ಹುಬ್ಬಳ್ಳಿ: ಮಂಗಳೂರಿನ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಕಲಿ ವಿಳಾಸ ಪತ್ತೆಯಾಗಿದ್ದು, ಅದು ಹುಬ್ಬಳ್ಳಿಯ ಪ್ರೇಮ್ ರಾಜ್ ಅವರಿಗೆ ಸೇರಿದೆ.
ಆಟೋರಿಕ್ಷಾದಲ್ಲಿ ಪತ್ತೆಯಾದ ಆಧಾರ ಕಾರ್ಡ್ ಹುಬ್ಬಳ್ಳಿಯ ಕೇಶ್ವಾಪುರ ಮಧುರಾ ಕಾಲೋನಿ ನಿವಾಸಿ ಪ್ರೇಮರಾಜ್ ಹೆಸರಿನಲ್ಲಿದೆ. ಆದರೆ ಈ ಆಧಾರ್ ಕಾರ್ಡ್ ಕಳೆದು ಹೋಗಿತ್ತು. ಇವರದೇ ವಿಳಾಸವನ್ನು ಬ್ಲಾಸ್ಟ್ ನಲ್ಲಿ ಬಳಕೆ ಮಾಡಲಾಗಿದೆ. ಪ್ರೇಮ್ ರಾಜ್‌ಗೂ ಈ ಪ್ರಕರಣಕ್ಕೆ ಸಂಬಂಧ ಇಲ್ಲ ಎನ್ನುತ್ತಿದ್ದಾರೆ ಕುಟುಂಬದವರು.
“ನನ್ನ ಮಗ ಅಂಥವನಲ್ಲ. ಈ ಪ್ರಕರಣಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಈಗ ದಾಖಲಾತಿ ಪರಿಶೀಲನೆ ನಡೆಯುತ್ತಿದೆ. ಪೊಲೀಸರು ಕೇಳಿದ ಎಲ್ಲ ಮಾಹಿತಿ ಹಂಚಿಕೊಂಡಿದ್ದೇವೆ. ಪ್ರೇಮರಾಜ್ ಆಧಾರ ಕಾರ್ಡ್ ಕಳೆದುಕೊಂಡಿದ್ದ. ಆಗ ದೂರು ಕೊಡು ಎಂದು ಸಲಹೆ ಕೊಟ್ಟಿದ್ದೆ. ತುಮಕೂರಿನಲ್ಲಿ ನನ್ನ ಮಗನ ವಿಚಾರಣೆ ಮಾಡಿದ್ದಾರೆ. ಈ ಬಗ್ಗೆ ಬೆಳಗ್ಗೆ ನನ್ನ ಮಗನ ಜೊತೆ ಮಾತನಾಡಿದ್ದೇನೆ” ಎಂದು ಅವರ ತಂದೆ ಮಾರುತಿ ಹುಟಗಿ ಹೇಳಿದರು.
ಇದನ್ನೂ ಓದಿ:ಎರಡು ಬಾರಿ ಕ್ಯಾನ್ಸರ್.., ಬ್ರೈನ್ ಸ್ಟ್ರೋಕ್ 24 ರ ಹರೆಯದಲ್ಲೇ ಉಸಿರು ಚೆಲ್ಲಿದ ಖ್ಯಾತ ನಟಿ
ಪ್ರೇಮರಾಜ್ ರೈಲ್ವೆ ಇಲಾಖೆಯಲ್ಲಿ ಡಿ ಗ್ರೂಪ್ ನೌಕರನಾಗಿದ್ದು, ತುಮಕೂರಿನಲ್ಲಿ ಟ್ರ್ಯಾಕ್ ಮೆಂಟೇನರ್ ಆಗಿ ಕೆಲಸ ಮಾಡುತ್ತುದ್ದಾರೆ. ಇತ್ತೀಚೆಗೆ ಶಿಕ್ಷಕರ ಹುದ್ದೆ ಪರೀಕ್ಷೆ ಬರೆದು ಅದರಲ್ಲಿ ತೇರ್ಗಡೆಯಾಗಿದ್ದು, ಅದಕ್ಕಾಗಿ ದಾಖಲಾತಿಗಳ ಪರಿಶೀಲನೆ ನಡೆದಿದೆ. ಅದರಲ್ಲಿ ಆತ ಮಗ್ನನಾಗಿದ್ದಾನೆ. ಆರು ತಿಂಗಳ ಹಿಂದಷ್ಟೇ ಹಾವೇರಿಗೆ ಪರೀಕ್ಷೆ ಬರೆಯಲು ಹೋಗಿದ್ದಾಗ ಆಧಾರ ಕಾರ್ಡ್ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ.
ಇವರ ತಂದೆ ಮಾರುತಿ ಅವರ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಗನ ಬಗ್ಗೆ ಇಂತಹ ಸುದ್ದಿ ಕೇಳಿ ಅವರ ತಾಯಿ ರೇಣುಕಾ ಅವರು ಕೆಲಹೊತ್ತು ದಿಗಿಲುಗೊಂಡಿದ್ದರು. ನಂತರ ಅವರಿಗೆ ಕುಟುಂಬಸ್ಥರು ಮನವರಿಕೆ ಮಾಡಿದ ಮೇಲೆ ಸಾವರಿಸಿಕೊಂಡರು.
ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಸ್ಥಳೀಯ ವಿಳಾಸ ಇರುವ ವ್ಯಕ್ಯಿಯ ಬಗ್ಗೆ ಮಾಹಿತಿ ಕೊಟ್ಟಾಗ ಸಂಬಂಧಪಟ್ಟ ಠಾಣೆಯ ಅಧಿಕಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಭೂ ರಾಮ ತಿಳಿಸಿದರು.