Advertisement
ಮೆಟ್ರೋ ಎರಡನೇ ಹಂತದ ವಿಸ್ತರಿಸಿದ ಮಾರ್ಗಗಳು ಮತ್ತು ಒಂದು ಹೊಸ ಮಾರ್ಗಕ್ಕೆ ಒಟ್ಟಾರೆ 36 ರೈಲು (216 ಬೋಗಿಗಳು)ಗಳನ್ನು ಪೂರೈಸುವ ಗುತ್ತಿಗೆಯನ್ನು ಚೀನಾ ಮೂಲದ ಕಂಪನಿಗೆ ನೀಡಲಾಗಿದೆ. ಈ ರೈಲುಗಳು ಮುಂದಿನ ವರ್ಷ ಅಕ್ಟೋಬರ್ -ನವೆಂಬರ್‌ನಿಂದ ಪೂರೈಕೆ ಆರಂಭವಾಗಲಿದೆ. ಆದರೆ, ಇದರ ತಯಾರಿಕೆ ಘಟಕ ಆಂಧ್ರ ಪ್ರದೇಶದ ಶ್ರೀಸಿಟಿಯಲ್ಲೇ ನಿರ್ಮಾಣ ಆಗಬೇಕು. ಹಾಗೂ ತಯಾರಿಕೆಗಾಗಿ ಉಪಯೋಗಿಸುವ ಬಿಡಿಭಾಗಗಳಲ್ಲಿ ಶೇ. 75ರಷ್ಟು “ಮೇಕ್ ಇನ್ ಇಂಡಿಯಾ’ ಆಗಿರಬೇಕು ಎಂಬ ಷರತ್ತು ಕೂಡ ಇದೆ. 36 ರೈಲುಗಳಲ್ಲಿ ಮೊದಲ ಹಂತದಲ್ಲಿ ನಾಲ್ಕು ರೈಲುಗಳು ಹಾಗೂ ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಅಬ್ಬಬ್ಟಾ ಎಂದರೆ ಒಂಬತ್ತು ರೈಲುಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲು ಅವಕಾಶ ಇದೆ. ಉಳಿದ 27 ರೈಲುಗಳನ್ನು ಕಡ್ಡಾಯವಾಗಿ ಸ್ಥಳೀಯವಾಗಿಯೇ ತಯಾರಾಗಬೇಕು. ಇದಕ್ಕಾಗಿ 70 ಎಕರೆ ಭೂಮಿಯನ್ನು ಚೀನಾದ ಸಿಆರ್‌ಆರ್‌ಸಿ ನಂಜಿಂಗ್ ಪುಝೆನ್ ಕೊ-ಲಿ., ಕಂಪನಿಗೆ ನೀಡಲಾಗುತ್ತಿದೆ. ಘಟಕಕ್ಕಾಗಿ ನುರಿತ ತಜ್ಞರ ತಂಡ ಸಿದ್ಧಪಡಿಸಲಾಗುತ್ತಿದೆ. ಆ ತಂಡವು ಇಲ್ಲಿಗೆ ಬರಲು ವೀಸಾ ಸಿಗಬೇಕು. ಅಲ್ಲದೆ, ಶೇ. 75ರಷ್ಟು ಬಿಡಿ ಭಾಗಗಳ ಪೂರೈಕೆಗೆ ಇಲ್ಲಿನ ಕಂಪನಿಗಳು ಕೂಡ ಸಜ್ಜಾಗಿರಬೇಕಾಗುತ್ತದೆ. ಕೋವಿಡ್ 19 ವೈರಸ್ ಹಾವಳಿ ನಂತರ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು, ಕಾರ್ಯಾರಂಭವಾಗಲು ಸಮಯ ಹಿಡಿಯುತ್ತದೆ.
Related Articles
Advertisement
ಮೂರು- ನಾಲ್ಕು ತಿಂಗಳು ವಿಳಂಬ : ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲ ಬಂದರುಗಳು ಸ್ಥಗಿತಗೊಂಡಿದ್ದು, ಚೀನಾ ಸೇರಿದಂತೆ ಯಾವುದೇ ಹಡಗುಗಳಿಗೆ ಅವಕಾಶ ನೀಡುತ್ತಿಲ್ಲ. ಜತೆಗೆ ವಿದೇಶಗಳಿಂದ ಬರುವವರಿಗೆ ವೀಸಾ ಕೂಡ ನಿರ್ಬಂಧಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಯೋಜನೆಯಲ್ಲಿ ಕನಿಷ್ಠ ಮೂರ್‍ನಾಲ್ಕು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ. ಇದು ಎರಡನೇ ಹಂತದ ರೈಲು ಸೇವೆ ಮೇಲೆ ಪರಿಣಾಮ ಬೀರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮೂಲಗಳು ತಿಳಿಸಿವೆ.
2021ರ ಜನವರಿ ಒಳಗೆ ಘಟಕ ನಿರ್ಮಾಣ ಗುರಿ ಚೀನಾ ಮೂಲದ ಕಂಪನಿ ಮುಂದಿದೆ. ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಆ ಪ್ರಗತಿಗೆ ತುಸು ಹಿನ್ನಡೆ ಆಗಿರಬಹುದು. ಆದರೆ, ನಮ್ಮಲ್ಲಿಯೂ ಕೆಲಸ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಅಲ್ಲಿಗೆ ಸರಿಹೋಗುತ್ತದೆ. ಹಾಗೊಂದು ವೇಳೆ ಈಗಿರುವ ಸ್ಥಿತಿ ಒಂದು ವೇಳೆ ಇನ್ನಷ್ಟು ದಿನ ಮುಂದುವರಿದರೆ, ಅದು ವಿಳಂಬದ ರೂಪದಲ್ಲಿ ಅದು ಪರಿಣಮಿಸುವ ಸಾಧ್ಯತೆ ಇದೆ. – ಅಜಯ್ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್