ಶಿರಸಿ: ಮಲೆನಾಡಿನ ಸಮುದಾಯದ ಜ್ವಲಂತ ಸಮಸ್ಯೆಯ ಕುರಿತು ಬೆಳಕು ಚೆಲ್ಲುವ ನಮ್ ನಾಣಿ ಮದ್ವೆ ಪ್ರಸಂಗ ಎನ್ನುವ ಸಿನೆಮಾ ಚಿತ್ರೀಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸಲಾಗುತ್ತದೆ ಎಂದು ಚಿತ್ರದ ನಿರ್ದೇಶಕ ಹೇಮಂತ ಹೆಗಡೆ ತಿಳಿಸಿದರು.
ಅವರು ಗುರುವಾರ ನಗರದ ಸಾಮ್ರಾಟದಲ್ಲಿ ಸುದ್ದಿಗೋಷ್ಟಿ ನಡೆಸಿ, ಜಿಲ್ಲೆಯ ಕಲಾವಿದರಿಗೂ ವೇದಿಕೆ ನೀಡುವ ಆಶಯದಲ್ಲಿ ಜ.2 ರಂದು ಜಿಲ್ಲೆಯ ಪ್ರತಿಭೆಗಳಿಗಾಗಿ ಆಡಿಶನ್ ನಡೆಸಲಾಗುತ್ತದೆ. ಬೆಳಿಗ್ಗೆ 9ರಿಂದ ಸಾಮ್ರಾಟ ಅತಿಥಿ ಗೃಹಯದಲ್ಲಿ ಆಡಿಶನ್ ನಡೆಯಲಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಕುಮಟಾ ಹೊನ್ನಾವರದಿಂದಲೂ ಆಸಕ್ತ ಕಲಾವಿದರು ಆಡಿಶನ್ ಬರಬಹುದಾಗಿದೆ. ಆಯ್ಕೆಯಾದ ಕಲಾವಿದರಿಗೆ ಚಿತ್ರದಲ್ಲಿ ಅತ್ಯುತ್ತಮ ಪಾತ್ರ ನಿರ್ವಹಣೆಗೆ ಅವಕಾಶ ನೀಡಲಾಗುವುದು ಎಂದರು.
ಅಪ್ಪಟ ಹಳ್ಳಿಯ ಸೊಗಡನ್ನು ಸಿನೆಮಾ ಹೊಂದಿದ್ದು, ಜಿಲ್ಲೆಯ ಹಳ್ಳಿಗಾಡಿನ ರೈತರ ಮಕ್ಕಳ ಮದುವೆ ಸಮಸ್ಯೆಯ ಕುರಿತು ಬೆಳಕು ಚೆಲ್ಲುವ ಹಾಸ್ಯ ಭರಿತ ಸಿನೆಮಾ ಆಗಿದೆ. ಈ ಚಿತ್ರದ ಮೂಲಕ ಉತ್ತಮ ಸಂದೇಶ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.
ಫೆಬ್ರವರಿ ಮೊದಲ ವಾರದಿಂದ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ದೊಡ್ಡ ತಾರಾರಣ ಹೊಂದಿದೆ. ಯಾವುದೇ ಅಶ್ಲೀಲತೆ ಇಲ್ಲದೇ ನಕ್ಕು ನಗಿಸುವ ಹಾಸ್ಯಭರಿತ ಚಿತ್ರ ಇದಾಗಲಿದೆ. ಇದರ ಜೊತೆಗೆ ಈ ಚಿತ್ರದ ಮೂಲಕ ಸಾಮಾಜಿಕವಾಗಿ ಉತ್ತಮ ಸಂದೇಶ ನೀಡುವ ಪ್ರಯತ್ನ ನಡೆದಿದೆ.
ಶಿರಸಿಯ ಭಾಗದಲ್ಲಿ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಅಂದಾಜು ಎರಡು ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ರವಿ ಮೂರೂರು ಹಾಗೂ ಸತೀಶ ಬಾಬು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕೃಷ್ಣ ಬಂಜನ್ ಛಾಯಾಗ್ರಣ ಮಾಡಲಿದ್ದಾರೆ. ಲೋಪಾ ಮುದ್ರಾ ರಾವತ್, ಶ್ರೇಯಾ ವಸಂತ, ಶ್ರುತಿ ನಂದೀಶ ನಾಯಕಿಯರಾಗಿ ನಟಿಸಲಿದ್ದಾರೆ. ಪದ್ಮಜಾ ರಾವ್, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಸಾದು ಕೋಕಿಲಾ ಸೇರಿ ದೊಡ್ಡ ತಾರಾಗಣ ಇರಲಿದೆ ಎಂದರು.
ಈ ಸಂದರ್ಭದಲ್ಲಿ ಕಲಾವಿದ ರವಿ ಮೂರೂರು, ಯುವ ನಟ ರಿತೇಶ ಗೌಡ ಮತ್ತಿತರರು ಇದ್ದರು.