ಚಿಕ್ಕನಾಯಕನಹಳ್ಳಿ: “ನಾನು ಎಂಬ ಅಹಂಕಾರ ವಿಲ್ಲದಿದ್ದರೇ, ಮನುಷ್ಯ ಏನೂ ಬೇಕಾದರು ಸಾಧಿಸಬಹುದು’, “ಕುಲ ಕುಲವೆಂದು ಹೊಡೆ ದಾಡದಿರಿ’ ಎಂದು ಸಾರಿದ್ದ ಕನಕರ ಸಂದೇಶಕ್ಕೆ ಬೆಲೆಯೇ ಇಲ್ಲದಂತಾಗಿದ್ದು ನಾಮಫಲಕ ವಿಚಾರಕ್ಕೆ ಕನಕ ಜಯಂತಿ ನಿಂತಿಹೋಗಿರುವ ಘಟನೆ ನಡೆದಿದೆ.
ತಾಲೂಕಿನಲ್ಲಿ ಕೆಲ ಕಿಡಿಗೇಡಿಗಳ ಕೃತ್ಯಕ್ಕೆ ಪರಂಪರೆಯಿಂದ ಶಾಂತಿಯುತವಾಗಿ ನಡೆದು ಕೊಂಡು ಬಂದಿದ್ದ ಕನಕದಾಸರ ಜಯಂತ್ಯುತ್ಸವ ಜಾತಿ ಬಣ್ಣದಿಂದ ನಿಂತು ಹೋಗಿರುವುದು ಸೋಜಿಗದ ಸಂಗತಿ. ಚಿಕ್ಕನಾಯಕನಹಳ್ಳಿ ಇತಿಹಾಸ ತಿರುವಿ ಹಾಕಿದರೇ ಜಾತಿ-ಜಾತಿಗಳ ಮಧ್ಯೆ ಅಥವಾ ಅಲ್ಪ ಸಂಖ್ಯಾತರ ಮೇಲೆ ಗಲಭೆ ಸೃಷ್ಟಿಸಿಲ್ಲ. ಎಲ್ಲಾ ವರ್ಗದವರ ಜಯಂತ್ಯುತ್ಸವಗಳು ಶಾಂತಿಯುತವಾಗಿ ನಡೆದಿವೆ. ರಾಜ್ಯದಲ್ಲಿ ಟಿಪ್ಪು ಜಯಂತಿಗೆ ವಿರೋಧವಿದ್ದ ವೇಳೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹಿಂದೂ -ಮುಸ್ಲಿಂ ಟಿಪ್ಪು ಜಯಂತಿ ಆಚರಿಸಿರುವ ಉದಾಹರಣೆ ಇದೆ.
ಅಂತಹದರಲ್ಲಿ ಹುಳಿಯಾರಿನ ನಾಮಫಲಕ ಗಲಾಟೆಯನ್ನು ತಾಲೂಕು ಆಡಳಿತ ಇಷ್ಟೊಂದು ಗಂಭೀರವಾಗಿ ಪರಿಗಣಿಸಿ ಕೃತಕ ಅತಂಕವನ್ನು ಏಕೆ ಸೃಷ್ಟಿಸಿದೆ?. ಗಲಾಟೆ, ಗಲಭೆ ನಡೆಯದಿದ್ದರೂ 144 ಸೆಕ್ಷನ್ ಜಾರಿಗೊಳಿಸಿರುವುದು ಸರಿ ಇದೆಯೇ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.
ಸಾಮರಸ್ಯಕ್ಕೆ ಪೆಟ್ಟು:ಕನಕದಾಸರ ಜಯಂತಿ ರದ್ದು: ತಾಲೂಕಿನಲ್ಲಿ ಕನಕ ಜಯಂತಿ ಸರ್ಕಾರದ ಕಾರ್ಯಕ್ರಮವಾಗುವ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. 2006ರಲ್ಲಿ ಹುಳಿಯಾರಿನ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಬಳಿಯ ವೃತ್ತಕ್ಕೆ ಕನಕದಾಸರ ವೃತ್ತ ಎಂದು ಅನುಮೋದನೆ ಪಡೆದ ಮೇಲೆ, ಶಿವಕುಮಾರ ಸ್ವಾಮಿ ವೃತ್ತ ಎಂದು ಮರುನಾಮಕರಣ ಮಾಡುವ ಅವಶ್ಯಕತೆ ಏನಿತ್ತು. ಕನಕದಾಸ, ಶಿವ ಕುಮಾರಸ್ವಾಮೀಜಿ ಇಬ್ಬರೂ ಎಲ್ಲರಿಗೂ ಆದರ್ಶ. ಆದರೆ, ಮತ್ತೂಬ್ಬರ ಹೆಸರನ್ನು ವೃತ್ತಕ್ಕೆ ಇಡಬೇಕು ಎಂಬ ಆಲೋಚನೆ ಮಾಡಿರುವುದು ಸರಿಯೇ?. ಇದೊಂದು ಜಾತಿಸಾಮರಸ್ಯಕ್ಕೆ ಮಾಡಿದ ದೊಡ್ಡ ಪೆಟ್ಟಾಗಿದೆ ಎಂಬುದು ಗ್ರಾಮಸ್ಥರ ಅಭಿಮತ.
ಖಂಡನೀಯ: ಆಡಳಿತದಿಂದ ಕೃತಕ ಭೀತಿ ನಿರ್ಮಾಣ ಚಿಕ್ಕನಾಯಕನಹಳ್ಳಿ ಶಾಂತಿಗೆ ಹೆಸರಾಗಿದೆ. ತಾತಯ್ಯನನ್ನೂ ಸರ್ವಧರ್ಮ ದವರೂ ಆರಾಧಿಸುವಂತಹ ನಿಜ ಸ್ಥಳವಾಗಿದೆ. ಸಣ್ಣ ನಾಮಫಲಕದ ಗಲಾಟೆ ಕಳೆದ 3-4 ದಿನಗಳಿಂದ ಜನತೆಯನ್ನು ಆತಂಕಕ್ಕೆ ದೂಡಿದೆ. ಕನಕ ಜಯಂತಿ ಆಚರಣೆ ಮಾಡದಂತೆ ಹುಳಿ ಯಾರಿನಲ್ಲಿ 144 ಸೆಕ್ಷನ್ ಜಾರಿ ಮಾಡಿ ರುವುದೂ ಖಂಡನೀಯವಾಗಿದೆ. ಮೊದಲು ಗಲಾಟೆ ಸೃಷ್ಟಿ ಮಾಡಿದವರ ಶಾಂತಿ ಸಭೆ ನಡೆಸಿ, ಎಲ್ಲಾ ಧರ್ಮ ದವರೂ ಸಮಾನರು ಎಂಬ ಸಂದೇಶವನ್ನು ಸಾರಬೇಕಿದೆ.
ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಪೊಲೀಸ್ ಇಲಾಖೆಯ ಇಂಟೆಲಿಜೆನ್ಸ್ ವರದಿಯ ಆಧಾರದ ಮೇಲೆ ಹುಳಿಯಾರಿ ನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಶಾಂತಿಸಭೆ ನಡೆಸುವ ಮೂಲಕ ಎಲ್ಲಾ ಭಾವನೆಗಳಿಗೆ ಬೆಲೆ ಕೊಡುವ ಉದ್ದೇಶ ನಮ್ಮದಾಗಿದೆ. ಮುಂದಿನ ಕೆಲ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ.
–ತೇಜಸ್ವಿನಿ, ತಹಶೀಲ್ದಾರ್
-ಚೇತನ್