ನಂಜನಗೂಡು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದೆನಿಸಿದ ನಂಜನಗೂಡಿನಲ್ಲಿ ಆರಾಧ್ಯದೈವ ನಂಜುಂಡೇಶ್ವರನ ಮದುವೆಯನ್ನು ಶುಕ್ರವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿ ಭಕ್ತರು ಪುನೀತರಾದರು.
ನಂಜುಂಡೇಶ್ವರನ ಭಕ್ತರ ಮನೆಗಳಲ್ಲಿ ಮದುವೆಯ ಕಾಲ ಮುಗಿದು ಆಷಾಢದ ವಿರಾಮ ಪ್ರಾರಂಭವಾದಾಗ ಅವರೆಲ್ಲರ ಆರಾಧ್ಯ ದೈವನಿಗೆ ವಿವಾಹ ಸಂಭ್ರಮ. ಪ್ರತಿವರ್ಷ ಮಿಥುನ ಮಾಸದಲ್ಲಿ ಪ್ರಾರಂಭವಾಗುವ ಗಿರಿಜಾ ಕಲ್ಯಾಣ ಒಂದು ವಾರಗಳ ಕಾಲ ನಡೆಯುತ್ತದೆ. ದೇವ ದಂಪತಿಗಳ ವಿವಾಹ ಮಹೋತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಪುನೀತರಾಗುತ್ತಾರೆ.
ಅದ್ಧೂರಿಯಾಗಿ ನಡೆದ ಶುದ್ಧ ವೈದಿಕ ಸಂಪ್ರದಾಯದ ಮದುವೆಯಲ್ಲಿ ಕಳಶ, ಕನ್ನಡಿ, ಎಣ್ಣೆ ಮಜ್ಜನ, ಆನೆ ಮೇಲೆ ಮೆರವಣಿಗೆ, ಜಾನಪದ ನೃತ್ಯಗಳಾದ ಕಂಸಾಳೆ, ವೀರಗಾಸೆಯಂತಹ ಸಂಪ್ರದಾಯಗಳೂ ಸೇರಿ ಮದುವೆಯನ್ನು ಇನ್ನಷ್ಟು ಅದ್ಧೂರಿಯಾಗಿಸಿದವು. ಈ ಕಲ್ಯಾಣೋತ್ಸವದ ಮೊದಲನೆಯ ದಿನ ವರಪೂಜೆ ಕಾರ್ಯಕ್ರಮ.
ಪ್ರಾರಂಭದಲ್ಲಿ ಅರಿಶಿನ ಕುಂಕುಮ ಹಾಗೂ ಎಣ್ಣೆಯನ್ನು ಆನೆಯ ಮೇಲೆ ಮೆರವಣಿಗೆ ಮಾಡಿ ಇದೇ ಅರಿಶಿನ ಕುಂಕುಮವನ್ನು ರಥ ಬೀದಿಗಳಲ್ಲಿನ ಮನೆಯವರಿಗೆ ನೀಡಿ ಮದುವೆಗೆ ಕರೆಯುವುದು ಇಲ್ಲಿನ ವಿಶೇಷ ಸಂಪ್ರದಾಯ, ನಂತರ ವರಪೂಜೆ ಕಾರ್ಯಕ್ರಮ.
ಎರಡನೆಯ ದಿನ ಪ್ರಮುಖ ಘಟ್ಟ ಧಾರಾ ಕಾರ್ಯಕ್ರಮ ಅಂದು ನಾಂದಿ, ಧಾರಾ ಪೂಜೆ, ಗೃಹ ಯಜ್ಞ, ಕಾಶಿ ಯಾತ್ರೆಯ ನಂತರ ಪಾರ್ವತಿಯನ್ನು ವಿಷಕಂಠನಿಗೆ ಧಾರೆ ಎರೆಯುವುದನ್ನು ನೋಡುವುದೇ ಭಕ್ತರ ಸೌಭಾಗ್ಯ. ನಂತರ ದೇವ ದಂಪತಿಗಳನ್ನು ಹಸೆಮಣೆಗೇರಿಸಿ ಭಕ್ತರು ತಮ್ಮ ಭಕ್ತಿಯನ್ನು ಮೆರೆಯುತ್ತಾರೆ.