Advertisement

ನಾಗಾಭರಣರ ಕಾನೂರಾಯಣ

06:10 PM Feb 10, 2018 | Team Udayavani |

ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರು “ಕಾನೂರಾಯಣ’ ಎಂಬ ಚಿತ್ರವನ್ನು ಸದ್ದಿಲ್ಲದೆ ನಿರ್ದೇಶಿಸುವಲ್ಲಿ ನಿರತರಾಗಿದ್ದಾರೆ ಎಂಬ ಸುದ್ದಿ ಇದ್ದೇ ಇತ್ತು. ಈಗ ಆ ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ಅವರು, ಚಿತ್ರದ ಹಾಡುಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆಯವರು ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

Advertisement

ಈ ಚಿತ್ರದ ವಿಶೇಷತೆಯೆಂದರೆ, ಈ ಚಿತ್ರವು ಬರೀ ಸಹಕಾರಿ ವ್ಯವಸ್ಥೆಯಲ್ಲಷ್ಟೇ ಅಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಟ್ರಸ್ಟ್‌ನ ವತಿಯಿಂದ ನಿರ್ಮಾಣವಾಗಿದೆ. ಆ ಟ್ರಸ್ಟ್‌ನ ವಿವಿಧ ಸಂಘಗಳಲ್ಲಿ ಸುಮಾರು 20 ಲಕ್ಷ ಸದಸ್ಯರಿದ್ದು, ಒಬ್ಬೊಬ್ಬ ಸದಸ್ಯ ತಲಾ 20 ರೂಪಾಯಿ ಹಾಕಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದು ಚಿತ್ರಕ್ಕೆ ಅಷ್ಟೊಂದು ಸಂಖ್ಯೆಯ ನಿರ್ಮಾಪಕರು ಇದೇ ಮೊದಲು.

ಹಾಗಾಗಿ ಇದು ದಾಖಲಾರ್ಹ ಚಿತ್ರ ಎಂದರೆ ತಪ್ಪಿಲ್ಲ. 20 ಲಕ್ಷ ಜನ 20 ರೂಪಾಯಿ ಹಾಕಿರುವುದರಿಂದ ನಾಲ್ಕು ಕೋಟಿಯಷ್ಟು ಸಂಗ್ರಹವಾಗಿದ್ದು, ಅದರಲ್ಲಿ ಸುಮಾರು ಎರಡೂ ಕಾಲು ಕೋಟಿ ಚಿತ್ರಕ್ಕೆ ಖರ್ಚಾಗಿದೆ. ಬಿಡುಗಡೆಗೆ ಇನ್ನೊಂದಿಷ್ಟು ಖರ್ಚಾಗಲಿದೆ. ಈ ಚಿತ್ರದಲ್ಲಿ ಆರ್ಥಿಕ ಶಿಸ್ತಿನ ಕುರಿತು ಹೇಳಲಾಗಿದ್ದು, ಅದೇ ಈ ಚಿತ್ರದ ಕಥೆ ಎನ್ನುತ್ತಾರೆ ನಾಗಾಭರಣ. “ಗ್ರಾಮೀಣಾಭಿವೃದ್ಧಿಗೆ ಮುಖ್ಯವಾಗಿದ್ದು ಎಂದರೆ ಅದು ಆರ್ಥಿಕ ಶಿಸ್ತು.

ಕೆಲಸದಲ್ಲಿರುವವರಿಗೆ ಪ್ರತಿ ತಿಂಗಳು ಸಂಬಳ ಇರುತ್ತದೆ. ಆದರೆ, ಕೃಷಿಕರಿಗೆ ಹಾಗಿಲ್ಲ. ಅವರಿಗೆ ಕೆಲಸ ಮತ್ತು ಆದಾಯ ಎರಡೂ ರೆಗ್ಯುಲರ್‌ ಆಗಿರುವುದಿಲ್ಲ. ಹಾಗಾಗಿ ಅವರ ಜೀವನದಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ. ಗ್ರಾಮೀಣ ಭಾಗದಲ್ಲಿ ಆರ್ಥಿಕ ಶಿಸ್ತು ಸಾಧಿಸುವುದು ಹೇಗೆ ಎಂಬ ವಿಷಯದ ಕುರಿತು ಒಂದು ಕಾಲ್ಪನಿಕ ಕಥೆ ಹೆಣೆದು ಚಿತ್ರ ಮಾಡಿದ್ದೇವೆ. ಇಲ್ಲಿ ಹಲವು ನಿಜಜೀವನದ ಕಥೆಗಳನ್ನಿಟ್ಟುಕೊಂಡು, ಒಂದು ಕಥೆ ಮಾಡಿ, ಒಂದಿಷ್ಟು ಮನರಂಜನೆಯ ಅಂಶಗಳನ್ನು ಸೇರಿಸಿ ಈ ಚಿತ್ರ ಮಾಡಿದ್ದೇವೆ.

ಚಿತ್ರ ನೋಡಿದವರು ನಾಗಾಭರಣ ಈ ತರಹದ ಕಾಮಿಡಿ ಮಾಡಿದರಾ ಎಂದನಿಸಬಹುದು’ ಎನ್ನುತ್ತಾರೆ ನಾಗಾಭರಣ. ಇದು ವ್ಯಕ್ತಿಯ ಕಥೆಯಲ್ಲ, ಊರಿನ ಕಥೆ ಎನ್ನುತ್ತಾರೆ ನಾಗಾಭರಣ. “ಇದು ಒಬ್ಬ ವ್ಯಕ್ತಿಯ ಕಥೆಯಲ್ಲ. ಒಂದು ಊರಿನ ಕಥೆ. ಆ ಊರಿನ ಹಲವರ ಕಥೆ. ಕಾನೂರು ಎಂಬ ಕಾಲ್ಪನಿಕ ಊರಿನ ಕಥೆ ಇದೆ. ಇಲ್ಲಿ ಊರಿನ ಹೆಸರು ಮಾತ್ರ ಕಾಲ್ಪನಿಕ. ಆದರೆ, ಇದು ಯಾವುದೇ ಊರಿನಲ್ಲಾದರೂ ನಡೆಯಬಹುದಾದ ಕಥೆ. ಇಡೀ ಕುಟುಂಬ ಕೂತು ನೋಡಬಹುದಾದ ಕಥೆ ಇದಾಗಲಿದೆ.

Advertisement

ಪ್ರಮುಖವಾಗಿ ಗ್ರಾಮಿಣಾಭಿವೃದ್ಧಿಯ ಆಶಯಕ್ಕೆ ಎಲ್ಲೂ ಧಕ್ಕೆಯಾಗದಂತೆ ಇಡೀ ಕಥೆಯನ್ನು ಮನರಂಜನಾತ್ಮಕವಾಗಿ ಹೇಳಿದ್ದೇವೆ’ ಎನ್ನುತ್ತಾರೆ ಅವರು. ಈ ಚಿತ್ರಕ್ಕೆ ಹರೀಶ್‌ ಹಾಗಲವಾಡಿ ಕಥೆ ಬರೆದರೆ, ನಾಗಾಭರಣ ಮತ್ತು ಪನ್ನಗಾಭರಣ ಚಿತ್ರಕಥೆ ರಚಿಸಿದ್ದಾರೆ. ಚಿತ್ರದಲ್ಲಿ ಸ್ಕಂದ ಅಶೋಕ್‌, ಸೋನು, ದೊಡ್ಡಣ್ಣ, ಕರಿಸುಬ್ಬು, ಸುಂದರ್‌ರಾಜ್‌, ಗಿರಿಜಾ ಲೋಕೇಶ್‌, ನೀನಾಸಂ ಅಶ್ವತ್ಥ್ ಮುಂತಾದವರು ನಟಿಸಿದ್ದು, ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ.

ಕೆಂಪೇಗೌಡರ ಕುರಿತು ಚಿತ್ರ: ನಾಗಾಭರಣ ಅವರು ಕಳೆದ ಕೆಲವು ತಿಂಗಳುಗಳಿಂದ ಕೆಂಪೇಗೌಡರ ಕುರಿತು ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ಮುಂದೊಂದು ದಿನ ಚಿತ್ರ ಮಾಡುವುದು ಅವರ ಯೋಚನೆ. ಆದರೆ, ಇದೀಗ “ಪದ್ಮಾವತಿ’ ಚಿತ್ರಕ್ಕೆ ಎದುರಾದ ಸಮಸ್ಯೆಗಳನ್ನು ನೋಡಿ, ಅವರಿಗೆ ಭಯ ಆಗುತ್ತಿದೆಯಂತೆ. “ಕೆಂಪೇಗೌಡರ ಕುರಿತು ಚಿತ್ರ ಮಾಡಬೇಕೆನ್ನುವುದು ಹಲವು ವರ್ಷಗಳ ಕನಸು.

ಅದಕ್ಕೆ ಸರಿಯಾಗಿ ಕೆಂಪೇಗೌಡರ ಕುರಿತಾಗಿ ಹಲವು ಗೊಂದಲಗಳಿವೆ. ಯಾರು ಏನು ಕಟ್ಟಿಸಿದರು, ಯಾರ ಕಾಲದಲ್ಲಿ ಏನೇನಾಯಿತು ಎಂಬಂತಹ ಹಲವು ಗೊಂದಲಗಳಿವೆ. ಇದಕ್ಕೆಲ್ಲಾ ಉತ್ತರವೆಂಬಂತೆ ಒಂದು ಚಿತ್ರ ಮಾಡುವ ಯೋಚನೆ ಇದೆ. ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಆದರೆ, “ಪದ್ಮಾವತಿ’ ವಿಚಾರವಾಗಿ ಆಗುತ್ತಿರುವ ಗದ್ದಲಗಳನ್ನು ನೋಡಿದರೆ, ಏನೇನಾಗುತ್ತದೋ ಎಂಬ ಭಯವಾಗುತ್ತಿದೆ’ ಎನ್ನುತ್ತಾರೆ  ನಾಗಾಭರಣ.

* ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಟ್ರಸ್ಟ್‌ನ ವತಿಯಿಂದ ನಿರ್ಮಾಣ.
* ಒಕ್ಕೂಟದಲ್ಲಿ ಸುಮಾರು 20 ಲಕ್ಷ ಸದಸ್ಯರಿದ್ದು, ಒಬ್ಬೊಬ್ಬ ಸದಸ್ಯ ತಲಾ 20 ರೂಪಾಯಿ ಹೂಡಿಕೆ.
* ನಾಲ್ಕು ಕೋಟಿಯಷ್ಟು ಸಂಗ್ರಹವಾಗಿದ್ದು, ಅದರಲ್ಲಿ ಸುಮಾರು ಎರಡೂ ಕಾಲು ಕೋಟಿ ಖರ್ಚು.
* ಗ್ರಾಮೀಣ ಭಾಗದಲ್ಲಿ ಆರ್ಥಿಕ ಶಿಸ್ತು ಸಾಧಿಸುವುದು ಹೇಗೆ ಎಂಬ ವಿಷಯದ ಕುರಿತ ಚಿತ್ರ.

Advertisement

Udayavani is now on Telegram. Click here to join our channel and stay updated with the latest news.

Next