ಪ್ಯಾರಿಸ್: ಮಾಜಿ ನಂಬರ್ ವನ್ ಜಪಾನಿನ ನವೋಮಿ ಒಸಾಕಾ ಮಾತ್ರವಲ್ಲದೇ ಹಾಲಿ ಚಾಂಪಿಯನ್ ಮತ್ತು ದ್ವಿತೀಯ ಶ್ರೇಯಾಂಕದ ಕ್ರೆಜಿಸಿಕೋವಾ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದ ಮೊದಲ ಸುತ್ತಿನಲ್ಲಿಯೇ ಸೋಲನ್ನು ಕಂಡಿದ್ದಾರೆ.
ಬಹಳಷ್ಟು ಅನಗತ್ಯ ತಪ್ಪುಗಳನ್ನು ಮಾಡಿದ ಒಸಾಕಾ ಅವರನ್ನು ಅಮೆರಿಕದ ಅಮಂಡಾ ಅನಿಸಿಮೋವಾ 7-5, 6-4 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು. ಅನಿಸಿಕೋವಾ 2019ರಲ್ಲಿ ಇಲ್ಲಿ ಸೆಮಿಫೈನಲ್ ತಲುಪಿದ್ದರು.
ಒಸಾಕಾ ಕಳೆದ ವರ್ಷ ಕಡ್ಡಾಯ ಮಾಧ್ಯಮ ಬದ್ಧತೆಯ ಗೌರವ ಪಾಲಿಸಲು ನಿರಾಕರಿಸಿದ್ದರಿಂದ ಅವರಿಗೆ ದಂಡ ವಿಧಿಸಲಾಗಿತಲ್ಲದೇ ಆ ವರ್ಷ ಫ್ರೆಂಚ್ ಓಪನ್ ಆಡದಂತೆ ನಿಷೇಧ ಹೇರಲಾಗಿತ್ತು. ಖನ್ನತೆಯಿಂದ ಬಳಲುತ್ತಿದ್ದ ಕಾರಣ ಮಾಧ್ಯಮದ ಜತೆ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಅವರು ಆಬಳಿಕ ತಿಳಿಸಿದ್ದರು.
ಹಾಲಿ ಚಾಂಪಿಯನ್‌ಗೆ ಸೋಲು
ಹಾಲಿ ಚಾಂಪಿಯನ್ ಆಗಿರುವ ಬಾಬೊìರಾ ಕ್ರೆಜಿಸಿಕೋವಾ ಮೂರು ಸೆಟ್‌ಗಳ ಹೋರಾಟದಲ್ಲಿ ಸೋತು ಹೊರಬಿದ್ದಿದ್ದಾರೆ. ಅವರು ಫ್ರಾನ್ಸ್‌ನ ಹದಿಹರೆಯದ ಡಿಯಾನೆ ಪೆರ್ರಿ ಅವರ ಕೈಯಲ್ಲಿ 1-6, 6-2, 6-3 ಸೆಟ್‌ಗಳಿಂದ ಸೋಲನ್ನು ಕಂಡರು. ಮೊಣಕೈ ಗಾಯದಿಂದಾಗಿ ಅವರು ಕಳೆದ ಫೆಬ್ರವರಿ ಬಳಿಕ ಇಷ್ಟರವರೆಗೆ ಟೆನಿಸ್‌ನಿಂದ ದೂರ ಉಳಿದಿದ್ದರು.
ಫ್ರೆಂಚ್ ಓಪನ್ ಫೇವರಿಟ್ ಇಗಾ ಸ್ವಿಯಾಟೆಕ್ ಸುಲಭ ಗೆಲುವಿನೊಂದಿಗೆ ದ್ವಿತೀಯ ಸುತ್ತಿಗೇರಿದ್ದಾರೆ. ಉಕ್ರೈನಿನ ಅರ್ಹತಾ ಆಟಗಾರ್ತಿ ಲೆಸಿಯಾ ಟಿಸುರೆಂಕೊ ಅವರನ್ನು 6-2, 6-0 ಸೆಟ್‌ಗಳಿಂದ ಉರುಳಿಸಿದ ಅವರು ತನ್ನ ಸತತ ಗೆಲುವಿನ ಅಭಿಯಾನವನ್ನು 29 ಪಂದ್ಯಗಳಿಗೆ ವಿಸ್ತರಿಸಿದರು.
Related Articles
ವಿಶ್ವದ ನಂಬರ್ ವನ್ ಆಟಗಾರ್ತಿ ಯಾಗಿರುವ ಸ್ವಿಯಾಟೆಕ್ ಕಳೆದ ಐದು ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದಲ್ಲದೇ ಮೂರನೇ ಪ್ರಯತ್ನದಲ್ಲಿ ಎರಡನೇ ಫ್ರೆಂಚ್ ಓಪನ್ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಕಳೆದ ಫೆಬ್ರವರಿಯಿಂದ ಅಜೇಯ ಸಾಧನೆ ಮುಂದುವರಿಸಿರುವ ಸ್ವಿಯಾಟೆಕ್ ಡಬ್ಲ್ಯುಟಿಎ ಟೂರ್‌ನಲ್ಲಿ ಎರಡನೇ ದೀರ್ಘ ಪಂದ್ಯಗಳ ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ. 2013ರಲ್ಲಿ ಸತತ 34 ಪಂದ್ಯ ಗೆದ್ದಿರುವ ಸೆರೆನಾ ವಿಲಿಯಮ್ಸ್ ಮೊದಲ ಸ್ಥಾನದಲ್ಲಿದ್ದಾರೆ.
ಡೊಮಿನಿಕ್ ಥೀಮ್‌ಗೆ ಸೋಲು
ಎರಡು ಬಾರಿಯ ರನ್ನರ್ ಅಪ್ ಡೊಮಿನಿಕ್ ಥೀಮ್ ಅವರು ಬೊಲಿವಿಯಾದ ಹುಗೊ ಡೆಲ್ಲೀನ್ ಅವರ ಕೈಯಲ್ಲಿ 6-3, 6-2, 6-4 ಸೆಟ್‌ಗಳಿಂದ ಸೋಲನ್ನು ಕಂಡಿದ್ದಾರೆ. 2020ರ ಯುಎಸ್ ಚಾಂಪಿಯನ್ ಆಗಿದ್ದ ಥೀಮ್ ಗಾಯದ ಸಮಸ್ಯೆಯಿಂದಾಗಿ ಹಲವು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ.