Advertisement

ವಾರಾಂತ್ಯದ ಕರ್ಫ್ಯೂ ತೆರವು ಹಿನ್ನೆಲೆ: ಮತ್ತೆ ಯಥಾಸ್ಥಿತಿಗೆ “ನಮ್ಮ ಮೆಟ್ರೋ’- ಬಸ್‌ ಸೇವೆ

08:04 PM Jan 21, 2022 | Team Udayavani |

ಬೆಂಗಳೂರು: ವಾರಾಂತ್ಯದ ಕರ್ಫ್ಯೂ ತೆರವಾದ ಬೆನ್ನಲ್ಲೇ ನಗರದಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಮತ್ತೆ ಯಥಾಸ್ಥಿತಿಗೆ ಮರಳಲಿದ್ದು, ಇನ್ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಕೂಡ ಎಂದಿನಂತೆ ಕಾರ್ಯಾಚರಣೆ ಮಾಡಲಿವೆ.

Advertisement

ಶನಿವಾರ (ಜ. 22)ದಿಂದ “ನಮ್ಮ ಮೆಟ್ರೋ’ ವಾರಾಂತ್ಯದ ದಿನಗಳಲ್ಲೂ ರಾತ್ರಿ 11.30ರವರೆಗೂ ಕಾರ್ಯಾಚರಣೆ ಮಾಡಲಿದೆ.

ರಾತ್ರಿ 11ಕ್ಕೆ ನಾಲ್ಕೂ ಟರ್ಮಿನಲ್‌ಗ‌ಳಿಂದ ಏಕಕಾಲದಲ್ಲಿ ರೈಲುಗಳು ಹೊರಡಲಿದ್ದು, ಮೆಜೆಸ್ಟಿಕ್‌ನಿಂದ 11.30ಕ್ಕೆ ನಿರ್ಗಮಿಸಲಿವೆ. ಭಾನುವಾರ ಬೆಳಿಗ್ಗೆ 7ರಿಂದ ಮೆಟ್ರೋ ಸೇವೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್‌ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಶಂಕರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ವಾರಾಂತ್ಯದ ಕರ್ಫ್ಯೂನ ಹಿಂದಿದ್ದ ಸ್ಥಿತಿ ಮತ್ತೆ ಮುಂದುವರಿಯಲಿದೆ. ಆದರೆ, ಎರಡು ರೈಲುಗಳ ನಡುವಿನ ಅಂತರ ಅಂದರೆ ಫ್ರಿಕ್ವೆನ್ಸಿ ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ಮಾತ್ರ ಪೀಕ್‌ ಅವರ್‌ನಲ್ಲಿ ಪ್ರತಿ ಐದು ನಿಮಿಷಕ್ಕೊಂದು ರೈಲು ಸೇವೆ ಕಲ್ಪಿಸಲು ಉದ್ದೇಶಿಸಲಾಗಿದ್ದು, ಉಳಿದ ಅವಧಿಯಲ್ಲಿ 15-20 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ಮಾಡಲಿವೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಕೋವಿಡ್ ಮಹತ್ವದ ಸಭೆ: ವೀಕೆಂಡ್‌ ಕರ್ಫ್ಯೂ ತೆರವು, ನೈಟ್ ಕರ್ಫ್ಯೂ ಮುಂದುವರಿಕೆ

Advertisement

ಈ ಮೊದಲು ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಗೇ ಕೊನೆಯ ರೈಲು ಸೇವೆ ಇತ್ತು. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಮಾತ್ರ ಸಾರ್ವಜನಿಕರಿಗೆ ಸೇವೆಗಳು ಲಭ್ಯ ಇದ್ದವು. ಫ್ರಿಕ್ವೆನ್ಸಿ ಕೂಡ ಅರ್ಧಗಂಟೆಗೊಂದು ರೈಲು ಕಾರ್ಯಾಚರಣೆ ಮಾಡುತ್ತಿತ್ತು.

ಇನ್ನು ಬಿಎಂಟಿಸಿ ಬಸ್‌ಗಳು ಕೂಡ ವಾರಾಂತ್ಯದಲ್ಲಿ ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ. ಎಲ್ಲ 5,600 ಬಸ್‌ಗಳು ಅಂದು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ರಸ್ತೆಗಿಳಿಯಲಿವೆ. ಅದೇ ರೀತಿ, ಮೆಟ್ರೋಗೆ ಪೂರಕವಾಗಿ ಸಂಪರ್ಕ ಸೇವೆಗಳು ಕೂಡ ಲಭ್ಯ ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ತುರ್ತು ಸೇವೆಗಳು ಮಾತ್ರ ಅಂದರೆ ಶೇ. 10ರಷ್ಟು ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದವು.

 

Advertisement

Udayavani is now on Telegram. Click here to join our channel and stay updated with the latest news.

Next