Advertisement

ಇನ್ನಷ್ಟು ಸ್ಥಳಗಳಿಗೆ ಹೆಸರು: ಚೀನಾ

03:45 AM Apr 22, 2017 | Team Udayavani |

ಬೀಜಿಂಗ್‌: ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ಮರುನಾಮಕರಣ ಮಾಡಿ ಅಂತರ್ಜಾಲಗಳಲ್ಲಿ ಹರಿಬಿಟ್ಟ ಚೀನಾ, ಭಾರತದಿಂದ ತೀವ್ರ ಆಕ್ಷೇಪ ವ್ಯಕ್ತವಾದರೂ ಮತ್ತೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. 

Advertisement

ಅರುಣಾಚಲ ಪ್ರದೇಶ ನಮ್ಮದು. ಮರುನಾಮಕರಣ ಮಾಡುವ ಕಾನೂನಾತ್ಮಕ ಹಕ್ಕು ನಾವು ಹೊಂದಿದ್ದೇವೆ ಎಂದು ಹೇಳಿಕೊಂಡಿದೆ. ಈ ಮೂಲಕ ದಕ್ಷಿಣ ಟಿಬೆಟ್‌ ನಮ್ಮದು ಎನ್ನುವುದನ್ನು ಚೀನಾ ಮತ್ತೂಮ್ಮೆ ಪ್ರತಿಪಾದಿಸಿದೆ. ಜತೆಗೆ ಶೀಘ್ರದಲ್ಲಿಯೇ ಅರುಣಾಚಲ ಪ್ರದೇಶದ ಇನ್ನೂ ಹೆಚ್ಚಿನ ಸ್ಥಳಗಳಿಗೆ ತಮ್ಮದೇ ಹೆಸರುಗಳನ್ನು ಇರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ವಕ್ತಾರ ಲು ಕಾಂಗ್‌ ಹೇಳಿದ್ದೇನು?: ಅರುಣಾಚಲದ ಕೆಲ ಸ್ಥಳಗಳಿಗೆ ಹೆಸರಿಟ್ಟ ಬಗ್ಗೆ ಆಕ್ಷೇಪಿಸಿರುವ ಕೇಂದ್ರ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್‌ ಭಾರತ-ಚೀನಾ ಗಡಿಯಲ್ಲಿನ ಈಶಾನ್ಯ ಭಾಗ ಚೀನಾಕ್ಕೆ ಸೇರಿದ್ದು. ಇದು ನಿಶ್ಚಿತ ಹಾಗೂ ಅಪ್ಪಟ ಸತ್ಯ. ಅಲ್ಲದೆ ಇದು ಚೀನಾದ ಕಾನೂನುಬದ್ಧ ಹಕ್ಕು. ಜನಾಂಗಕ್ಕೆ ಸಂಬಂಧಿಸಿದ ಹೆಸರನ್ನು ಆಧುನಿಕವಾಗಿ ಹೇಗೆ ಹೇಳಲಾಗುತ್ತಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮರುನಾಮಕರಣ ಮಾಡಿದ್ದೇವೆ. ಇದನ್ನು ಬದಲಾಯಿಸಲು ಸಾಧ್ಯವೇ ಇಲ್ಲ’ ಎಂದಿದ್ದಾರೆ. 

ಭಾರತ-ಚೀನಾ ಗಡಿ ವಿವಾದ ಬಗೆ ಹರಿಸಿಕೊಳ್ಳಲು 19 ಸುತ್ತಿನ ಮಾತುಕತೆ ನಡೆದಿದ್ದು, ಮತ್ತೆ ಮಾತುಕತೆಗೆ ಮುಂದಾಗಬೇಕಾದ ನಿವಾರ್ಯತೆ ಚೀನಾಕ್ಕಿಲ್ಲ ಎಂದಿದ್ದಾರೆ.

ಗ್ಲೋಬಲ್‌ ಟೈಮ್ಸ್‌ ಎಚ್ಚರಿಕೆ: ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಲೇಖನವೊಂದನ್ನು ಪ್ರಕಟಿಸಿದ್ದು, ಈ ಮೂಲಕ ಅರುಣಾಚಲ ಪ್ರದೇಶ ಭಾರತಕ್ಕೆ ಎಚ್ಚರಿಕೆ ನೀಡಿದೆ. ಭಾರತ ದಲೈ ಲಾಮಾ ಜತೆಗಿನ ಸಂಬಂಧ, ಒಡನಾಟವನ್ನೇ ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು “ಸಣ್ಣಾಟ’ ಅರ್ಥಾತ್‌ ಸಣ್ಣ ತನ ಪ್ರದರ್ಶಿಸಿದರೆ ಮುಂದೊಂದು ದಿನ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದೆ.

Advertisement

ಭಾರತ ಸಂಪರ್ಕ ಸೇತುವಾಗಲಿ: ಲಿಯೂ 
ಇಷ್ಟೆಲ್ಲಾ ಕ್ಯಾತೆ, ತರ್ಲೆಯ ನಡುವೆಯೂ ಚೀನಾ ಶುಕ್ರವಾರ ಭಾರತದೊಂದಿಗಿನ ಸೌಹಾರ್ದತೆಯ ಬಗ್ಗೆ ಸೊಲ್ಲೆತ್ತಿದೆ. ಯುರೋಪ್‌ ಜತೆಗಿನ ಏಷ್ಯಾ ರಾಷ್ಟ್ರಗಳ ಸಂಪರ್ಕ ಸಾಧನೆಗೆ ಭಾರತ ಮಹತ್ವದ ಸೇತುವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಹೇಳಿರುವ ಚೀನಾ ರಾಯಭಾರಿ ಕಚೇರಿ ಸಚಿವ ಲಿಯೂ ಜಿನ್‌ಸಾಂಗ್‌, “ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಒಂದು ತಡೆಯಾಗಿ ಪರಿಣಮಿಸಿದೆ. ಇದು ಪರಿಹಾರಗೊಳ್ಳಬೇಕಿದೆ ಎಂದಿದ್ದಾರೆ. ಅಲ್ಲದೆ, ಭಾರತ ಪ್ರಮುಖ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಇಂದು, ಮುಂದು, ಎಂದೆಂದೂ ಈ ಬಾಂಧವ್ಯ ಕಾಯ್ದುಕೊಂಡು ಹೋಗಬೇಕಿದೆ. ಯಾವುದೇ ಅಂಜಿಕೆ ಇಲ್ಲದೇ ಒಕ್ಕೂಟ ವ್ಯವಸ್ಥೆಯ ಚೀನಾದ ಆಹ್ವಾನಕ್ಕೆ ಭಾರತ ಕೈಜೋಡಿಸಬೇಕಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ನಿರ್ಮಾಣ ಹಿನ್ನೆಲೆಯಲ್ಲಿ ಭಾರತ ಇದಕ್ಕೆ ಹಿಂದೇಟು ಹಾಕಬಾರದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next