Advertisement

ಯಾರಿಗೂ ಹೇಳ್ಬೇಡಿ ಎನ್ನುತ್ತಲೇ ‘ಈ ಮೂವರಲ್ಲಿ ಯಾರೂ ಸಿಎಂ ಆಗಬಹುದು’ಎಂದ ನಳಿನ್ ಕಟೀಲ್!

08:27 AM Jul 19, 2021 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್‌ ಆಗಿದೆ. ತಮ್ಮ ಆಪ್ತರೊಂದಿಗೆ ಅವರು ತುಳುವಿನಲ್ಲಿ ಮಾತನಾಡಿದ್ದಾರೆ ಎನ್ನಲಾದ ಈ ಆಡಿಯೋದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ.

Advertisement

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಈ ಆಡಿಯೋ ಸಂಚಲನ ಸೃಷ್ಟಿಸಿದೆ. ತುಳುವಿನಲ್ಲಿರುವ ಆಡಿಯೋದಲ್ಲಿ, “ ಯಾರಿಗೂ ಹೇಳ್ಬೇಡಿ, ಜಗದೀಶ್ ಶೆಟ್ಟರ್‌ ಮತ್ತು ಈಶ್ವರಪ್ಪ ತಂಡವನ್ನು ತೆಗೆದು ಹೊಸ ತಂಡ ಕಟ್ಟಲಾಗುವುದು. ಮೂರು ಹೆಸರಿದೆ, ಮೂವರಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಯಾರೇ ಆದರೂ ನಮಗೇ ಚಾನ್ಸ್, ಇಲ್ಲಿಯವರನ್ನು ಯಾರನ್ನೂ ಮಾಡಲ್ಲ ಡೆಲ್ಲಿಯಿಂದಲೇ ಎಲ್ಲಾಆರ್ಡರ್” ಎಂದು ಈ ಆಡಿಯೋದಲ್ಲಿ ಕೇಳಿಬಂದಿದೆ. ಆದರೆ ಆಡಿಯೋದ ಖಚಿತತೆ ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:ನಾಯಕತ್ವ ಬದಲಾವಣೆ; ಮುಂದುವರಿದ ನಿಗೂಢತೆ : ಜುಲೈ 26ರ ಕೌತುಕ

ಆಡಿಯೋ ವೈರಲ್ ಆದ ಬೆನ್ನಲ್ಲೇ, “ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ಮಾದರಿಯಲ್ಲಿ ನಕಲಿ ಆಡಿಯೋ ಒಂದನ್ನು ಯಾರೋ ಕಿಡಿಗೇಡಿಗಳು ವಾಟ್ಸ್ ಆ್ಯಪ್‍ನಲ್ಲಿ ಹರಿಬಿಟ್ಟಿದ್ದು, ಇದರ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕು” ನಳಿನ್‍ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಆದರೆ ಆಡಿಯೋದಲ್ಲಿರುವ ಮಾತುಗಳು ಬಿಜೆಪಿಯಲ್ಲಿನ ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗಿದೆ. ಈಗಾಗಲೇ  ಜು.26ರ ಲೆಕ್ಕಾಚಾರ ಜೋರಾಗಿದ್ದು, ಅದರ ಬೆನ್ನಲ್ಲೇ ಈ ಆಡಿಯೋ ಬಿಎಸ್ ವೈ ವಿರೋಧಿ ಪಾಳಯಕ್ಕೆ ಸಂತಸ ಉಂಟು ಮಾಡಿದೆ.

Advertisement

ಯಾರು ಆ ಮೂವರು?: ನಳಿನ್ ಕುಮಾರ್ ಅವರದೆನ್ನಲಾದ ಆಡಿಯೋದಲ್ಲಿ ಹೇಳಿರುವಂತೆ ಸಿಎಂ ಹುದ್ದೆಗೆ ಮೂವರ ಹೆಸರಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರೆ, ಪಕ್ಷದ ವರಿಷ್ಠರು ಪ್ರಹ್ಲಾದ್‌ ಜೋಶಿ, ಲಕ್ಷ್ಮಣ ಸವದಿ ಮತ್ತು ಮುರುಗೇಶ್‌ ನಿರಾಣಿ ಅವರಲ್ಲಿ ಒಬ್ಬರಿಗೆ ಹುದ್ದೆ ನೀಡುವ ಬಗ್ಗೆ ಆಸಕ್ತಿ ವಹಿಸಿದ್ದಾರೆ ಎಂದು ಭಿನ್ನರ ಮೂಲಗಳು ಹೇಳಿವೆ. ಆದರೆ ವರಿಷ್ಠರು ಬಸವರಾಜ ಬೊಮ್ಮಾಯಿ ಹೆಸರು ಪ್ರಸ್ತಾವಿಸಿದ್ದಾರೆ ಎಂದು ಬಿಎಸ್‌ವೈ ಆಪ್ತ ಮೂಲಗಳು ತಿಳಿಸಿವೆ.

ಜುಲೈ 26ರಂದು ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣವಾಗುತ್ತದೆ. ಅಂದರ ಪ್ರಯುಕ್ತ ಬಿಎಸ್ ವೈ ಪಕ್ಷದ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಸಿಎಂ ಮತ್ತೆ ದೆಹಲಿಗೆ ಹೋಗಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜ್ಯ ರಾಜಕೀಯ ಮತ್ತೆ ‘ಎಡ್ಜ್ ಆಫ್ ದಿ ಸೀಟ್’ ಪರಿಸ್ಥಿತಿಗೆ ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next