Advertisement

ಕಗ್ಗಂಟು ಕೈಬಿಟ್ಟು ಸಾಗಲಿರುವ ನಮ್ಮ ಮೆಟ್ರೋ?

02:26 PM Aug 12, 2021 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಯನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಹೊಸ ಪ್ರಯೋಗಕ್ಕೆ ಕೈಹಾಕಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಈ ನಿಟ್ಟಿನಲ್ಲಿ ವರ್ಷಗಟ್ಟಲೆ ಕಗ್ಗಂಟಾಗಿರುವ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟು ಮುಂದಿನ ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದೆ.

Advertisement

ಭೂಸ್ವಾಧೀನ, ತಾಂತ್ರಿಕ ಕಾರಣ, ಸ್ಥಳೀಯ ವಿರೋಧದಂತಹ ಹಲವು ಸಮಸ್ಯೆಗಳು ಮಗ್ಗಲುಮುಳ್ಳಾಗಿ ಪರಿಣಮಿಸಿವೆ. ಇದರಿಂದ ಯೋಜನೆಪ್ರಗತಿಯೂಕುಂಠಿತಗೊಳ್ಳುತ್ತಿದೆ.ಇದರಿಂದ ನಿಗದಿತ ಗಡುವಿನಲ್ಲಿ ಗುರಿ ತಲುಪಲು ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಗ್ಗಂಟಾದ
ನಿಲ್ದಾಣದ ಸಮಸ್ಯೆ ಇತ್ಯರ್ಥವಾಗುವವರೆಗೆ ಕೈಬಿಟ್ಟು ಮುಂದಿನ ನಿಲ್ದಾಣದಿಂದ ಮಾರ್ಗ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಹೀಗೆ ಸಣ್ಣ-ಸಣ್ಣ ಅಂತರ ಇರುವ ಮಾರ್ಗಗಳನ್ನುಸಾರ್ವಜನಿಕಸೇವೆಗೆಮುಕ್ತಗೊಳಿಸಲು ಉದ್ದೇಶಿಸಲಾಗಿದೆ.

ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌, ಐಟಿ ಹಬ್‌ ಅನ್ನು ಸಂಪರ್ಕಿಸುವ ಆರ್‌.ವಿ. ರಸ್ತೆ-ಎಲೆಕ್ಟ್ರಾನಿಕ್‌ ಸಿಟಿ-ಬೊಮ್ಮಸಂದ್ರ ಸೇರಿದಂತೆ ಇಂಥ ಹಲವು ಮಾರ್ಗಗಳನ್ನು ಬಿಎಂಆರ್‌ಸಿಎಲ್‌ ಗುರುತಿಸಲಾಗಿದೆ. ಅಲ್ಲೆಲ್ಲಾ ತುಂಡು ಮಾರ್ಗಗಳನ್ನು ನಿರ್ಮಿಸಿ ತ್ವರಿತವಾಗಿ ಸಾರ್ವಜನಿಕ ಸೇವೆಗೆ ಅಣಿಗೊಳಿಸುವ ಲೆಕ್ಕಾಚಾರ ನಡೆದಿದೆ (ಈ ಹಿಂದೆ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ಮಾರ್ಗ ಲೋಕಾರ್ಪಣೆ ಮಾಡಲಾಗಿತ್ತು) ಎಂದು ನಿಗಮದ ಉನ್ನತ ಮೂಲಗಳು ತಿಳಿಸಿವೆ.

ಉದಾಹರಣೆಗೆ ಬೈಯಪ್ಪನಹಳ್ಳಿ ಡಿಪೋದಲ್ಲಿ ಭೂಸ್ವಾಧೀನ ಸಮಸ್ಯೆ ಇದೆ. ಆದ್ದರಿಂದ ಅದರ ಮುಂದಿನ ನಿಲ್ದಾಣ ಜ್ಯೋತಿಪುರದಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸಿ, ಯೋಜನೆ ತ್ವರಿತ ಅನುಷ್ಠಾನ ಗೊಳಿಸಲಾಗುತ್ತದೆ. ನಂತರದಲ್ಲಿ ಜ್ಯೋತಿಪುರ ಬೈಯಪ್ಪನಹಳ್ಳಿ ನಡುವೆ ಮಾರ್ಗ ನಿರ್ಮಾಣವಾಗಲಿದೆ.

ಇದನ್ನೂ ಓದಿ:ಸ್ವಾತಂತ್ರ್ಯಕ್ಕೆ ಓಲಾ ಇ ಸ್ಕೂಟರ್ ಬಿಡುಗಡೆ..! ವಿಶೇಷತೆ ಏನು..? ಇಲ್ಲಿದೆ ಮಾಹಿತಿ

Advertisement

ಅದೇ ರೀತಿ, ಹೊಸ ಮಾರ್ಗದಲ್ಲೂ ಜಯದೇವ ನಂತರ ಬರುವ ಬಿಟಿಎಂ ಲೇಔಟ್‌ನಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸಿ, ನಂತರ ಅದನ್ನು ಜಯದೇವಕ್ಕೆ ಜೋಡಣೆ ಮಾಡುವ ಚಿಂತನೆ ನಡೆದಿದೆ. ಹಾಗೊಂದು ವೇಳೆ ಅಂದುಕೊಂಡಂತೆ ಎಲ್ಲವೂ ನಡೆದರೆ, ಮೆಜೆಸ್ಟಿಕ್‌ನಿಂದ ನೇರವಾಗಿ ವೈಟ್‌ಫೀಲ್ಡ್‌ಗೆ ಅಥವಾ ಎಲೆಕ್ಟ್ರಾನಿಕ್‌ ಸಿಟಿಗೆ ತಕ್ಷಣಕ್ಕೆ ಮೆಟ್ರೋ ಸೇವೆ ಲಭ್ಯವಾಗುವುದು ಅನುಮಾನ.

ಬೈಯಪ್ಪನಹಳ್ಳಿ ಮರುವಿನ್ಯಾಸ?: ಈ ಮಧ್ಯೆ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಡಿಪೋ ಮರುವಿನ್ಯಾಸಕ್ಕೆ ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದ್ದು, ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಸಾಮಾನ್ಯವಾಗಿ ಮೆಟ್ರೋ ಎತ್ತರಿಸಿದ ಮಾರ್ಗವು ನೆಲಮಟ್ಟದಿಂದ ಕನಿಷ್ಠ 14-15 ಮೀಟರ್‌ ಮೇಲಿರುತ್ತದೆ. ಅದರಂತೆ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಜ್ಯೋತಿಪುರ (ಇನ್ನೂ ನಿರ್ಮಾಣ ಹಂತದಲ್ಲಿದೆ) ನಿಲ್ದಾಣವು ಎತ್ತರದಲ್ಲಿದ್ದರೆ  ಬೈಯಪ್ಪನಹಳ್ಳಿ ನೆಲಮಟ್ಟದಲ್ಲಿದೆ. ಉದ್ದೇಶಿತ ಘಟಕದಲ್ಲಿ ರೈಲು ತಿರುವು, ನಿಲುಗಡೆಗೆ ನಾಲ್ಕಾರು ಮಾರ್ಗಗಳು ಇಲ್ಲಿ
ಬರುತ್ತದೆ. ಭವಿಷ್ಯದಲ್ಲಿ ಈ ಮಾರ್ಗಗಳನ್ನೂ ಎತ್ತರಿಸಬೇಕಾಗುತ್ತದೆ. ಆಗ, ಸಾಕಷ್ಟು ಜಾಗದ ಅವಶ್ಯಕತೆಯೂ ಇದೆ.ಈಹಿನ್ನೆಲೆಯಲ್ಲಿ ಮರುವಿನ್ಯಾಸಕ್ಕೆ ಚಿಂತನೆ ನಡೆದಿದ್ದು, ಇದನ್ನು ಡಿಡಿಸಿ (ಸಮಗ್ರ ವಿನ್ಯಾಸ ಸಮಾಲೋಚಕ)ಗೆ ವಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇನ್ನು ಜಯದೇವ ಬಳಿ ಈಗಾಗಲೇ ಮೇಲ್ಸೇತುವೆ ನೆಲಸಮಗೊಳಿಸಲು ಸಾಕಷ್ಟು ಸಮಯ ಹಿಡಿದಿದೆ. ಇದಕ್ಕೂ ಮುನ್ನ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಯೋಜನೆ ವಿಳಂಬವಾಗಿತ್ತು.ಮೆಜೆಸ್ಟಿಕ್‌ ಮಾದರಿಯಲ್ಲಿ ಇಲ್ಲಿ ಅತಿದೊಡ್ಡ ಇಂಟರ್‌ಚೇಂಜ್‌ ನಿರ್ಮಾಣವಾಗುತ್ತಿದ್ದು, ಉಳಿದವುಗಳಿಗಿಂತ ಹೆಚ್ಚು ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ ಬಿಟಿಎಂ ಲೇಔಟ್‌ನಿಂದ ಎಲೆಕ್ಟ್ರಾನಿಕ್‌ ಸಿಟಿಗೆ ತಕ್ಷಣಕ್ಕೆ ಸಂಪರ್ಕ
ಕಲ್ಪಿಸಿ, ಲೋಕಾರ್ಪಣೆಗೊಳಿಸುವ ಉದ್ದೇಶ ಇದೆ. ಈ ಮೂಲಕ ಪ್ರಮುಖ ತಾಣಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂಬ ಸಂದೇಶ ರವಾನಿಸುವ ಲೆಕ್ಕಾಚಾರವೂ ಇದರ ಹಿಂದಿದೆ ಎನ್ನಲಾಗಿದೆ.

ಆದರೆ, ಹೀಗೆ ತುಂಡು ಮಾರ್ಗಗಳಿಗೆ ಜನರಿಗೆ ಹೆಚ್ಚು ಪ್ರಯೋಜನ ಆಗುವುದಿಲ್ಲ. ನಗರದ ಒಂದು ತುದಿಯಿಂದ ಮತ್ತೂಂದು ತುದಿಗೆ ಯಾವುದೇ
ಅಡತಡೆಗಳಿಲ್ಲದೆ ಸಂಪರ್ಕ ಕಲ್ಪಿಸಿದರೆ ಉಪಯುಕ್ತ. ಇಲ್ಲವಾದರೆ, ಇಳಿದು ಮತ್ತೆ ಒಂದಿಷ್ಟು ದೂರ ಬಸ್‌ ಅಥವಾ ಆಟೋದಲ್ಲಿ ಹೋಗಿ ಮತ್ತೊಂದು ನಿಲ್ದಾಣ ಏರಿ ಮೆಟ್ರೋದಲ್ಲಿ ತೆರಳುವುದು ಜನರಿಗೆ ಕಿರಿಕಿರಿ ಆಗಲಿದೆ. ಈ ಹಿನ್ನೆಲೆಯಲ್ಲಿ ನಿಗಮದ ಪ್ರಯೋಗಕ್ಕೆ ಎಂಜಿನಿಯರ್‌ ಗಳಿಂದ ಅಪಸ್ವರ ಕೇಳಿಬರುತ್ತಿದೆ.

ಯೋಚನೆ ಇಲ್ಲ; ಎಂಡಿ ಸ್ಪಷ್ಟನೆ: ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌,
“ಭೂಸ್ವಾಧೀನ ಸೇರಿದಂತೆ ಮತ್ತಿತರ ಕಾರಣಗಳಿಂ ಕಗ್ಗಂಟಾಗಿರುವ ಸ್ಥಳಗಳನ್ನು ಗುರುತಿಸಿ, ಆದ್ಯತೆ ಮೇರೆಗೆ ಪರಿಹರಿಸಲಾಗುತ್ತಿದೆ. ತಾತ್ಕಾಲಿಕವಾಗಿ ಕೈಬಿಟ್ಟು ಮುಂದಿನ ನಿಲ್ದಾಣಗಳಿಂದ ಸಂಪರ್ಕ ಕಲ್ಪಿಸುವ ಯೋಚನೆ ನಿಗಮದ ಮುಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಎರಡೆರಡು ಇಂಟರ್‌ ಚೇಂಜ್‌!
ಭವಿಷ್ಯದಲ್ಲಿ ಕೆಲಮಾರ್ಗಗಳಲ್ಲಿ ಪ್ರಯಾಣಿಕರು ಎರಡೆರಡು ಇಂಟರ್‌ ಚೇಂಜ್‌ಗಳಲ್ಲಿ ಮಾರ್ಗಬದಲಿಸುವ ಅನಿವಾರ್ಯತೆ ಎದುರಾಗಲಿದೆ!
ಎರಡನೇ ಹಂತ ಪೂರ್ಣಗೊಂಡಾಗ ಆರ್‌.ವಿ. ರಸ್ತೆ ನಿಲ್ದಾಣಮತ್ತು ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣಸೇರಿದಂತೆ ಎರಡು ಇಂಟರ್‌ ಚೇಂಜ್‌ಗಳು ಬರಲಿವೆ. ಇದರಿಂದ ಎಲೆಕ್ಟ್ರಾನಿಕ್‌ ಸಿಟಿಕಡೆಯಿಂದ ಮೆಜೆಸ್ಟಿಕ್‌ಗೆ ತೆರಳುವವರು ಹಾಗೂಎಲೆಕ್ಟ್ರಾನಿಕ್‌ ಸಿಟಿಯಿಂದ ಮೈಸೂರು ರಸ್ತೆಗೆ ತೆರಳುವವರು ಈ ಎರಡೂ ಇಂಟರ್‌ ಚೇಂಜ್‌ಗಳಲ್ಲಿ ಮಾರ್ಗ ಬದಲಿಗೆ ತೆರಳಬೇಕಾಗುತ್ತದೆ. ಇದಕ್ಕೆ ತುಸು ಸಮಯ ಹಿಡಿಯುತ್ತದೆ

ಮೈಸೂರು ರಸ್ತೆ-ಕೆಂಗೇರಿ ಮಾರ್ಗ ಪರಿಶೀಲನೆ
ಬೆಂಗಳೂರು: ಬಹುನಿರೀಕ್ಷಿತ “ನಮ್ಮ ಮೆಟ್ರೋ’ ಎರಡನೇಹಂತದ ಮತ್ತೊಂದು ವಿಸ್ತರಿಸಿದ ಮಾರ್ಗ ಮೈಸೂರು ರಸ್ತೆ-ಕೆಂಗೇರಿ ನಡುವೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್‌)ರ ತಂಡ ಬುಧವಾರ ಪರಿಶೀಲನಾ ಪ್ರಕ್ರಿಯೆ ಆರಂಭಿಸಿದೆ.

7.53 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಸಿಎಂಆರ್‌ಎಸ್‌ ತಂಡವು ಎರಡು ದಿನಗಳು ಪರಿಶೀಲನೆ ನಡೆಸಲಿದೆ. ಈ ಅವಧಿಯಲ್ಲಿ ರೈಲು
ಹಳಿ, ಸಿಗ್ನಲಿಂಗ್‌, ನಿಲ್ದಾಣ, ತುರ್ತು ನಿರ್ಗಮನ, ಸುರಕ್ಷತಾ ಕ್ರಮಗಳು ಸೇರಿದಂತೆ ಹಲವು ರೀತಿಯ ತಪಾಸಣೆ ನಡೆಸಲಿದೆ. ನಂತರದಲ್ಲಿ ಯಾವುದಾದರೂ ಮಾರ್ಪಾಡುಗಳಿದ್ದರೆ, ಬಿಎಂಆರ್‌ಸಿಎಲ್‌ಗೆ ನೀಡುವ ವರದಿಯಲ್ಲಿ ಉಲ್ಲೇಖೀಸಲಿದೆ. ಅದೆಲ್ಲವನ್ನೂ ಸರಿಪಡಿಸಿದ ಮೇಲೆ ಪ್ರಯಾಣಿಕರ ಸೇವೆಗೆ ಅನುಮತಿ ನೀಡಲಿದೆ. ಮೊದಲದಿನಹಳಿ, ಸಿಗ್ನಲ್‌ ವುತ್ತಿತರ ಪರಿಶೀಲನೆ ನಡೆಯಿತು. ಉದ್ದೇಶಿತ ಮಾರ್ಗದಲ್ಲಿ ಆರು
ಎತ್ತರಿಸಿದ ನಿಲ್ದಾಣಗಳು ಬರಲಿವೆ. ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸಲು ಸಿಎಂಆರ್‌ಎಸ್‌ ಅನುಮತಿ ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next