ಪಣಜಿ: ಸಮಾಜದಲ್ಲಿ ಮಹಿಳೆ ಸಶಕ್ತಳಾಗಿದ್ದಾಳೆ ಎಂದರೆ ಅವಳು ತನ್ನ ಮೇಲಿನ ಎಲ್ಲ ಬಗೆಯ ಹಿಂಸೆ, ದೌರ್ಜನ್ಯದಿಂದ ಮುಕ್ತಳಾಗಿದ್ದಾಳೆಯೇ? ನೈಜ ಅರ್ಥದಲ್ಲಿ ಸ್ವತಂತ್ರಳಾಗಿದ್ದಾಳೆಯೇ?
ಇಂಥ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದಿಡುವ ಕನ್ನಡ ಸಿನಿಮಾ ’ನಾನು ಕುಸುಮ’.
ನಿರ್ಮಾಪಕ ಹಾಗೂ ನಿರ್ದೇಶಕ ಕೃಷ್ಣೇಗೌಡರ ನಾನು ಕುಸುಮ ಚಿತ್ರವು ಇಫಿ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾಯಿತು. ನಟಿ ಗ್ರೀಷ್ಮಾ ಶ್ರೀಧರ್ ಇದರಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಒಬ್ಬ ಶವಾಗಾರದಲ್ಲಿ ಕೆಲಸ ಮಾಡುತ್ತಿರುವ ನೌಕರ ತನ್ನ ಮಗಳು ವೈದ್ಯೆಯಾಗಬೇಕೆಂಬ ಕನಸು ಕಾಣುತ್ತಾನೆ. ಆದರೆ ಕಾಲದ ರಭಸದಲ್ಲಿ ಬೇರೆಲ್ಲ ಘಟನೆ ನಡೆದು ಅಪ್ಪ ಕಾಲದ ಪಾಲಾದರೆ, ಮಗಳು ಆರ್ಥಿಕ ಸಂಕಷ್ಟದಿಂದ ವೈದ್ಯೆಯಾಗುವ ಬದಲು ದಾದಿಯಾಗುತ್ತಾಳೆ. ಪ್ರಾಮಾಣಿಕತೆಯಿಂದ ಬದುಕುವ ಅವಳನ್ನು ಮುಗಿಸಲು ವ್ಯವಸ್ಥೆಯ ಒಂದು ಭಾಗ ಪ್ರಯತ್ನಿಸುತ್ತದೆ. ಅದರ ಕುತಂತ್ರಕ್ಕೆ ಬಲಿಯಾಗುತ್ತಾಳೆ. ಮತ್ತೆ ಅದೇ ವ್ಯವಸ್ಥೆಯ ಮತ್ತೊಂದು ಭಾಗ ಅವಳ ಪರವಾಗಿ ನಿಲ್ಲುತ್ತದೆ. ಒಂದು ಭಾಗದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ನಿಂತರೆ, ಮತ್ತೊಂದು ಭಾಗದಲ್ಲಿ ಸ್ತ್ರೀ.
‘ಈ ಸಿನಿಮಾ ತಮ್ಮ ತಪ್ಪುಗಳೇ ಇಲ್ಲದೇ ವಿನಾ ಕಾರಣ ದೌರ್ಜನ್ಯಕ್ಕೆ ಒಳಗಾಗುವ, ಅನಗತ್ಯ ಸಮಸ್ಯೆಗಳಿಗೆ ಸಿಲುಕಿಸಿ ಮಾನಸಿಕವಾಗಿ ಅಧೀರವಾಗಿಸುವ, ಆಯ್ಕೆಗಳೇ ಇಲ್ಲದ ಅನಿವಾರ್ಯತೆಗೆ ತಳ್ಳುವಂಥ ವ್ಯವಸ್ಥೆಯ ಕುರಿತಾದದ್ದು. ಕುಸುಮಳ ಪಾತ್ರ ನನ್ನನ್ನು ಬಹಳವಾಗಿ ಕಾಡಿದ ಪಾತ್ರ. ಅದರಲ್ಲಿನ ಪ್ರತಿ ಸಂಗತಿಯೂ ನನ್ನ ಸದಾ ಕಾಡುತ್ತಿತ್ತು’ ಎಂದು ಇಫಿ ಚಿತ್ರೋತ್ಸವದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದವರು ಕುಸುಮಳ ಪಾತ್ರವನ್ನು ನಿರ್ವಹಿಸಿರುವ ಗ್ರೀಷ್ಮಾ ಶ್ರೀಧರ್.
ಕಥೆಯ ನಿರ್ಮಾಪಕ ಹಾಗೂ ನಿರ್ದೇಶಕ ಕೃಷ್ಣೇಗೌಡ, ಕಠಿಣ ಕಾನೂನುಗಳಿದ್ದರೂ ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಗೆ ಅನ್ಯಾಯ ಎಸಗಲಾಗುತ್ತಿದೆ ಎಂಬ ವಾಸ್ತವವನ್ನು ಬಿಂಬಿಸಲು ಈ ಸಿನಿಮಾ ಪ್ರಯತ್ನಿಸಿದೆ ಎಂದರು.
ಈ ಸಿನಿಮಾ ಕನ್ನಡದ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣರವರ ‘ಮಗಳು’ ಕಥೆ ಆಧರಿಸಿದ್ದಾಗಿದೆ. ಮಹಿಳೆಯ ಸುರಕ್ಷತೆ ಮತ್ತು ಸಬಲೀಕರಣವೇ ಚಿತ್ರದ ಪ್ರಮುಖ ಭಾಗ ಎಂದರು ಕೃಷ್ಣೇಗೌಡ.
ಭಾರತೀಯ ಪನೋರಮಾ ವಿಭಾಗದಲ್ಲಿ ಈ ಚಿತ್ರ ಪ್ರದರ್ಶಿತವಾಗಿದ್ದು, ಐಸಿಎಫ್‌ಟಿ-ಯುನೆಸ್ಕೊ ಗಾಂಧಿ ಪಾರಿತೋಷಕಕ್ಕಾಗಿಯೂ ಇತರೆ ಎಂಟು ಚಲನಚಿತ್ರಗಳೊಂದಿಗೆ ಸೆಣಸುತ್ತಿದೆ.
ಈ ಸಿನಿಮಾಕ್ಕೆ ಅರ್ಜುನ್ ರಾಜಾರ ಸಿನೆಛಾಯಾಗ್ರಹಣವಿದ್ದರೆ, ಶಿವಕುಮಾರ್ ಸ್ವಾಮಿಯವರ ಸಂಕಲನವಿದೆ. ಕಲಾವಿದರ ಬಳಗದಲ್ಲಿ ಗ್ರೀಷ್ಮಾ ಶ್ರೀಧರ್ ಜತೆಗೆ ಸನಾತನಿ, ಕೃಷ್ಣೇಗೌಡ, ಕಾವೇರಿ ಶ್ರೀಧರ್, ಸೌಮ್ಯ ಭಾಗವತ್, ವಿಜಯ್ ಮತ್ತಿತರರು ಇದ್ದಾರೆ.