ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ 63ನೇ ಸೆಷನ್ಸ್ ನ್ಯಾಯಾಲಯ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದೆ.
ಮಂಗಳವಾರ ನಲಪಾಡ್ ಅರ್ಜಿ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ನ್ಯಾ. ಪರಮೇಶ್ವರ ಪ್ರಸನ್ನ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿ ಆದೇಶಿಸಿದ್ದಾರೆ. ಪ್ರಕರಣದ ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ವಾದ ಮಂಡಿಸಿ, ಪ್ರಕರಣ ಗಂಭೀರವಾಗಿದ್ದು, ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು. ಪ್ರಕರಣದ ತನಿಖೆ ಮುಕ್ತಕಾಯಗೊಂಡಿದ್ದು, ದೋಷಾರೋಪ ಪಟ್ಟಿ ಕೂಡ ಸಲ್ಲಿಸಲಾಗಿದೆ.
ಆದರೆ, ಪ್ರಕರಣದಲ್ಲಿ ಮತ್ತೂಬ್ಬ ಆರೋಪಿಯನ್ನು ಬಂಧಿಸಬೇಕಿದೆ. ಅಲ್ಲದೆ, ಮೊಹಮ್ಮದ್ ಪ್ರಭಾವಿ ವ್ಯಕ್ತಿಯ ಪುತ್ರನಾಗಿದ್ದಾನೆ. ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಸಮಾಜದ ಹಿತದೃಷ್ಟಿಯಿಂದ ಇಂತಹ ಗೂಂಡಾಗಳಿಗೆ ಜಾಮೀನು ನೀಡಬಾರದು.
ಇದೇ ನ್ಯಾಯಾಲಯ ಪ್ರಕರಣದ ಗಂಭೀರತೆ ಅರಿತು ಈ ಹಿಂದೆ ಜಾಮೀನು ನಿರಾಕರಿಸಲಾಗಿತ್ತು. ಹೈಕೋರ್ಟ್ ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿಯನ್ನು ವೀಕ್ಷಿಸಿ ಪ್ರಕರಣ ಗಂಭೀರ ಸ್ವರೂಪವಾಗಿದೆ ಎಂದು ಜಾಮೀನು ನಿರಾಕರಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಲಪಾಡ್ ಪರ ವಕೀಲ ಉಸ್ಮಾನ್, ಎಸ್‌ಪಿಪಿ ಶ್ಯಾಮ್ ಸುಂದರ್ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ.
ಈ ಹಿಂದೆ ಚಾರ್ಜ್‌ಶೀಟ್ ಸಲ್ಲಿಕೆಯಾಗಲಿ ಅಂತ ಹೇಳಿದ್ದರು. ಅದರಂತೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಸಾಕ್ಷಿದಾರರ ಹೇಳಿಕೆ ದಾಖಲಿಸಲಾಗಿದೆ. ಹೀಗಾಗಿ ಇಲ್ಲಿ ಪ್ರಭಾವ ಬೀರುವ ಅವಕಾಶವೇ ಸೃಷ್ಟಿ ಆಗುವುದಿಲ್ಲ. ಈ ಪ್ರಕರಣದಲ್ಲಿ ಅಗತ್ಯವಿರುವ ಸಾಕ್ಷ್ಯ ಗಳ ಹೇಳಿಕೆಯನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಜಾಮೀನು ಮಂಜೂರು ಮಾಡಬಹುದು ಎಂದು ವಾದ ಮಂಡಿಸಿದರು.