ಬೆಂಗಳೂರು: ಸಚಿವರೆಲ್ಲರೂ ಮಾಧ್ಯಮದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇಲಾಖಾ ಕೆಲಸವನ್ನು ವೈಯಕ್ತಿಕ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ, ಇನ್ನು ಮುಂದೆ ಬೊಮ್ಮಾಯಿ ಸರಕಾರದ ಸಾಧನೆ ಎಂದೇ ಬಿಂಬಿಸಬೇಕು….
ಹೀಗೆಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಚಿವರಿಗೆ ಕಟ್ಟಪ್ಪಣೆ ನೀಡಿದ್ದಾರಂತೆ! ಸಚಿವರ ಮಾಧ್ಯಮ ಸಮನ್ವಯಕಾರರ ಜತೆ ಎರಡು ಗಂಟೆ ಕಾಲ ನಡೆಸಿದ ಸಭೆಯಲ್ಲಿ ಕಟೀಲ್ ಈ ನಿರ್ದೇಶನ ನೀಡಿದ್ದಾರೆ.
ಇದು ಚುನಾವಣೆ ವರ್ಷ. ಸರಕಾರದ ಬ್ರ್ಯಾಂಡ್ ಬೆಳೆಸಬೇಕೆ ವಿನಾ ಸಚಿವರ ಬ್ರ್ಯಾಂಡ್ ಅಲ್ಲ. ಇನ್ನು ಮುಂದೆ ಮಾಧ್ಯಮ, ಸೋಷಿಯಲ್ ಮೀಡಿಯಾದಲ್ಲಿ ಬೊಮ್ಮಾಯಿ ಸರಕಾರದ ಸಾಧನೆ ಎಂದು ಕಡ್ಡಾಯವಾಗಿ ಹೇಳಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಮಾಜಿ ಸಿಎಂ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಎಂದು ಎಲ್ಲ ಕಡೆ ಕಡ್ಡಾಯವಾಗಿ ಮಾತನಾಡಬೇಕು ಎಂದು ಕಟೀಲ್ ಕಟ್ಟಪ್ಪಣೆ ನೀಡಿದ್ದಾರೆ.
ಇದನ್ನೂ ಓದಿ:ಡಿಕೆಶಿಗೆ ಬೆಳಗಿನ ಉಪಹಾರಕ್ಕೆ ಆಹ್ವಾನಿಸಿದ ಸಿದ್ದರಾಮಯ್ಯ! ಏನಿದು ಸಿದ್ದರಾಮ ತಂತ್ರ?
ಕೆಲ ಸಚಿವರು ಬೊಮ್ಮಾಯಿಗಿಂತಲೂ ಹೆಚ್ಚಾಗಿ ವೈಯಕ್ತಿಕ ಬ್ರ್ಯಾಂಡಿಂಗ್ ಮಾಡಿಕೊಳ್ಳುತ್ತಿರುವುದು ಸಿಎಂ ಕಚೇರಿಗೆ ಅಪಥ್ಯವಾಗಿದೆ. ಈ ಸಂಬಂಧ ಪಕ್ಷದ ಹಿರಿಯರಿಗೆ ದೂರು ನೀಡಲಾಗಿದೆ. ಒಟ್ಟಾರೆ ಸರಕಾರದ ಇಮೇಜ್ ಹೆಚ್ಚಬೇಕೆ ವೈಯಕ್ತಿಕವಲ್ಲ ಎಂದು ಸೂಚನೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ಪಕ್ಷ ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಯಡಿಯೂರಪ್ಪನವರನ್ನು ಪಕ್ಷ ಕೈ ಬಿಟ್ಟಿಲ್ಲ ಎಂಬುದನ್ನು ತೋರಿಸಲು ಈ ಸೂಚನೆ ನೀಡಲಾಗಿದೆ.