Advertisement

11 ವರ್ಷ ಪೂರೈಸಿದ ನಮ್ಮ ಮೆಟ್ರೋ

12:36 PM Oct 20, 2022 | Team Udayavani |

ಬೆಂಗಳೂರು: ಸಾಗಿಬಂದ ಹಾದಿ ಸಾಕಷ್ಟಿದೆ. ಆದರೆ, ಸಾಗಬೇಕಾದ ಹಾದಿ ಮೂರು ಪಟ್ಟು ಇದೆ. 2024ರ ಡಿಸೆಂಬರ್‌ ಅಂತ್ಯಕ್ಕೆ “ನಮ್ಮ ಮೆಟ್ರೋ’ ಜಾಲ 90 ಕಿ.ಮೀ. ಕ್ರಮಿಸಲಿದ್ದು, ಪ್ರಯಾಣಿಕರ ಸಂಖ್ಯೆ ಎರಡಂಕಿ ಅಂದರೆ 10 ಲಕ್ಷಕ್ಕೆ ತಲುಪಿಸುವ ಗುರಿ ಇದೆ. ಇದಕ್ಕೆ ಸಾರ್ವಜನಿ ಕರಿಂದ ಹಿಡಿದು ಎಲ್ಲರ ಸಹಕಾರ ಬೇಕಾಗುತ್ತದೆ. ನಮ್ಮ ಮೆಟ್ರೋ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ “ನಮ್ಮ ಮೆಟ್ರೋ’ ಸಾರಥಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಅವರ ಮಾತುಗಳಿವು.

Advertisement

ʼಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಯೋಜನೆಯ ಪ್ರಗತಿ, ಗುರಿ, ಆದಾಯ ಮತ್ತಿತರ ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ.

ಸಂದರ್ಶನ ವಿವರ:

ನಮ್ಮ ಮೆಟ್ರೋಗೆ 11 ವರ್ಷ ತುಂಬಿದೆ. ಸರಾಸರಿ ವರ್ಷಕ್ಕೆ 5 ಕಿ.ಮೀ. ಪೂರ್ಣಗೊಳಿಸಿ ದಂತಾಯಿತು. ಈ ಪಯಣ ತೃಪ್ತಿ ತಂದಿದೆಯೇ?

ಖಂಡಿತ ತೃಪ್ತಿ ತಂದಿದೆ. ಸೊನ್ನೆಯಿಂದ ಶುರುವಾದ ನಮ್ಮ ಪಯಣ ಇಂದು 56 ಕಿ.ಮೀ.ಗೆ ತಲುಪಿದೆ. ನಿತ್ಯ 5.3 ಲಕ್ಷ ಜನ ಸಂಚರಿಸುತ್ತಿದ್ದಾರೆ. ಆರಂಭದಲ್ಲಿ ಯೋಜನೆ ನೀಲನಕ್ಷೆಯಿಂದ ಹಿಡಿದು ಪ್ರತಿಯೊಂದಕ್ಕೂ ನಾವು ಅವಲಂಬನೆ ಆಗಿದ್ದೆವು. ಈಗ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು, ಎಂಜಿನಿಯರ್‌ಗಳು, ಪ್ರಯಾಣಿಕರ ನೆರವಿನಿಂದ ಇಷ್ಟು ದೂರ ಸಾಗಿದ್ದೇವೆ. ಈಗ ಸ್ವಾವಲಂಬನೆ ಸಾಧಿಸಿದ್ದೇವೆ. ಸರಾಸರಿ ತೆಗೆದುಕೊಂಡು ಹೇಳುವುದು ತಪ್ಪಾಗುತ್ತದೆ.

Advertisement

ಮುಂದಿನ ಗುರಿ ಮತ್ತು ಆದ್ಯತೆ ಏನು?

2023ರ ಡಿಸೆಂಬರ್‌ ಅಂತ್ಯದ ವೇಳೆಗೆ ಇನ್ನೂ 35 ಕಿ.ಮೀ. ಇದಕ್ಕೆ ಸೇರ್ಪಡೆಗೊಳಿಸಿ, 90 ಕಿ.ಮೀ.ಗೆ ವಿಸ್ತರಿಸಲಾಗುವುದು. ಇದರಲ್ಲಿ ನಾಲ್ಕೂ ವಿಸ್ತರಿತ ಮಾರ್ಗಗಳ ಜತೆಗೆ ಆರ್‌.ವಿ. ರಸ್ತೆ- ಎಲೆಕ್ಟ್ರಾನಿಕ್‌ ಸಿಟಿ- ಬೊಮ್ಮಸಂದ್ರ ಮಾರ್ಗವೂ ಸೇರ್ಪಡೆ ಆಗಲಿದೆ. ಆಗ ಮೆಟ್ರೋ ಪ್ರಯಾಣಿಕರ ಸಂಖ್ಯೆ 9ರಿಂದ 10 ಲಕ್ಷ ತಲುಪಲಿದೆ. ಸಹಜವಾಗಿ ಆದಾಯ ಕೂಡ ದುಪ್ಪಟ್ಟಾಗಲಿದೆ. ಒಟ್ಟಾರೆ 2024ರ ಅಂತ್ಯದ ವೇಳೆಗೆ ಬಿಎಂಆರ್‌ಸಿಎಲ್‌ ಶ್ರಮದ ಫ‌ಲ ಸಿಗಲಿದೆ.

ಮೆಟ್ರೋ ಮಾರ್ಗದಲ್ಲಿ ಕಾರ್ಯಾಚರಣೆಯೇತರ ಆದಾಯ ಮೂಲದ ಬಗ್ಗೆ ಗಮನಹರಿಸಿಲ್ಲವೇ ? ಈ ನಿಟ್ಟಿನಲ್ಲಿ ತುಸು ಹಿನ್ನಡೆ ಆಗಿದ್ದು ನಿಜ. ಆದರೆ ಮರೆತಿಲ್ಲ. ಬ್ಯುಸಿನೆಸ್‌ ಮಾದರಿಗಳನ್ನು ಬದಲಿಸಿಕೊ ಳ್ಳಲಾಗುತ್ತಿದೆ. ಪಿಪಿಪಿ ಅಡಿ ಈಗಾಗಲೇ ಪ್ರಾಪರ್ಟಿ ಡೆವೆಲಪ್‌ಮೆಂಟ್‌ಗೆ ಯೋಜನೆ ರೂಪಿಸಲಾಗುತ್ತಿದೆ. ಕೆ.ಆರ್‌. ಪುರಂನಲ್ಲಿ ಒಂದು ಎಕರೆಯಲ್ಲಿ ಬಹುಮಹಡಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಜತೆಗೆ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಇನ್ನು ದೇಶದ 18 ಮಹಾನಗರಗಳಲ್ಲಿ ಪ್ರಸ್ತುತ ಮೆಟ್ರೋ ಯೋಜನೆ ಪ್ರಗತಿಯಲ್ಲಿದೆ. ಅಲ್ಲೆಲ್ಲಾ ದೇಶ-ವಿದೇಶ ಕಂಪನಿಗಳು ಹೂಡಿಕೆಯ ಅವಕಾಶಗಳನ್ನು ನೋಡುತ್ತಿವೆ. ಅದರಲ್ಲಿ ನಮ್ಮ ಮೆಟ್ರೋ ಕೂಡ ಸೇರಿದೆ.

9ರಿಂದ 10 ಲಕ್ಷ ಪ್ರಯಾಣಿಕರ ಗುರಿ ತಲುಪಲು ಫ್ರೀಕ್ವೆನ್ಸಿ ಹೆಚ್ಚಳ ಅಥವಾ ರಾತ್ರಿ ಸಮಯ ವಿಸ್ತರಣೆ ಯೋಚನೆ ಇದೆಯೇ? ಸದ್ಯಕ್ಕೆ 5 ನಿಮಿಷಗಳಿಗೊಂದು ಮೆಟ್ರೋ ಸೇವೆ ಕಲ್ಪಿಸಲಾಗುತ್ತಿದೆ. ಇನ್ನೂ ವರ್ಕ್‌ ಫ್ರಾಂ ಹೋಂ ಪೂರ್ತಿಯಾಗಿ ತೆರವಾಗಿಲ್ಲ. ಈ ಹಂತದಲ್ಲಿ ವಿಸ್ತರಣೆ ಅಥವಾ ಫ್ರೀಕ್ವೆನ್ಸಿ ಹೆಚ್ಚಳ ಕಷ್ಟ. ಇದರಿಂದ ಸಾಕಷ್ಟು ಹೊರೆ ಆಗಲಿದೆ. ಬರುವ ವರ್ಷದಲ್ಲಿ ಐಟಿ ಕಾರಿಡಾರ್‌ಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಆಗ ಪ್ರಯಾಣಿಕರ ದಟ್ಟಣೆ ನೋಡಿಕೊಂಡು ತೀರ್ಮಾನಿಸಲಾಗುವುದು. ಈಗಂತೂ ವಿಸ್ತರಣೆ ಆಲೋಚನೆ ಇಲ್ಲ.

ಮೆಟ್ರೋ ಆದಾಯ ಮತ್ತು ಸಾಲದ ಬಗ್ಗೆ ಹೇಳಿ….

ನಿತ್ಯ 5.3ರಿಂದ 5.4 ಲಕ್ಷ ಜನ ಸಂಚರಿಸುತ್ತಿದ್ದು, 1.2 ಕೋಟಿ ರೂ. ಹರಿದುಬರುತ್ತಿದೆ. ವಿದೇಶಿ ಬ್ಯಾಂಕ್‌ಗಳು ಸೇರಿದಂತೆ ಒಟ್ಟಾರೆ ಅಂದಾಜು 11 ಸಾವಿರ ಕೋಟಿ ರೂ. ದೀರ್ಘಾವಧಿ ಸಾಲ ಇದೆ. ಇದನ್ನು ವಿವಿಧ ಹಂತಗಳಲ್ಲಿ ಮರುಪಾವತಿಸಲಾಗುತ್ತದೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next