Advertisement

ನಂಜನಗೂಡು ಕ್ಷೇತ್ರದ ಕೈ ಟಿಕೆಟ್ ಗೊಂದಲ: ಹೆಚ್.ಸಿ.ಮಹದೇವಪ್ಪ ಮಹತ್ವದ ಹೇಳಿಕೆ

10:22 PM Mar 15, 2023 | Team Udayavani |

ಮೈಸೂರು:ನಂಜನಗೂಡು ಚುನಾವಣಾ ಕಣದಿಂದ ನಾನು ಹಿಂದೆ ಸರಿದಿದ್ದೇನೆ, ನನ್ನ ಸಂಪೂರ್ಣ ಬೆಂಬಲ ದರ್ಶನ್ ಧ್ರುವನಾರಾಯಣ್ ಗೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಬುಧವಾರ ಮಹತ್ವದ ಹೇಳಿಕೆ ನೀಡಿದ್ದಾರೆ.

Advertisement

ಮಾಜಿ ಸಂಸದ ದಿವಂಗತ ಧ್ರುವ ನಾರಾಯಣ್ ಪುತ್ರ ದರ್ಶನ್ ಗೆ ಸಾಂತ್ವನ ಹೇಳಿದ ಬಳಿಕ ಹೇಳಿಕೆ ನೀಡಿದ ಅವರು, ನನ್ನ ಆತ್ಮಸಾಕ್ಷಿ ಪ್ರಕಾರ ಈ ನಿರ್ಧಾರ ಮಾಡಿದ್ದೇನೆ.ಸಿದ್ದರಾಮಯ್ಯ ಅಥವಾ ಇನ್ಯಾವ ರಾಜಕೀಯ ನಾಯಕರ ಜೊತೆಯೂ ನಾನು ಈ ಬಗ್ಗೆ ಚರ್ಚೆ ಮಾಡಿಲ್ಲ.ಇವತ್ತಿನಿಂದ ನಂಜನಗೂಡು ಚುನಾವಣಾ ವಿಚಾರದಲ್ಲಿ ನಾನು ದರ್ಶನ್ ನನ್ನು ಬೆಂಬಲಿಸುತ್ತೇನೆ. ಧ್ರುವನಾರಾಯಣ್ ಜೊತೆ ನನಗೆ ಯಾವತ್ತೂ ರಾಜಕೀಯ ಭಿನ್ನಾಭಿಪ್ರಾಯ ಇರಲಿಲ್ಲ ಎಂದರು.

ನಂಜನಗೂಡು ಉಪ ಚುನಾವಣೆಯಲ್ಲಿ ನನ್ನ ಮಗ ಸುನೀಲ್ ಬೋಸ್ ಗೆ ಟಿಕೆಟ್ ಕೊಡಿ ಎಂದು ಹಲವರು ಒತ್ತಾಯಿಸಿದ್ದರು.ಆದರೆ ಕಳಲೆ ಕೇಶವಮೂರ್ತಿ ಗೆ ಹೈಕಮಾಂಡ್ ಟಿಕೆಟ್ ಕೊಟ್ಟಿತ್ತು. ನಾನು ನಂಜನಗೂಡು ಅಭಿವೃದ್ಧಿ ಮಾಡಿದ್ದು ನೋಡಿ ನನಗೆ ಅಲ್ಲಿಯೆ ಸ್ಪರ್ಧಿಸುವಂತೆ ಜನ ಕರೆದ ಕಾರಣ ನಂಜನಗೂಡು ಸ್ಪರ್ಧೆಗೆ ನಿರ್ಧರಿಸಿದ್ದೆ ಎಂದರು.

ನಾನು ಮತ್ತು ಧ್ರುವನಾರಾಯಣ್ ಇಬ್ಬರು ಅರ್ಜಿ ಹಾಕಿದ್ದು ಸತ್ಯ. ಧ್ರುವನಾರಾಯಣ್ ಅಗಲಿಕೆಯಿಂದ ದಲಿತ ಸಮುದಾಯಕ್ಕೆ ಬಹು ದೊಡ್ಡ ನಷ್ಟವಾಗಿದೆ. ಸಮಾಧಿಯ ಮೇಲೆ ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ. ಸಮಾಧಿ ಮೇಲೆ ರಾಜಕೀಯ ಬೆಳೆ ತೆಗೆಯುವ ವ್ಯಕ್ಯಿತ್ವ ನನ್ನದ್ದಲ್ಲ. ಅಧಿಕಾರದ ರಾಜಕಾರಣಕ್ಕೆ ಯಾವತ್ತೂ ಅಂಟಿ ಕುಳಿತಿಲ್ಲ. ವ್ಯಕ್ತಿಗಿಂತ ಅಧಿಕಾರ ಅಂತಸ್ತು ಮುಖ್ಯವಲ್ಲ.ನನ್ನ ಮಗ ಸುನೀಲ್ ಬೋಸ್ ಬೇರೆ ಅಲ್ಲ, ದರ್ಶನ್ ಧ್ರುವನಾರಾಯಣ್ ಬೇರೆಯಲ್ಲ ಎಂದರು.

ದರ್ಶನ್ ಧ್ರುವನಾರಾಯಣ್ ಜೊತೆ ನಿಲ್ಲುವುದು ನನ್ನ ಕರ್ತವ್ಯ. ಸಾವಿನಲ್ಲೂ ಗಳ ಇರಿಯುವ ಕೆಲಸ ಮಾಡಬಾರದು. ಕೆಲವರು ಈ ಕೆಲಸ ಮಾಡಿದ್ದಕ್ಕೆ ನನಗೆ ಬೇಸರವಿದೆ ಎಂದರು.

Advertisement

ಬಿ. ರಾಚಯ್ಯನವರ ಶಿಷ್ಯನಾಗಿ 40 ವರ್ಷಗಳ ಸಾರ್ವಜನಿಕ ಬದುಕನ್ನು ಪೂರೈಸಿದ ಈ ಸಂದರ್ಭದಲ್ಲಿ ನಮ್ಮ ಗುರುಗಳು ಮತ್ತು ಈ ರಾಜ್ಯದ ದಲಿತ ಸಂಘಟನೆಗಳು ಹೇಳಿಕೊಟ್ಟ ಪಾಠವನ್ನು ಅಕ್ಷರಶಃ ಪಾಲಿಸಿದ್ದೇನೆ. ನನ್ನ ದೈನಂದಿನ ಓದು ಬರಹದ ಜೊತೆಗೆ ನನ್ನದೇ ಆದ ಕೆಲವು ಬದುಕಿನ ಅನುಭವಗಳ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ನ್ಯಾಯದ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಇದರ ಪರಿಣಾಮವೇ ಕರ್ನಾಟಕದಲ್ಲಿ 40 ಸಾವಿರ ಕಿಲೋಮೀಟರ್ ರಸ್ತೆಗಳ ನಿರ್ಮಾಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ಮಹತ್ವದ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ನನಗೆ ಸಾಧ್ಯವಾಗಿದೆ. ನನಗೆ ನೆನಪಿರುವಂತೆ ನಾನು ಯಾರನ್ನೂ ದ್ವೇಷ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಒಬ್ಬರನ್ನು ವೈಯಕ್ತಿಕವಾಗಿ ನಿಂದಿಸುವುದಾಗಲೀ ಅಥವಾ ತೇಜೋವಧೆ ಮಾಡುವ ಕೆಲಸವನ್ನಾಗಲೀ ನಾನು ಮಾಡಿಲ್ಲ. ಇದು ನನ್ನನ್ನು ಸರಿಯಾಗಿ ಬಲ್ಲ ಎಲ್ಲರಿಗೂ ಗೊತ್ತು ಎಂದು ನೋವು ಹೊರ ಹಾಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next