ಧಾರವಾಡ: ನನ್ನೂರು ಧಾರವಾಡ… ನನ್ನ ಹಿಂಗ ಕಾಡಬ್ಯಾಡಾ… ನನ್ನದೆಯ ಒಳಗ ನೀನು ಬುಡ ಬುಡಕಿ ಯಾಡ ಬ್ಯಾಡ…ಅಂತ ಹಾಡಹೇಳಕೊಂತ ಸೃಜನಾ ರಂಗಮಂದಿರ ಮೆಟ್ಟಲ ಮ್ಯಾಲ …ಬಪ್ಪರೆ ಹುಲಿಯಾ..ಶಬ್ಬಾಶ್..ಅನ್ನಕೊಂತ ನಿಂತಿದ್ದರಿಪಾ ಕಲಕೇರಿ ಗಿಡ್ಡ ಬಸನಗೌಡನ ಮಗಾ ಮಡ್ಡ ಕಲ್ಲಪ್ಪಗೌಡ.
ಅವಗೂ ಯುವಜನೋತ್ಸವದ ಪೋಸ್ಟರ್ ನೋಡಿ ಏನರಿ ಇದ್ದಿತು ಇದ್ರಾಗ ಒಂದ ರೌಂಡ್ ಹಾದು ಬರೂನ ಅಂತ ಬಂದಿದ್ದಾ ಕಾಣತೈತಿ. ನಾಲ್ಕ ದಿನದಿಂದ ಇಲ್ಲೇ ಠಿಕಾಣಿ ಹೂಡ್ಯಾನ ನೋಡ್ರಿಪಾ. ನಕಲಿ ಪಾಸ್ ತುಗೊಂಡ ಮಿಡಿಯಾ ರೂಮನ್ಯಾಗ ಹೊಕ್ಕ ಬಿಟ್ಟಾನ ಹೇಳ್ತೇನಿ. ಎಲ್ಲಾರ ಕಿಂತಾ ಮದಲ ಅವಂದ ಊಟ, ಚಾ, ನಾಸ್ಟಾ, ಒಟ್ಟ ಅವಗ ದಾದ್ ಬಿ ನಹಿ ಪಿರ್ಯಾದ್ ಬಿ ನಹಿ. ಹಿಂಗ ಮಸ್ತ ಹೊಡಕೊಂದ ಅಲ್ಲೇ ಏನೇನ ನಡದತಿ ಅಂತ ಹೇಳಕೊಂತ ಅಡ್ಯಾಡಾತಾನು. ಒನ್ನೆ ದಿನಾ ಡ್ಯಾನ್ಸ್ ನೋಡಿದ ಸುದ್ದಿ ಹೆಂಗ ಹೇಳಿದಾ ಅಂದ್ರ….!
ಕಾಲೇಜು ಹುಡಗೂರು ಮಸ್ತ ಡ್ರೆಸ್ ಹಾಕ್ಕೊಂಡು ಏನ್ ಕುಣತ್ರಿಪಾ ಆ ಹುಡಗುರದೂ ಅಂತೇನಿ. ಬಣ್ಣ ಬಣ್ಣದ ದೋತರಾ, ಪಟಗಾ ಚೆ ಚೇ ಚೇ… ಅವರ ಕುಣಿಯೂ ಹೊಡತಕ್ ಸೃಜನಾ ರಂಗಮಂದಿರದ ಸ್ಟೇಜ್ ಗದಗುಟ್ಟ ನಡಗಿ ಹೋತ್ರಿ. ಪಂಜಾಬ ಅಂದ್ರ ಕೇಳದೈತಿ, ಮದ್ಲ ಬಲ್ಲೆ ಬಲ್ಲೆ ಮಂದಿ ಅದು. ನೋಡಬೇಕ್ರಿ ವೈಭವಾನಾ. ಇನ್ನ ನಮ್ಮ ಗಟಂ ಮುರುಘನ್ ಸಂತಾನ ತಮಿಳು ಮಕ್ಕಳ್ ತಲಿ ಮ್ಯಾಲ ಕೊಡ ಇಟಕೊಂಡ ಕಾಲಿಗಿ ಮರಗಾಲ ಕಟ್ಟಕೊಂಡ ಕುಣದ್ರಪಾ ಎಪ್ಪೋ ಚೇ ಚೇ ಉಳಚಿ ಬಸಪ್ಪನ ಜಾತ್ರ್ಯಾಗ ಕಮಲಾಪೂರ ಮಂದಿ ಮುಳ್ಳಿನ ಹೆಜ್ಜಿ ಮಜಲ ಕುಣದಂಗಿತ್ತು. ನಾಲ್ಕ ದಿನಾ ಯುವಜನೋತ್ಸವದ ಗುಂಗನ್ಯಾಗ ಮುನಿಗೆ ಎದ್ದಾರಪ್ಪಾ ಹೇಳತಿನಿ ಧಾರವಾಡದ ಹುಡಗೂರು, ಸಂಜಿ ಆತಂದ್ರ ಕೆಸಿಡಿ ಗ್ರೌಂಡ್, ಸರ್ಕಲ್ ಹೊಗ್ಗೊ ಮಾರಾಯಾ ಯಾವಾಗೂ ನೋಡಿಲ್ಲಪಾ ಇಂತಾ ಮಜಾನಾ ಅನ್ನೊಂಗ ಕಾಣ್ಸಾತತಿ ಧಾರವಾಡ. ಎರಡನೇ ದಿನಾ..ಅಯ್ಯೋ ಎಪ್ಪಾ ಯಾಕ ಕೇಳತಿರಿ..:
ದಿನಾ ರಾತ್ರಿ ಅಂತೂ ಹುಚ್ಚೆದ್ದ ಹಾಡಾ ಹಾಡವ್ರು ಬರಾತಾರು. ವಿಜಯ ಪ್ರಕಾಶ ಓಪನಿಂಗ್ ಮಾಡಿದಾ, ಆ ಮ್ಯಾಲ ಭಾರಧ್ವಾಜ್ ಅಂತ, ಆಲ್ ಓಕೆ ಅಂತ, ಅವ್ರಲ್ಲಾ ಯಾರೋ ಏನಕತೀನೋ ನಮಗ ಗೊತ್ತಿಲ್ಲರಿಪಾ. ಆದ್ರ ಈಗಿನ ಹುಡಗುರ ಬಾಯಾಗ ಇರೋ ಸಿಂಗರ್ ಅಂತ ಅವ್ರು. ಒಟ್ಟನ್ಯಾಗ ಕುರ್ಚೆದ ಮ್ಯಾಲ ಕುಂಡಿಯೂರಿ ಕುಂದ್ರಲಂಗ ಆಗೇತಿ ಧಾರವಾಡದ ಯುವಕರಿಗೆ. ಒಟ್ಟ ಕುಣಿಯುದೂ ಕುಣಿಯೂದರಿಪಾ.
Related Articles
ಮೂರನೇ ದಿನಾ..: ಇನ್ ಮಳಗಿ ಸಾಲನ್ಯಾಗ ಎಲ್ಲಾ ರಾಜ್ಯದ ಯುವಕರು ಹೊಸ ಹೊಸ ಅನ್ವೇಷಣಾ ಮಾಡಿಕೊಂಡ ತಂದಿರೋದನ್ನ ನೋಡೂದ ಒಂದಕಡೆ ಚಂದ ಆದ್ರ, ಎಲ್ಲಾ ರಾಜ್ಯದ ತಿಂಡಿ ತಿನಿಸು ತಿನ್ನೊದು ಇನ್ನೊಂದು ಮಜಾರಿಪಾ. ಕೇರಳದ್ದ ಬಾಳಿಹಣ್ಣಿನ ಬಜ್ಜಿ. ರಾಜಸ್ಥಾನದ ಮಜ್ಜಗಿ. ಹರಿಯಾಣದ ಲಾಡು ಚೇ ಚೇ ಎಲ್ಲಾ ಹೋಗಲ್ರಿಪಾ ಅರುಣಾಚಲ ಪ್ರದೇಶದ್ದ ಮಂದಿ ಅನ್ನದಾಗ ಕೇಕ್ ಮಾಡ್ಯಾರ್. ಹುಂಚಿ ಚಿಗಳಿಯಿಂದ ಹಿಡದ ಹಸರ ಚಹಾದ ಮಠಾ ಏನತಿಂತಿ ತಿನ್ನ ಏನ ಕುಡಿತಿ ಕುಡಿ.
ನಾಲ್ಕನೇ ದಿನಾ ಹೇಳತನಿ ಮಜಾ ನಿಮಗ….ಸಂಕ್ರಾಂತಿ ಊಟ ಅಂತ ಹೇಳಿ ದೇಶದ ಬ್ಯಾರೆ ಬ್ಯಾರೆ ರಾಜ್ಯದಿಂದ ಬಂದ್ ಹುಡಗೂರಿಗೆ ಉತ್ತರ ಕರ್ನಾಟಕದ ಜ್ವಾಳದ ರೊಟ್ಟಿ ಎಣಗಾಯಿ ಪಲ್ಯೆ ತಿನ್ನಿಸಿಬಿಟ್ಟಾರ ಹೇಳ್ತನಿ ನಿಮಗ. ಎಪ್ಪಾ ಹುಡಗೂರು ಹುರುಪೆದ್ದ ತಿಂದು ಖುಷಿ ಪಟ್ಟವು. ಆದ್ರ ಮಣಿಪುರ, ಅಸ್ಸಾಂ ಕಡಿಯಿಂದ ಬಂದಿದ್ದ ಹುಡಗೂರು ಒಣಾ ರೊಟ್ಟಿನ ಇಡೇತ ತಿನ್ನಾಕ ಹೋಗಿ ಗಂಟಲಾಗ ಸಿಕ್ಕೊಂಡು ಫಜೀತಿ ಪಟ್ಟುವಂತ. ಇನ್ನ ಆಂಧ್ರದ ಕಡಪಾ ಹುಡಗರಂತು ಹಸಿಖಾರಾದ ಅಡಗಿ ಉಂಡ ಛಾಲಾ ಬಾಗುಂದಿ ಟೇಸ್ಟ್ ಅಂದುವಂತ.
ವಿವಿಐಪಿ ಅಂದ್ರ ಬರೀ ಅಧಿಕಾರಿಗೋಳು ಮತ್ತು ರಾಜಕಾರಣಿಗಳ ಮಕ್ಕಳ ಅಷ್ಟ ಅಂತ ಕಲ್ಲಪ್ಪಗೌಡಗೂ ಈಗ ಗೊತ್ತಾತು. ಯಾಕಂದ್ರ ಡ್ಯಾನ್ಸ ಕೊಡಿಯೋ ಕೆಸಿಡಿ ಸ್ಟೇಜ್ ಮುಂದ ವಿವಿಐಪಿ ಚೇರ್‌ನ್ಯಾಗ ಬರೀ ಅವ್ರ ಹತಗಡಿ ಮಂದಿನ ಕುಂತ ಮಜಾ ಮಾಡಿದ್ರು. ಯುವಜನೋತ್ಸವ ಅಂದ್ರ ಅದು ಯುವಕರದ್ದಾಗಬೇಕಿತ್ತು. ಆದ್ರ ಯಾರ್ಯಾರಧ್ದೋ ಆಗಿ ಬಿಟ್ಟತೇನೋ ಅಂತಾ ಕಲ್ಲಪ್ಪಗೌಡಗ ಒಂದಿಷ್ಟು ಸಿಟ್ಟು ಬಂದೈತ್ರಪಾ ಕಡೇದಿನಾ.
ಮಸ್ತ ಮಜಾ ಮಾಡಿ..ಅಷ್ಟೇ..
ಕಲ್ಲಪ್ಪಗೌಡಂದು ಏನಪಾ ಅಂದರ ಮಸ್ತ ಮಜಾ ಮಾಡಿ ಅನ್ನಾವ ಅಂವಾ. ಯಾಕಂದ್ರ ಅವನ ಮೀಡಿಯಾದ ನಕಲಿ ಪಾಸ್ ಕೊಳ್ಳಾಗ ಮಾಡಿಸಿ ಹಕ್ಕೊಂಡನೋ ಏನ್ ವಾರ್ತಾ ಇಲಾಖೆಯವ್ರ ಅವನ್ನ ಕರದ ನೀನು ಒಂದ ರೌಂಡ್ ಮಜಾ ಮಾಡಪಾ ಅಂತ ಹೇಳಿ ಒಂದ ಪಾಸ್ ಅವಗ ಕೊಟ್ಟರೋ ಗೊತ್ತಿಲ್ಲ. ಒಟ್ಟನ್ಯಾಗ ಮೀಡಿಯಾದವರ ಹೆಸ್ರಿನ ಮ್ಯಾಲ ಯುವ ಉತ್ಸವದೊಳಗ ಒಂದಿಷ್ಟ ಮಂದಿ ಜಾತ್ರಿ ಮಾಡಿದ್ದಂತೂ ಖರೇನ. ಯಾರದಾರ ದುಡ್ಡು ಯಲ್ಲಮ್ಮನ ಜಾತ್ರಿ ಅನ್ನೊದು ಹೆಂಗ ಅಂತ ತೋರಸಾಕ ಮಾಡಿರಬೇಕು ಅವ್ರು. ಯುವಜನೋತ್ಸವ ಯಾರಿಗೆ ಎಷ್ಟ ಉಪಯೋಗ ಆತೋ ಗೊತ್ತಿಲ್ಲಪಾ, ಆದ್ರ ನಮ್ಮ ಯುನಿವರ್ಸಿಟಿ, ಕೆಸಿಡಿ, ಕೃಷಿ ವಿವಿ ಒಳಗಿನ ರಸ್ತೆಗೋಳಗಿ ಒಂದಿಷ್ಟ ಡಾಂಬರ್ ಅಂತೂ ಬಿತ್ತು.
*ಬಸವರಾಜ ಹೊಂಗಲ್