Advertisement
ಕಾಂಗ್ರೆಸ್‌ನ 12 ಮತ್ತು ಜೆಡಿಎಸ್‌ನ 3 ಶಾಸಕರು ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಮೈತ್ರಿ ಸರಕಾರ ಪತನವಾಗಿ ಬಿಜೆಪಿ ಅಧಿಕಾರ ಹಿಡಿಯಿತು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಳಿನ್ ಕುಮಾರ್ ಕಟೀಲು ಅವರಿಗೆ ಉಪ ಚುನಾವಣೆ ಮೊದಲ ಸವಾಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ರಾಜೀನಾಮೆ ನೀಡಿದ ಶಾಸಕರ 15 ವಿಧಾನಸಭಾ ಕ್ಷೇತ್ರಗಳಿಗೆ (ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಹೊರತುಪಡಿಸಿ) ಚುನಾವಣ ಆಯೋಗ ಉಪ ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಸುಪ್ರೀಂ ಕೋರ್ಟ್ ಕೂಡ ಅನರ್ಹಗೊಂಡಿದ್ದ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿತು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಪಕ್ಷದ ಮುಖಂಡರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿ ಸಂಘಟನೆ ಕಾರ್ಯ ಆರಂಭಿಸಿದ್ದರು. ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಜಿಲ್ಲಾ ಪದಾಧಿಕಾರಿಗಳ ಸಭೆ ಕರೆದು, ಸಂಘಟನೆಯನ್ನು ಗಟ್ಟಿಮಾಡುವ ನಿಟ್ಟಿನಲ್ಲಿ ತಮ್ಮದೆ ಆದ ಕಾರ್ಯತಂತ್ರವನ್ನು ರೂಪಿಸಿದರು. ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಸಭೆ ಕರೆದು ಪಕ್ಷವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನವನ್ನು ನೀಡಿದ್ದರು. ಇದರ ಜತೆಗೆ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಮತ್ತು ಪಕ್ಷದಿಂದ ಹೊರ ಹೋಗಿರುವವರನ್ನು ಮರಳಿ ಪಕ್ಷಕ್ಕೆ ಕರೆತರುವಲ್ಲಿಯೂ ಅವರು ಯಶಸ್ವಿಯಾದರು. ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಹಿತವಾಗಿ ಸಹಿತವಾಗಿ ಪಕ್ಷದ ಪ್ರಮುಖ ನಾಯಕರು ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರ ಆರಂಭಿಸಿದ್ದರು. ಆದರೆ ಈ ವೇಳೆ ಮೂಲ ಬಿಜೆಪಿ ಕಾರ್ಯಕರ್ತರು ಮತ್ತು ಪಕ್ಷಕ್ಕೆ ವಲಸೆ ಬಂದು ಟಿಕೆಟ್ ಪಡೆದಿರುವ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಸಮನ್ವಯ ಇರಲಿಲ್ಲ. ಅಭ್ಯರ್ಥಿಗಳ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸಿ, ಯಾವುದೇ ರೀತಿಯಲ್ಲೂ ಗೊಂದಲ ಇಲ್ಲದೆ ಚುನಾವಣೆ ಎದುರಿಸಿ, ಗರಿಷ್ಠ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಹೊಸ ಸಾಧನೆ ಮಾಡಿದ್ದರ ಹಿಂದೆ ನಳಿನ್ ಕುಮಾರ್ ಕಟೀಲು ಅವರ ಶ್ರಮ ಸಾಕಷ್ಟಿದೆ.
Related Articles
Advertisement
-ರಾಜು ಖಾರ್ವಿ ಕೊಡೇರಿ