ನಾಂದೇಡ್ : ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗರ್ಗವಾನ್ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಡಿಸಲಾದ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಾವು ಪತ್ತೆಯಾಗಿರುವುದು ವರದಿಯಾಗಿದೆ.
ಒಂದರಿಂದ ಐದನೇ ತರಗತಿಯ ವರೆಗಿನ ಸುಮಾರು 80 ಮಕ್ಕಳಿಗೆ ಬಡಿಸಲಾಗಿದ್ದ ಖೀಚ್‌ಡಿಯಲ್ಲಿ ಹಾವು ಪತ್ತೆಯಾದದ್ದು ತೀವ್ರ ಆತಂಕಕ್ಕೆ ಕಾರಣವಾಯಿತು. ಶಾಲಾ ಸಿಬಂದಿಗಳು ಮಕ್ಕಳಿಗೆ ಖೀಚ್‌ಡಿ ಬಡಿಸುತ್ತಿದ್ದಂತೆಯೇ ಅವರಿಗೆ ಅದರಲ್ಲಿ ಸತ್ತ ಹಾವು ಇರುವುದು ಕಂಡು ಬಂತು.
ತತ್‌ಕ್ಷಣವೇ ಮಕ್ಕಳಿಗೆ ಬಳಸುವುದನ್ನು ನಿಲ್ಲಿಸಲಾಯಿತು. ಮಧ್ಯಾಹ್ನದ ಬಿಸಿಯೂಟ ಇಲ್ಲದೇ ಮಕ್ಕಳು ಹಸಿವಿನಲ್ಲೇ ಮನೆಗೆ ಮರಳಿದರು ಎಂದು ವರದಿಗಳು ತಿಳಿಸಿವೆ.
ನಾಂದೇಡ್ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಓ) ಪ್ರಶಾಂತ್ ದಿಗ್ರಾಸ್ಕರ್ ಅವರು ಈ ಘಟನೆಯನ್ನು ದೃಢೀಕರಿಸಿದ್ದು ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದ್ದಾರೆ.
ಘಟನೆಯ ತನಿಖೆ ಮತ್ತು ತುರ್ತು ಕ್ರಮಕ್ಕಾಗಿ ಡಿಇಓ ತಂಡವೊಂದನ್ನು ಶಾಲೆಗೆ ಕಳುಹಿಸಲಾಗಿದೆ ಎಂದು ದಿಗ್ರಾಸ್ಕರ್ ಹೇಳಿದರು.