Advertisement

ಕನ್ನಡಕ್ಕೆ ಮತ್ತೆ ನಾನಾ

11:14 AM May 08, 2018 | |

ಬಾಲಿವುಡ್‌ ನಟ ನಾನಾ ಪಟೇಕರ್‌, ಮನೋರಂಜನ್‌ ಅಭಿನಯದ “ಚಿಲ್ಲಂ’ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂಬ ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಅದೀಗ ನಿಜವಾಗಿದೆ. “ಚಿಲ್ಲಂ’ ಚಿತ್ರದಲ್ಲಿ ನಾನಾ ಪಟೇಕರ್‌ ನಟಿಸುವುದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಜೂನ್‌ನಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಸುಮಾರು ಎರಡೂವರೆ ತಿಂಗಳ ಹಿಂದೆಯೇ ನಾನಾ ಪಟೇಕರ್‌ ಮತ್ತು ಸಂಜಯ್‌ ದತ್‌ ಅವರನ್ನು ಸಂಪರ್ಕಿಸಲಾಗಿತ್ತು ಎನ್ನುತ್ತಾರೆ ಚಿತ್ರದ ನಿರ್ದೇಶಕಿ ಚಂದ್ರಕಲಾ. “ಇದೊಂದು ವಿಭಿನ್ನ ಪಾತ್ರ. ದೊಡ್ಡ ನಟರೇ ಬೇಕಿತ್ತು. ಅದೇ ಕಾರಣಕ್ಕೆ ಸಂಜಯ್‌ ದತ್‌ ಮತ್ತು ನಾನಾ ಪಟೇಕರ್‌ ಅವರನ್ನು ಸಂಪರ್ಕಿಸಿದ್ದೆವು. ನಾನಾ ಪಟೇಕರ್‌ ಕಥೆ ಕೇಳಿ ಒಪ್ಪಿಕೊಂಡಿದ್ದರು. ಈಗ ಡೇಟ್ಸ್‌ ಕೊಟ್ಟಿದ್ದಾರೆ.

ಜೂನ್‌ನಲ್ಲಿ ಅವರ ಭಾಗದ ಚಿತ್ರೀಕರಣ ನಡೆಯಲಿದೆ. ಇನ್ನು ನಾಯಕನ ಅಮ್ಮನ ಪಾತ್ರದಲ್ಲಿ ಸರಿತಾ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಜುಲೈನಲ್ಲಿ ಅವರ ಡೇಟ್ಸ್‌ ಸಿಗಲಿದ್ದು, ಆಗ ಚಿತ್ರೀಕರಣ ಮಾಡುತ್ತೇವೆ’ ಎನ್ನುತ್ತಾರೆ ಚಂದ್ರಕಲಾ. “ಚಿಲ್ಲಂ’ ಚಿತ್ರದಲ್ಲಿ ಮನೋರಂಜನ್‌ ಮೊದಲ ಬಾರಿಗೆ ಡ್ರಗ್‌ ಡೀಲರ್‌ ಪಾತ್ರ ಮಾಡುತ್ತಿದ್ದಾರಂತೆ. “ಚಿತ್ರದಲ್ಲಿ ಮನು ಅವರದ್ದು ಗಾಂಜ ಡೀಲರ್‌ ಪಾತ್ರ.

ಹಣಕ್ಕಾಗಿ ಕೆಟ್ಟ ದಾರಿ ಹಿಡಿಯುವ ಆ ಪಾತ್ರಕ್ಕೆ, ಒಂದು ಹಂತದಲ್ಲಿ ತನ್ನ ತಪ್ಪಿನ ಅರಿವಾಗುತ್ತದೆ. ಆ ನಂತರ ಏನಾಗುತ್ತದೆ ಎಂಬುದು ಕಥೆ. ಇಲ್ಲಿ ಮನು ಅವರ ಲುಕ್‌ ಸಹ ಬದಲಾಗುತ್ತದೆ. ಮನು ಅವರ ಫ‌ಸ್ಟ್‌ ಲುಕ್‌, ರವಿಚಂದ್ರನ್‌ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದೇವೆ. ಅದರಂತೆ ಮೇ 30ರಂದು ಮನು ಅವರ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಲಿದೆ.

ಇನ್ನು ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ನೆಗೆಟಿವ್‌ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿಲನ್‌ ಎಂದರೆ ಹೊಡೆದಾಟ, ಬಡಿದಾಟ ಯಾವುದೂ ಇರುವುದಿಲ್ಲ. ಮನಸ್ಸಿನಲ್ಲೇ ಸ್ಕೆಚ್‌ ಹಾಕುವ ವಿಭಿನ್ನ ಪಾತ್ರ ಅವರದ್ದು. ಅವರ ಫೋಟೋ ಶೂಟ್‌ ಸದ್ಯದಲ್ಲೇ ನಡೆಯಲಿದೆ’ ಎನ್ನುತ್ತಾರೆ ಚಂದ್ರಕಲಾ.

Advertisement

“ಚಿಲ್ಲಂ’ನಲ್ಲಿ ಮನುಗೆ ನಾಯಕಿಯಾಗಿ “ಗಣಪ’ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್‌ ನಟಿಸುತ್ತಿದ್ದು, ಮನು ಸ್ನೇಹಿತರಾಗಿ “ಬಿಗ್‌ ಬಾಸ್‌’ ದಿವಾಕರ್‌, ರಾಘವ್‌ ನಾಗ್‌, ಭರತ್‌ (ನಿರ್ದೇಶಕಿ ಚಂದ್ರಕಲಾ ಅವರ ಮಗ) ಮತ್ತು ಸಂದೀಪ್‌ ನಟಿಸುತ್ತಿದ್ದಾರೆ.

“ಮಫ್ತಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ನವೀನ್‌ ಕುಮಾರ್‌ ಇಲ್ಲಿ ಛಾಯಾಗ್ರಹಣ ಮಾಡಿದರೆ, ನೊಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದಾರೆ. ಬೆಂಗಳೂರು ಅಲ್ಲದೆ ಗೋವಾ, ಕೊಲ್ಕತ್ತಾ, ಬಿಜಾಪುರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಗೋಪಾಲ್‌ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಮೇ 16ರಂದು ಬೆಂಗಳೂರಿನಲ್ಲೇ ಸರಳವಾಗಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.