ವಿಂಡ್‌ಹೋಕ್ (ನಮೀಬಿಯಾ): ಆತಿಥೇಯ ನಮೀಬಿಯಾ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಕರ್ನಾಟಕ 360 ರನ್ ಪೇರಿಸಿಯೂ ಸೋಲಿನ ಆಘಾತಕ್ಕೆ ಸಿಲುಕಿದೆ. ಪ್ರಚಂಡ ಚೇಸಿಂಗ್ ನಡೆಸಿದ ನಮೀಬಿಯಾ 5 ವಿಕೆಟ್ ಜಯಭೇರಿ ಮೊಳಗಿಸಿ 5 ಪಂದ್ಯಗಳ ಸರಣಿಯನ್ನು 1-1 ಸಮಬಲಕ್ಕೆ ತಂದು ನಿಲ್ಲಿಸಿತು.
ಆರಂಭಕಾರ ಎಲ್.ಆರ್. ಚೇತನ್ ಮತ್ತು ನಿಕಿನ್ ಜೋಸ್ ಅವರ ಆಕರ್ಷಕ ಶತಕ ಪರಾಕ್ರಮದಿಂದ ಕರ್ನಾಟಕ ಕೇವಲ 4 ವಿಕೆಟ್ ನಷ್ಟಕ್ಕೆ 360 ರನ್ ರಾಶಿ ಹಾಕಿತು. ದಿಟ್ಟ ಜವಾಬು ನೀಡಿದ ನಮೀಬಿಯಾ ಕೇವಲ ಒಂದು ಎಸೆತ ಬಾಕಿ ಉಳಿದಿರುವಾಗ 5 ವಿಕೆಟ್ ಕಳೆದುಕೊಂಡು 362 ರನ್ ಬಾರಿಸಿ ಅಮೋಘ ಗೆಲುವು ಸಾಧಿಸಿತು. ಮೊದಲ ಪಂದ್ಯವನ್ನು ಕರ್ನಾಟಕ 9 ವಿಕೆಟ್‌ಗಳಿಂದ ಗೆದ್ದಿತ್ತು. 3ನೇ ಮುಖಾಮುಖೀ ಬುಧವಾರ ನಡೆಯಲಿದೆ.
ನಾಯಕ ರವಿಕುಮಾರ್ ಸಮರ್ಥ್ ಅವರನ್ನು ಕರ್ನಾಟಕ ಬೇಗನೇ ಕಳೆದುಕೊಂಡಿತು. ಅವರ ಗಳಿಕೆ ಬರೀ 5 ರನ್. ಬಳಿಕ ಎಲ್.ಆರ್. ಚೇತನ್ ಮತ್ತು ನಿಕಿನ್ ಜೋಸ್ ಸೇರಿಕೊಂಡು ದ್ವಿತೀಯ ವಿಕೆಟಿಗೆ 258 ರನ್ ಜತೆಯಾಟ ನಿಭಾಯಿಸಿದರು. ಇಬ್ಬರಿಂದಲೂ ಶತಕ ದಾಖಲಾಯಿತು. ಚೇತನ್ 147 ಎಸೆತಗಳಿಂದ 169 ರನ್ ಸಿಡಿಸಿದರೆ (13 ಬೌಂಡರಿ, 8 ಸಿಕ್ಸರ್), ನಿಕಿನ್ ಜೋಸ್ 109 ಎಸೆತ ನಿಭಾಯಿಸಿ 103 ರನ್ ಹೊಡೆದರು (5 ಬೌಂಡರಿ, 2 ಸಿಕ್ಸರ್).
ಇವರಿಬ್ಬರಿಗಿಂತ ಕೆ. ಸಿದ್ಧಾರ್ಥ್ ಆಟ ಅತ್ಯಂತ ಬಿರುಸಿನಿಂದ ಕೂಡಿತ್ತು. ಕೇವಲ 27 ಎಸೆತಗಳಿಂದ ಅಜೇಯ 59 ರನ್ ಬಾರಿಸಿದರು. ಈ ವೇಳೆ ಸಿಡಿದದ್ದು 6 ಸಿಕ್ಸರ್ ಹಾಗೂ ಒಂದು ಬೌಂಡರಿ.
ಆಘಾತವಿಕ್ಕಿದ ನಮೀಬಿಯಾ
ಬೃಹತ್ ಮೊತ್ತ ಪೇರಿಸಿ ಗೆಲುವಿನ ಕನವರಿಕೆಯಲ್ಲಿದ್ದ ಕರ್ನಾಟಕಕ್ಕೆ ನಮೀಬಿಯಾ ಮರ್ಮಾಘಾತವಿಕ್ಕಿತು. ಸ್ಟೀಫನ್ ಬಾರ್ಡ್ (57) ಮತ್ತು ನಿಕೋಲಾಸ್ ಡೇವಿನ್ (70) ಮೊದಲ ವಿಕೆಟಿಗೆ 119 ರನ್ ಪೇರಿಸಿ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸಿದರು. ವನ್‌ಡೌನ್ ಬ್ಯಾಟರ್ ಮೈಕಲ್ ವಾನ್ ಲಿಂಜೆನ್ ಅವರಿಂದ ಶತಕ ದಾಖಲಾಯಿತು. 85 ಎಸೆತ ಎದುರಿಸಿದ ಅವರು 7 ಫೋರ್, 5 ಸಿಕ್ಸರ್ ನೆರವಿನಿಂದ 104 ರನ್ ಹೊಡೆದರು. ನಾಯಕ ಗೆರಾರ್ಡ್ ಎರಾಸ್ಮಸ್ 91 ರನ್ ಕೊಡುಗೆ ಸಲ್ಲಿಸಿದರು (67 ಎಸೆತ, 8 ಬೌಂಡರಿ, 2 ಸಿಕ್ಸರ್).
ಈ ಪಂದ್ಯದಲ್ಲಿ ಒಟ್ಟು 53 ಬೌಂಡರಿ ಹಾಗೂ 26 ಸಿಕ್ಸರ್ ಸಿಡಿಯಲ್ಪಟ್ಟಿತು.
Related Articles
ಸಂಕ್ಷಿಪ್ತ ಸ್ಕೋರ್
ಕರ್ನಾಟಕ-4 ವಿಕೆಟಿಗೆ 360 (ಚೇತನ್ 169, ನಿಕಿನ್ ಜೋಸ್ 103, ಸಿದ್ಧಾರ್ಥ್ 59). ನಮೀಬಿಯಾ-49.5 ಓವರ್‌ಗಳಲ್ಲಿ 5 ವಿಕೆಟಿಗೆ 362 (ವಾನ್ ಲಿಂಜೆನ್ 104, ಎರಾಸ್ಮಸ್ 91, ಡೇವಿನ್ 71, ಬಾರ್ಡ್ 57, ಸಮರ್ಥ್ 32ಕ್ಕೆ 1, ಶುಭಾಂಗ್ ಹೆಗ್ಡೆ 61ಕ್ಕೆ 1).