮಾರ್ಟಿನಾ ನವ್ರಾಟಿಲೋವಾ, ಸ್ಟೆಫಿ ಗ್ರಾಫ್, ಸೆರೆನಾ ವಿಲಿಯಮ್ಸ್‌ ಮೊದಲಾದ ಯೂರೋಪ್‌, ಅಮೆರಿಕದ ಹೆಸರುಗಳೇ ಇಲ್ಲಿ ರಾರಾಜಿಸುತ್ತಿರುವಾಗ ಜಪಾನಿನ ನವೋಮಿ ಒಸಾಕಾ ಹೆಸರು ಹೊಳೆದದ್ದು ಏಶ್ಯನ್ನರಲ್ಲಿ ಸಹಜವಾಗಿಯೇ ರೋಮಾಂಚನವಾಗುತ್ತದೆ.

ಏಶ್ಯದ ಮಟ್ಟಿಗೆ ಟೆನಿಸ್‌ ಪ್ರಾಬಲ್ಯ ಹೊಂದಿರುವ ದೇಶಗಳೆಂದರೆ ಜಪಾನ್‌, ಚೀನ ಮತ್ತು ಭಾರತ. ಇವುಗಳಲ್ಲಿ ಭಾರತ ಹೊರತುಪಡಿಸಿ ಉಳಿದೆರಡು ದೇಶಗಳಲ್ಲಿ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ತಾರೆಗಳು ಮೂಡಿಬಂದಿವೆ. ಒಸಾಕಾಗಿಂತ ಮೊದಲು ಚೀನದ ಲೀ ನಾ ಅಮೋಘ ಸಾಧನೆಯೊಂದಿಗೆ ಸುದ್ದಿಯಾಗಿದ್ದರು. 2011ರ ಫ್ರೆಂಚ್ ಓಪನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಲೀ ನಾ ಹೊಸ ಇತಿಹಾಸವನ್ನೇ ಬರೆದರು. ಏಶ್ಯಕ್ಕೆ ಮೊದಲ ಸಿಂಗಲ್ಸ್‌ ಗ್ರ್ಯಾನ್‌ಸ್ಲಾಮ್‌ ತಂದಿತ್ತ ಹಿರಿಮೆ ಈ ಚೀನೀ ಆಟಗಾರ್ತಿಯದ್ದಾಗಿತ್ತು. ಇದು ಆಕಸ್ಮಿಕವಲ್ಲ ಎಂದು ನಿರೂಪಿಸಲೇನೋ ಎಂಬಂತೆ, 3 ವರ್ಷಗಳ ಬಳಿಕ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಯನ್ನೂ ಗೆದ್ದರು. 2011 ಮತ್ತು 2013ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ರನ್ನರ್ ಅಪ್‌ ಎನಿಸಿದ ಹೆಗ್ಗಳಿಕೆಯೂ ಈಕೆಯ ಪಾಲಿಗಿದೆ. ಈಗ ಒಸಾಕಾ ಸರದಿ. ಹಾಗೆಯೇ ಪುರುಷರ ಸಿಂಗಲ್ಸ್‌ನಲ್ಲಿ ಜಪಾನಿನವರೇ ಆದ ಕೀ ನಿಶಿಕೊರಿ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಸಮೀಪಿಸುತ್ತ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next