Advertisement

Namma Metro: ಗೊತ್ತು ಗುರಿಯಿಲ್ಲದೆ ನಿಧಾನಗತಿಯಲ್ಲಿ ಸಾಗಿದ ಕಾಮಗಾರಿಗಳು

03:35 PM Sep 05, 2023 | Team Udayavani |

ಬೆಂಗಳೂರು:  ದೇಶದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ರೈಲು ಜಾಲ ಹೊಂದಿರುವ ಖ್ಯಾತಿಗೆ ನಮ್ಮ ಮೆಟ್ರೋ ಭಾಜನವಾಗಿರುವುದು ಒಂದೆಡೆ ಯಾದ್ರೆ, ಇನ್ನೊಂದೆಡೆ ಅತಿ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಕುಖ್ಯಾತಿಗೂ ಪಾತ್ರವಾಗಿದೆ.

Advertisement

ಹೈದ್ರಾಬಾದ್‌, ಮುಂಬೈ, ಚೆನ್ನೈನಲ್ಲಿ ತಮಗಿಂತ ಹಿಂದುಳಿದು ಮೆಟ್ರೋ ಕಾಮಗಾರಿಗಳ ಆರಂಭಿಸಿದ್ದರೂ ಅತಿ ವೇಗವಾಗಿ ನಡೆಯುತ್ತಿವೆ. ಆದರೆ, ಬೆಂಗಳೂರು ಮೆಟ್ರೋ ಮಾತ್ರ ಗೊತ್ತು ಗುರಿಯಿಲ್ಲದೆ ಕಾಮಗಾರಿ ನಡೆಸುತ್ತ ನಿಧಾನಗತಿಯಲ್ಲಿ ಸಾಗುತ್ತಿದೆ.

ಉದಾಹರಣೆಗೆ ಬೆಂಗಳೂರಿನ “ಐಟಿ ಹಬ್‌’ ವೈಟ್‌ ಫೀಲ್ಡ್‌ ಅನ್ನು ನಗರದ ಹೃದಯ ಭಾಗಕ್ಕೆ ಬೆಸೆಯುವ ವೈಟ್‌ಫೀಲ್ಡ್‌ – ಬೈಯ್ಯಪ್ಪನಹಳ್ಳಿ ಮಾರ್ಗ ಇನ್ನೂ ಪ್ರಯಾಣಿಕರ ಸಂಚಾರಕ್ಕೆ ಲಭ್ಯ ವಾ ಗಿಲ್ಲ. ಮಾರ್ಚ್‌ನಲ್ಲಿ ಖುದ್ದು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಆದರೆ, ಕೆ.ಆರ್‌.ಪುರವನ್ನು ಬೈಯ್ಯಪ್ಪನಹಳ್ಳಿ ಜೊತೆ ಸಂಪರ್ಕಿಸಿ ತನ್ಮೂಲಕ ನೇರಳೆ ಮಾರ್ಗ ಬೆಸೆಯುವ ಮಾರ್ಗ ವಾಣಿಜ್ಯ ಬಳಕೆಗೆ ಇನ್ನೂ ಮುಕ್ತವಾಗಿಲ್ಲ!

ಎಲ್ಲೋ ಆರಂಭವಾಗಿ ಇನ್ನೆಲ್ಲೋ ಮುಕ್ತಾಯ: ಸಾಮಾನ್ಯವಾಗಿ ಪೂರ್ಣಗೊಂಡಿದ್ದ ಯೋಜ ನೆಯ ಮುಂದುವರಿದ ಭಾಗವನ್ನು ಮೊದಲು ಮುಕ್ತಾಯಗೊಳಿಸುತ್ತ ಮುಂದೆ ಸಾಗಿದರೆ, ಕಾಮಗಾರಿ ಮುಗಿಯುತ್ತಲೇ ಮೆಟ್ರೋ ಸೇವೆಯನ್ನು ವಿಸ್ತರಿಸುತ್ತ ಸಾಗಬಹುದು. ಆದರೆ, ನಮ್ಮ ಮೆಟ್ರೋದ ಕಾಮಗಾರಿ ಹೀಗೆ ಸಾಗುತ್ತಿಲ್ಲ. ಎಲ್ಲೋ ಆರಂಭವಾಗಿ ಇನ್ನೆಲ್ಲೋ ಮುಕ್ತಾಯಗೊಳ್ಳುತ್ತದೆ. ಮಿಸ್ಸಿಂಗ್‌ ಲಿಂಕ್‌ಗಳಿಂದಾಗಿ ಕಾಮಗಾರಿ ಪೂರ್ಣಗೊಂಡರೂ ಆದರ ಪ್ರಯೋಜನ ಜನರಿಗೆ ಸಿಗುತ್ತಿಲ್ಲ.

ನಿರ್ದಿಷ್ಟ ಕಾರ್ಯ ಯೋಜನೆ ಇಲ್ಲ: ನಮ್ಮ ಮೆಟ್ರೋದ ಕಾಮಗಾರಿಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ನಡೆಸಿರುವ ಸಂಜೀವ್‌ ದ್ಯಾವಣ್ಣನವರ್‌ ಹೇಳುವ ಪ್ರಕಾರ, ನಮ್ಮ ಮೆಟ್ರೋ ನಿರ್ದಿಷ್ಟ ಕಾರ್ಯ ಯೋಜನೆಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಹಂತ ಒಂದು ಮತ್ತು ಹಂತ ಎರಡರ ಪ್ರತಿಯೊಂದು ಯೋಜನೆಯೂ ವಿಳಂಬವಾಗಿದೆ. ಮುಂದಿನ ಏರ್‌ಪೋರ್ಟ್‌ ಮಾರ್ಗ ಸಹ 2027ರೊಳಗೆ ಜನರ ಬಳಕೆಗೆ ಸಿಗಲಾರದು ಎಂದು ಹೇಳುತ್ತಾರೆ.

Advertisement

ವಾಸ್ತವದಲ್ಲಿ ವೈಟ್‌ಫೀಲ್ಡ್‌ – ಬೈಯ್ಯಪ್ಪನಹಳ್ಳಿ ಮಾರ್ಗ ವರ್ಷದ ಹಿಂದೆಯೇ ವಾಣಿಜ್ಯ ಕಾರ್ಯಾಚರಣೆ ಆರಂಭಿಸಬೇಕಿತ್ತು. ಆದರೆ, ಕೋವಿಡ್‌ ಅಬ್ಬರ, ಲಾಕ್‌ಡೌನ್‌ ಮುಂತಾದ ಕಾರಣದಿಂದ ಕಾರ್ಯಾರಂಭ ವಿಳಂಬವಾಗುತ್ತಲೇ ಬಂದಿತ್ತು. ಬೆನ್ನಿಗಾನಹಳ್ಳಿಯ ಬಳಿ ರೈಲ್ವೇ ಹಳಿಯ ಮೇಲೆ ಒಪನ್‌ ವೆಬ್‌ ಗರ್ಡರ್‌ ಅಳವಡಿಸುವ ಕಾಮಗಾರಿ ವಿಳಂಬಗೊಂಡಿದ್ದರಿಂದ ಬೆನ್ನಿಗಾನಹಳ್ಳಿ – ಕೆ.ಆರ್‌.ಪುರ ಮಾರ್ಗ ಇನ್ನೂ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ ಸೆಪ್ಟೆಂಬರ್‌ ಹೊತ್ತಿಗೆ ಈ ಮಾರ್ಗ ವಾಣಿಜ್ಯ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ.

ಎರಡು ವರ್ಷವಾದ್ರೂ ಬಳಕೆಗಿಲ್ಲ: ಇದೇ ನೇರಳೆ ಮಾರ್ಗದ ಇನ್ನೊಂದು ತುದಿಯಾದ ಕೆಂಗೇರಿ -ಚಲ್ಲಘಟ್ಟದ ಮಧ್ಯೆಯ 1.9 ಕಿ.ಮೀ. ಮಾರ್ಗ ಇನ್ನೂ ಸಂಚಾರಕ್ಕೆ ಲಭಿಸಿಲ್ಲ. 2021ರಲ್ಲಿ ಮೈಸೂರು ರೋಡ್‌ – ಕೆಂಗೇರಿ ಮಾರ್ಗ ಉದ್ಘಾಟನೆಗೊಂಡಾಗ ಮುಂದಿನ 1.9 ಕಿ.ಮೀ. ಮಾರ್ಗ ಇನ್ನೇನು ಲೋಕಾರ್ಪಣೆಗೊಳ್ಳಬಹುದು ಎಂದು ಭಾವಿಸಲಾಗಿತ್ತು. ಆದರೆ, ಎರಡು ವರ್ಷವಾದ್ರೂ ಈ ಮಾರ್ಗ ಇನ್ನೂ ಬಳಕೆಗೆ ಲಭ್ಯವಾಗಿಲ್ಲ.

ಇನ್ನು ಹಸಿರು ಮಾರ್ಗದ ವಿಸ್ತರಿತ ನಾಗಸಂದ್ರ – ಮಾದಾವರ ಮಾರ್ಗ 5 ವರ್ಷ ವಿಳಂಬದ ಬಳಿಕ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ಜೊತೆಗೆ ಇಲೆಕ್ಟ್ರಾನಿಕ್‌ ಸಿಟಿಯನ್ನು ನಗರದ ಜೊತೆ ಸಂಪರ್ಕಿಸುವ ಬೊಮ್ಮಸಂದ್ರ- ರಾಷ್ಟ್ರೀಯ ವಿದ್ಯಾಲಯ ರೋಡ್‌ನ‌ ಕಾಮಗಾರಿ ಮುಕ್ತಾಯ ಗೊಂಡಿ ದ್ದರೂ ಕಾರ್ಯಾಚರಣೆ ತಡವಾಗುತ್ತಿದೆ. ಮೆಟ್ರೋ ನಿಗಮದ ಉನ್ನತ ಮೂಲಗಳ ಪ್ರಕಾರ 2024ರ ಹೊತ್ತಿಗೆ ಮೆಟ್ರೋ ಸಂಚಾರ ನಡೆಯಲಿದೆ.

ಮೆಟ್ರೋ ಕಾಮಗಾರಿ ವಿಳಂಬಕ್ಕೆ ಕಾರಣಗಳು:

ಭೂ ಸ್ವಾಧೀನದಲ್ಲಿನ ವಿಳಂಬ

ಕೊರೊನಾ ಲಾಕ್‌ಡೌನ್‌ನಿಂದ ಕೆಲಸ ಸ್ಥಗಿತ

ಮರ ಕಡಿಯುವ, ಬೇರೆಡೆಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿನ ವಿಳಂಬ

ಮೆಟ್ರೋ ಕೋಚ್‌ಗಳ ಕೊರತೆ

ಸುರಂಗ ಕಾಮಗಾರಿಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದು

ರಾಜಕೀಯ ಇಚ್ಛಾಶಕ್ತಿಯ ಕೊರತೆ

ರಾತ್ರಿ ಮಾತ್ರ ಕಾಮಗಾರಿ ನಡೆಸಲು ಅವಕಾಶ

ಶಬ್ದಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ನಿರ್ಬಂಧಗಳು 

-ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next