ಬೆಂಗಳೂರು: “ನಮ್ಮ ಮೆಟ್ರೋ’ ಸಿಬ್ಬಂದಿಗೂ ಕೊರೊನಾ ಬಿಸಿ ತುಸು ಜೋರಾಗಿಯೇ ತಟ್ಟಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕೇಂದ್ರ ಕಚೇರಿಯ ಸುಮಾರು 40 ಸಿಬ್ಬಂದಿಯಲ್ಲಿ ಬುಧವಾರ ಸೋಂಕು ಪತ್ತೆಯಾಗಿದೆ.
ಗುರುವಾರ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ!
ಕಳೆದೆರಡು ದಿನಗಳಲ್ಲಿ ಅಂದಾಜು 240ಕ್ಕೂ ಅಧಿಕ ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 40 ಜನರಲ್ಲಿ ಕೊರೊನಾ ಸೋಂಕು ಇರುವುದು ಕಂಡುಬಂದಿದೆ. ಇದರಲ್ಲಿ ಅಟೆಂಡರ್‌ನಿಂದ ಹಿಡಿದು ವಿವಿಧ ಹಂತದ ಎಂಜಿನಿಯರ್‌ಗಳು, ಅಧಿಕಾರಿಗಳು ಒಳಗೊಂಡಂತೆ ಎಲ್ಲ ಪ್ರಕಾರದ ನೌಕರರೂ ಇದ್ದಾರೆ. ಅವರೆಲ್ಲರೂ ಈಗ ಮನೆಗಳಲ್ಲೇ ಐಸೋಲೇಷನ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮತ್ತೆ 140ಕ್ಕೂ ಅಧಿಕ ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿದೆ. ಇದರ ವರದಿಯನ್ನು ಗುರುವಾರ ಬರುವ ನಿರೀಕ್ಷೆ ಇದೆ. ಅದರಲ್ಲಿಯೂ ಒಂದು ವೇಳೆ ಸೋಂಕಿತರು ಕಂಡುಬಂದರೆ, ಅವರನ್ನೂ ಐಸೋಲೇಷನ್‌ಗೆ ಒಳಪಡಿಸಲಾಗುವುದು. ಕೇಂದ್ರ ಕಚೇರಿಯಲ್ಲಿ ಒಟ್ಟಾರೆ 400ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮೂರು ದಿನಗಳಲ್ಲಿ ಬಹುತೇಕ ಎಲ್ಲರೂ ಪರೀಕ್ಷೆಗೊಳಪಟ್ಟಂತಾಗಿದೆ ಎಂದೂ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಅಕಾಲಿಕ ಮಳೆಗೆ ತೊಗರಿ ಇಳುವರಿ ಕುಂಠಿತ : ಕನಿಷ್ಠ ಬೆಂಬಲ ಬೆಲೆ ನಿರೀಕ್ಷೆಯಲ್ಲಿ ರೈತ
ಕಚೇರಿಯಲ್ಲಿ ಸಿಬ್ಬಂದಿ ಒಂದೆಡೆ ಕಾರ್ಯನಿರ್ವಹಿಸುವುದರಿಂದ ಬಹುತೇಕ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರೇ ಆಗುತ್ತಾರೆ. ಹಾಗಂತ, ಎಲ್ಲರಿಗೂ ಮನೆಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡುವುದು ಕಷ್ಟ. ಯಾಕೆಂದರೆ, ಬಿಎಂಟಿಸಿಯಂತೆಯೇ “ನಮ್ಮ ಮೆಟ್ರೋ’ ಕೂಡ ಅಗತ್ಯ ಸೇವೆಗಳಲ್ಲಿ ಬರುತ್ತದೆ. ಯೋಜನೆ, ವಿನ್ಯಾಸ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಎಂಜಿನಿಯರ್‌ಗಳ ಉಪಸ್ಥಿತಿ ಅಗತ್ಯವಾಗಿದೆ. ಆದ್ದರಿಂದ 60 ವರ್ಷ ಮೇಲ್ಪಟ್ಟ ಮತ್ತು 60 ವರ್ಷ ಮೇಲ್ಪಟ್ಟು ಮಧುಮೇಹ, ಹೃದ್ರೋಗದಂತಹ ಸಹ-ಅಸ್ವಸ್ಥತೆ ಇರುವ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.